Sunday, September 8, 2024

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಇಂಡಿಯನ್‌ ಏರ್‌ಫೋರ್ಸ್‌ ಉದ್ಯೋಗಿ ಮಂಗಳೂರಿನ ಮಿಜೋ ಚಾಕೋ ಕುರಿಯನ್‌ Mijo Chako Kuriyan ಅವರ ಕ್ರೀಡಾ ಬದುಕಿನ ಹೆಜ್ಜೆ ಯುವಕರಿಗೆ ಆದರ್ಶ ಹಾಗೂ ಸ್ಫೂರ್ತಿದಾಯಕ. He left the Mechanical Engineering and became Olympian a inspirational story of Indian athlete Mijo Chako Kuriyan.

ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮಿಜೋ ಚಾಕೋ ಕುರಿಯನ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 4X400 ರಿಲೇಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪಟಿಯಾಲದಲ್ಲಿರುವ NIS ನಲ್ಲಿ ಅಭ್ಯಾಸ ನಡೆಸುತ್ತಿರುವ ಮಿಜೋ www.sportsmail.in ಜೊತೆ ಮಾತನಾಡಿ ಕ್ರೀಡಾ ಬದುಕಿನ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಎಂಜಿನಿಯರಿಂಗ್‌ ತೊರೆದ ಮಿಜೋ ಚಾಕೋ: ಎರಡೂವರೆ ವರ್ಷ ಆದ ನಂತರ ಮತ್ತು ಹೆತ್ತವರ ವಿರೋಧದ ನಡುವೆಯೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ತೊರೆಯುವುದು ಅಷ್ಟು ಸುಲಭವಲ್ಲ, “ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಕ್ರೀಡೆಯ ಬಗ್ಗೆ ಆಸಕ್ತಿ ಇದ್ದಿತ್ತು. ಆದರೆ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದೆ. 85% ಅಂಕ ಗಳಿಸಿದೆ. ಅಡ್ಯಾರಿನಲ್ಲಿರುವ ಶ್ರೀನಿವಾಸ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ವಿಭಾಗದಲ್ಲಿ ಓದಲು ಆರಂಭಿಸಿದೆ. 800 ಮತ್ತು 400 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದೆ. ಒಮ್ಮೆ ಇಂಟರ್‌ ಯೂನಿವರ್ಸಿಟಿಯಲ್ಲಿ ಚಿನ್ನದ ಪದಕ ಗೆದ್ದೆ. ಅಲ್ಲಿಂದ ಮನಸ್ಸು ಓಟದ ಕಡೆಗೆ ವಾಲಿತು. ಒಂದು ದಿನ ಎಂಜಿನಿಯರಿಂಗ್‌ ಬಿಟ್ಟು ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತೀರ್ಮಾನಿಸಿ ಕ್ಯಾಂಪಸ್‌ನಿಂದ ಹೊರ ಬಂದೆ,” ಎಂದು  ಮಿಜೋ ಚಾಕೋ ನಗುತ್ತ ಹೇಳಿದರು.

ಮನೆಯಲ್ಲಿ ವಿರೋಧ: ಗೆದ್ದಿರುವುದು ಒಂದು ಇಂಟರ್‌ ಯೂನಿವರ್ಸಿಟಿ ಪದಕ. ಇಷ್ಟಕ್ಕೇ ಎರಡೂವರೆ ವರ್ಷಗಳ ಕಾಲ ಕಲಿತ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಯನ್ನು ತೊರೆದು ಮನೆಗೆ ಬಂದರೆ ಯಾವ ತಂದೆ ತಾಯಿ ವಿರೋಧ ವ್ಯಕ್ತಪಡಿಸುವುದಿಲ್ಲ? ಮಿಜೋ ಚಾಕೋ ಅವರ ತಂದೆ ಕುರಿಯನ್‌ ಹಾಗೂ ತಾಯಿ ಮಿನಿ ಕುರಿಯನ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಮಿಜೋ ಚಾಕೋ ತನ್ನ ತೀರ್ಮಾನದಿಂದ ಹಿಂದೆ ಸರಿಯಲಿಲ್ಲ. ಮೂಡಬಿದಿರೆಯ ಆಳ್ವಾಸ್‌ ಕಾಲೇಜು ಮತ್ತು ಕೋಚ್‌ ದಿನೇಶ್‌ ಕುಂದರ್‌ ಅವರಿಂದ ಪ್ರೋತ್ಸಾಹ ಸಿಕ್ಕಿತು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪರಿಣಾಮ 2019ರಲ್ಲಿ ಏರ್‌ಫೋರ್ಸ್‌ನಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿ ಒಂದೂವರೆ ವರ್ಷಗಳ ಕಾಲ ತರಬೇತಿ ಸಿಕ್ಕಿತು.  2023ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಿಜೋ ಚಾಕೋ ಅವರಿಗೆ ರಿಲೇಯಲ್ಲಿ ಚಿನ್ನ, ನಂತರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ, ಏಷ್ಯನ್‌ ರಿಲೇ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ ಪದಕ ಗೆದ್ದರು. ಈಗ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

