Wednesday, December 4, 2024

ಕಠಿಣ ಶ್ರಮ, ಬದ್ಧತೆಯಿಂದ ಕ್ರೀಡೆಯಲ್ಲಿ ಯಶಸ್ಸು:ಅಲ್ಬರ್ಟ್‌ ಕ್ರಾಸ್ತಾ

ಕುಂದಾಪುರ: ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಬದ್ಧತೆ ಹಾಗೂ ಗೆಲ್ಲಬೇಕೆಂಬ ಛಲ ಅಗತ್ಯ. ಉತ್ತಮ ಆಹಾರ ಕ್ರಮ, ಜೊತೆಯಲ್ಲಿ ಕೆಟ್ಟ ಚಟಗಳಿಂದ ದೂರ ಉಳಿಯಬೇಕು ಎಂದು ಕುಂದಾಪುರದ ಹಂಗಳೂರಿನ ಸಂತ ಪಿಯೂಸ್‌‌ ಚರ್ಚ್‌ನ ಧರ್ಮಗುರು ರೆ.ಫಾ. ಅಲ್ಬರ್ಟ್‌ ಕ್ರಾಸ್ತಾ ಅಭಿಪ್ರಾಯಪಟ್ಟರು. Hard work and Commitment will help to achieve in sports: Rev. Father Albert Crasta.

ಅವರು ಇಲ್ಲಿನ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್‌ ಕಿಟ್‌ ವಿತರಣಾ ಸಮಾರಂಭಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ತಂಡ ನೀರಜ್‌ ಚೋಪ್ರಾ ಅವರ ಬದುಕಿನ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಕ್ರೀಡೆಯಲ್ಲಿ ಯಶಸ್ಸಿಗಾಗಿ ಚಿಕ್ಕಂದಿನಿಂದಲೇ ನಿರಂತರ ಪ್ರಯತ್ನ ಮಾಡಬೇಕಾಗುತ್ತದೆ. ಗೆಲ್ಲುವ ಛಲ , ಬದ್ಧತೆ ಜಯದ ಹಾದಿಯಲ್ಲಿ ಪ್ರಮುಖವಾಗಿರುತ್ತದೆ. ಉತ್ತಮ ಆಹಾರ ಕ್ರಮವೂ ಅಗತ್ಯ. ಆಹಾರದ ವಿಚಾರದಲ್ಲಿ ತ್ಯಾಗ ಮನೊಭಾವ ಇರಬೇಕು. ಅದರಕ್ಕೆ ಸಿಹಿ ಎಂದು ಉದರಕ್ಕೆ ಕಹಿಯಾಗುವ ಆಹಾರವನ್ನು ಕ್ರೀಡಾಪಟುಗಳು ತಿನ್ನಬಾರದು. ಮನೆಯಲ್ಲಿ ಮಾಡುವ ಆಹಾರವನ್ನೇ ತಿನ್ನಬೇಕು. ಮೊಬೈಲ್‌ನಿಂದ ದೂರ ಇರಬೇಕು ಎಂದು ತಿಳಿ ಹೇಳಿದರು.

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಸ್ಥಳೀಯ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 25 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್‌ ತರಬೇತಿ ನೀಡುತ್ತಿದ್ದು, ಇದು ಮುಂದಿನ ಹಲವು ತಿಂಗಳ ಕಾಲವೂ ನಡೆಯುತ್ತಿರುತ್ತದೆ. ಬಡಾಕೆರೆಯ ಹಳೆ ವಿದ್ಯಾರ್ಥಿ ಹಾಗೂ ಒಮನ್‌ನಲ್ಲಿ ಉದ್ಯೋಗಿಯಾಗಿರುವ ಅಜಿತ್‌ ಐವಾನ್‌ ಡಿʼಕೋಸ್ಟಾ ಅವರು ತನ್ನೂರಿನ ಮಕ್ಕಳ ಕ್ರೀಡಾ ಬದುಕಿಗೆ ನೆರವಾಗಬೇಕು, ಹಳ್ಳಿಯಲ್ಲಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಬೇಕು ಎಂಬ ಉದ್ದೇಶದಿಂದ ಅಕಾಡೆಮಿಯನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಕುಂದಾಪುರದ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬುದು ಆಶಯವಾಗಿದೆ. ಕನ್ನಡ ಶಾಲಾ ಮಕ್ಕಳಿಗೆ ಈ ನೆರವು ನೀಡವ ಮೂಲಕ ಅಜಿತ್‌ ಅದ್ಭುತ ಕಾರ್ಯ ಮಾಡಿದ್ದಾರೆ.

25ಕ್ಕೂ ಹೆಚ್ಚು ಮಕ್ಕಳಿಗೆ ಉತ್ತಮ ಗುಣಮಟ್ಟದ ಬ್ಯಾಟ್‌, ಶೂ, ಸಾಕ್ಸ್‌, ಟಿ ಶರ್ಟ್‌ ನೀಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೋಟ ಆರಕ್ಷಕ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ, ಹತ್ತು ಬಾರಿ ಕರ್ನಾಟಕದ ಬಲಿಷ್ಠ ಮಹಿಳೆ ಪ್ರಶಸ್ತಿಗೆ ಭಾಜನರಾಗಿರುವ, ಏಕಲವ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಸುಧಾ ಪ್ರಭು ಅವರು ಮಾತನಾಡಿ, “ಓದಿನ ಜೊತೆಯಲ್ಲಿ ಕ್ರೀಡೆಯಲ್ಲೂ ಯಶಸ್ಸು ಸಾಧಿಸಬೇಕು. ಇಂದು ಕ್ರೀಡಾ ಸಾಧಕರಿಗೆ ವಿವಿಧ ಇಲಾಖೆಗಳಲ್ಲಿ ಉತ್ತಮ ಉದ್ಯೋಗ ಸಿಗುತ್ತಿದೆ. ಆರೋಗ್ಯದ ಜೊತೆಯಲ್ಲಿ ಸಮಾಜದಲ್ಲಿ ಉತ್ತಮ ಗೌರವವೂ ಸಿಗುತ್ತದೆ. ನಿಮ್ಮ ಬಿಡುವಿನ ಸಮಯವನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಯಶಸ್ಸಿನ ಹಾದಿ ಸುಗಮವಾಗುತ್ತದೆ. ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಒಂದು ಉತ್ತಮವಾದ ಕಾರ್ಯವನ್ನು ಈ ಪ್ರದೇಶದಲ್ಲಿ ಮಾಡಿದೆ. ಉತ್ತಮ ತರಬೇತುದಾರರೂ ಇದ್ದಾರೆ. ಇಂಥ ಚಿಕ್ಕ ವಯಸ್ಸಿನಲ್ಲೇ ನಿಮಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಂಡು, ಯಶಸ್ಸು ಕಾಣಿರಿ,” ಎಂದು ಶುಭ ಹಾರೈಸಿದರು.

ಈ ಬಾರಿಯ ಉಡುಪಿ ಜಿಲ್ಲೆಯ ಶ್ರೇಷ್ಠ ಶಿಕ್ಷಕರೆಂಬ ಗೌರವಕ್ಕೆ ಪಾತ್ರರಾಗಿರುವ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯರಾದ ಸೀತಾರಾಮ ಶೆಟ್ಟಿ ಅವರು ಮಾತನಾಡಿ, “ಅಜಿತ್‌ ಅವರು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ, ನಮ್ಮ ಶಾಲೆಗೆ ಅವರು ಈ ರೀತಿಯ ಉಚಿತ ಕೊಡುಗೆಯನ್ನು ನೀಡಿದ್ದು ನಿಜವಾಗಿಯೂ ಇಲ್ಲಿನ ವಿದ್ಯಾರ್ಥಿಗಳ ಅದೃಷ್ಟ. ಇದು ಬಡ ಮಕ್ಕಳು ಆಡುವ ಕ್ರೀಡೆಯಲ್ಲ. ಆದರೂ ನಮ್ಮ ಶಾಲೆಯ ಮಕ್ಕಳಿಗೆ ಈ ಭಾಗ್ಯ ಸಿಕ್ಕಿದೆ. ಅವರಿಗೂ ಉತ್ತಮ ಗುಣ ಮಟ್ಟದ ಶೂ ಧರಿಸಿ, ಉತ್ತಮ ಬ್ರಾಂಡ್‌ನ ಬ್ಯಾಟ್‌ ಹಿಡಿದು, ಅಂತಾರಾಷ್ಟ್ರೀಯ ಗುಣ ಮಟ್ಟದ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಉತ್ತಮ ತರಬೇತುದಾರರೂ ಇದ್ದಾರೆ. ಇದರ ಸದುಪಯೋಗನ್ನು ಪಡೆದುಕೊಂಡು ಉತ್ತಮ ಆಟಗಾರರಾಗಿ ಹೊರಹೊಮ್ಮಬೇಕು. ಇದಕ್ಕೆ ಹೆತ್ತವರು ಕೂಡ ಪ್ರೋತ್ಸಾಹ ನೀಡಬೇಕು,” ಎಂದು ಆಶಿಸಿದರು.