“ಆರಂಭದಲ್ಲಿ ಮನೆಯಿಂದ ತೀವ್ರ ವಿರೋಧವಿದ್ದಿತ್ತು. ಆ ರೀತಿಯ ವಿರೋಧ ಬರುತ್ತದೆ ಎಂದು ನನಗೂ ಗೊತ್ತಿತ್ತು. ಕಠಿಣ ಪರಿಶ್ರಮ ಮಾಡಿದೆ. ನನ್ನ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಆ ಬಗ್ಗೆಯೇ ಹೆಚ್ಚು ಗಮನ ಹರಿಸಿದೆ. ಏರ್‌ಫೋರ್ಸ್‌ನಲ್ಲಿ ಉದ್ಯೋಗ ಸಿಕ್ಕಾಗ ಹೆತ್ತವರಿಗೆ ಬಹಳ ಖುಷಿಯಾಯಿತು. ಆ ನಂತರ ಅವರು ನನಗೆ ಪ್ರತಿಯೊಂದು ವಿಷಯದಲ್ಲೂ ಪ್ರೋತ್ಸಾಹ ನೀಡಿದರು. ಎಂಜಿನಿಯರ್‌ ಆಗಿ ಉತ್ತಮ ವೇತನ ಪಡೆದು ಎಲ್ಲೋ ಇರಬಹುದಾಗಿತ್ತು. ಆದರೆ ಕ್ರೀಡೆ ನನಗೆ ಬದುಕನ್ನು ಕಲ್ಪಿಸಿದೆ, ಶಿಸ್ತನ್ನು ನೀಡಿದೆ, ಸಮಾಜದಲ್ಲಿ ಗೌರವ ಸಿಗುವಂತೆ ಮಾಡಿದೆ. ತೀರ್ಮಾನಗಳನ್ನು ಕೈಗೊಳ್ಳಲು ಕ್ರೀಡೆ ಸಾಕಷ್ಟು ನೆರವಾಗಿದೆ. ಇಂದು ದೇಶವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುವುದು, ಒಲಿಂಪಿಯನ್‌ ಎಂದು ಕರೆಸಿಕೊಳ್ಳುವುದು ಹೆಮ್ಮೆಯ ಸಂಗತಿ, ಇದಕ್ಕಿಂತ ಬದುಕಿಗೆ ಇನ್ನೇನು ಬೇಕು? ಇಂಡಿಯನ್‌ ಏರ್‌ಫೋರ್ಸ್‌ ನನಗೆ ಬದುಕನ್ನು ನೀಡಿದೆ, ದೇಶಕ್ಕಾಗಿ ಉತ್ತಮ ಸಾಧನೆ ಮಾಡಬೇಕೆಂಬುದೇ ನನ್ನ ಮುಂದಿನ ಗುರಿ, ಸನ್ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾಗಿ ಬದುಕಬೇಕು. ಇವೆಲ್ಲ ಕಲಿಸಿದ್ದು ಕ್ರೀಡೆ,” ಎನ್ನುತ್ತಾರೆ ಮಿಜೋ ಚಾಕೋ ಕುರಿಯನ್‌.

Related Articles