ಕುಂದಾಪುರದ ಜನಪ್ರಿಯ ಪೀಠೋಪಕರಣ ಮಳಿಗೆ “ಪ್ಲೆಸೆಂಟ್‌” ನ ಮ್ಯಾನೆಜಿಂಗ್‌ ಪಾರ್ಟ್ನರ್‌ ಆಗಿರುವ ಅಬ್ದುಲ್‌‌ ಬಶೀರ್‌ ಮಾತನಾಡಿ, “ಕುಂದಾಪುರದಂಥ ಗ್ರಾಮೀಣ ಪ್ರದೇಶದಲ್ಲಿ ಇಷ್ಟು ಉತ್ತಮ ಗುಣಮಟ್ಟದ ಅಕಾಡೆಮಿ ಇರುವುದು ಹೆಮ್ಮೆಯ ಸಂಗತಿ. ಕನ್ನಡ ಶಾಲೆಯ ಮಕ್ಕಳಿಗೆ ಇಲ್ಲಿ ಉಚಿತವಾಗಿ ತರಬೇತಿ ನೀಡಲು, ಅದರಲ್ಲೂ ಎಲ್ಲ ಸೌಲಭ್ಯಗಳನ್ನು ನೀಡಿ ತರಬೇತಿ ನೀಡುತ್ತಿರುವುದು ಅದ್ಭುತ ಕಾರ್ಯ. ಮಕ್ಕಳು ಇದರ ಸದಯಪಯೋಗ ಪಡೆದುಕೊಳ್ಳಬೇಕು. ಇಂದು ಕ್ರೀಡೆಯಲ್ಲಿ ಸಾಧನೆ ಮಾಡಿದರವಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗ ಗಳಿಸಲೂ ಉತ್ತಮ ಅವಕಾಶ ಇದೆ. ಮುಂದಿನ ದಿನಗಳಲ್ಲಿ ಈ ಅಕಾಡೆಮಿಯಿಂದ ಉತ್ತಮ ಆಟಗಾರರು ಮೂಡಿ ಬರುವಂತಾಗಲಿ,” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ನಿದ್ರೇಶಕರಾದ ಕಾಸೆಸ್‌ ಡಿʼಕೋಸ್ಟಾ ಅವರು ಮಕ್ಕಳಿಗೆ ಬ್ಯಾಡ್ಮಿಂಟನ್‌ ಕಿಟ್‌ ವಿತರಿಸಿದರು. ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರವನ್ನು ವಿನ್ಯಾಸಗೊಳಿಸಿದ ಮಂಗಳೂರಿನ ರಾಯಲ್‌ ಡಿʼಸಿಲ್ವಾ ಅವರ ತಾಯಿ ಐವಿ ಡಿʼಸಿಲ್ವಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಪ್ರಧಾನ ಕೋಚ್‌ ಕೊಡಗಿನ ಸೋಮಣ್ಣ ನಂಜಪ್ಪ ಪ್ರಾಸ್ತಾವಿಕ ಮಾತನಾಡಿದರು. ರಾಯಲ್‌ ಡಿʼಸಿಲ್ವಾ ಸ್ವಾಗತಿಸಿದರು. ಅಕಾಡೆಮಿಯ ಆಡಳಿತಾಧಿಕಾರಿ ನಿಧೀಶ್‌ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು.

Related Articles