Friday, March 29, 2024

ಈ ಪುಟ್ಟ ಚಾಂಪಿಯನ್ ಬದುಕಿಗೆ ನೆರವಾಗಿ

ಸೋಮಶೇಖರ್ ಪಡುಕರೆ:

ರಾಜ್ಯ ಟೆಕ್ವಾಂಡೋ ಚಾಂಪಿಯನ್‌ಷಿಪ್ ನಡೆಯುವುದಕ್ಕೆ ನಾಲ್ಕು ದಿನ ಮೊದಲು ಆ ಟೆಕ್ವಾಂಡೋ ತಾರೆ ಬೆಂಗಳೂರಿನ ಮಣಿಪಾಲ  ಆಸ್ಪತ್ರೆಯ ತೀವ್ರ ನಿಗಾ ಘಟಕ(ಐಸಿಯು)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಾಂಪಿಯನ್‌ಷಿಪ್ ತಪ್ಪಿ ಹೋಗುತ್ತದೆ ಎಂಬ ಆತಂಕ. ಅದೃಷ್ಟಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾದ. ಬಂದವನೇ ರಾಜ್ಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ.

ಈ ಮಗುವಿಗೆ ಅವರ ತಂದೆ ಪ್ರತಿ ತಿಂಗಳು 90 ಸಾವಿರ ರೂ. ಔಷಧಕ್ಕೆ ವ್ಯಯ ಮಾಡುತ್ತಿದ್ದಾರೆ. ಏಕೆಂದರೆ ಆ ಮಗು ಕ್ರೋನ್ಸ್ (CRONHS) ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಾಯಿಲೆಯ ನಡುವೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 50 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಈ ಪುಟ್ಟ  ಬಾಲಕ ಬೇರೆ ಯಾರೂ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಟೆಕ್ವಾಂಡೋ ಚಾಂಪಿಯನ್ ಬೆಂಗಳೂರಿನ 9 ವರ್ಷದ ಬಾಲಕ ಲವಣ್ ಕುಮಾರ್.
ಕ್ರೋನ್ಸ್ ಹೊಟ್ಟೆಯಲ್ಲಿ ನೋವು ಉಂಟಾಗಿ, ರಕ್ತದ ಕಣಗಳಲ್ಲಿ ವ್ಯತ್ಯಯವಾಗಿ ವ್ಯಕ್ತಿಯನ್ನು ತೀವ್ರ ದಣಿಯುವಂತೆ ಮಾಡುವ ಕಾಯಿಲೆ. ವೈದ್ಯಕೀಯ ತಜ್ಞರ ಪ್ರಕಾರ ಇದು ಒಂದು ವರ್ಷದ ಒಳಗೆ ಗುಣವಾದರೆ ಉತ್ತಮ, ಇಲ್ಲವಾದಲ್ಲಿ ನಮ್ಮನ್ನು ಕೊನೆತನಕ ಕಾಡುವ ಕಾಯಿಲೆ. ಲವಣ್ 2016 ರಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಟೆಕ್ವಾಂಡೋನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ ಐವತ್ತಕ್ಕೂ ಹೆಚ್ಚು ಪದಕಗಳ ಸಾಧನೆ ಮಾಡಿದ್ದಾರೆ.
ಬಡ ಕುಟುಂಬ
ಲವಣ್ ಅವರ ತಂದೆ ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ. ಮಗನಿಗಾಗಿ ಪ್ರತೀ ತಿಂಗಳು ಸಾಲ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಜನೌಷಧಿಯಲ್ಲಿ ಅವರಿಗೆ ಸೌಲಭ್ಯ  ಸಿಗಲಿಲ್ಲ. ಸಂಬಧಪಟ್ಟ ವೈದ್ಯರು ಈ ಔಷಧ  ಜನೌಷಧಿ ಕೇಂದ್ರದಲ್ಲಿ ಸಿಗುವುದಿಲ್ಲ ಎನ್ನುತ್ತಾರೆ ಎಂಬುದು ಉದಯ್ ಅವರ ಅಳಲು. ಈ ಕಾರಣಕ್ಕಾಗಿ ತಾವು ದುಡಿದಿರುವ ಹಣದ ಜತೆಯಲ್ಲಿ ಪ್ರತಿತಿಂಗಳು ಬಡ್ಡಿಯಲ್ಲಿ ಸಾಲ ಮಾಡಿ ಮಗನ ಚುಚ್ಚುಮದ್ದಿಗೆ ವ್ಯಯ ಮಾಡುತ್ತಿದ್ದಾರೆ. ಇದ್ದ ಚಿನ್ನಾಭರಣಗಳೂ ಮಗನ ಚಿಕಿತ್ಸೆಯ ಪಾಲಾಗಿದೆ.

ಸ್ಪರ್ಧೆಗೂ ಹಣ ಇಲ್ಲ 

ಈ ತಿಂಗಳ 23 ರಂದು ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಲವಣ್ ಸ್ಪರ್ಧಿಸಬೇಕಾಗಿತ್ತು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅವರು ಪಾಲ್ಗೊಳ್ಳುತ್ತಿಲ್ಲ. ಈ ಕುರಿತು ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಲವಣ್ ಅವರ ತಂದೆ ಉದಯ್ ‘ಲವಣ್‌ನ ಔಷಧಿಗೇ ಹಣ ಒಗ್ಗೂಡಿಸುವುದರಲ್ಲೇ ಸಾಕಾಗುತ್ತದೆ. ಇನ್ನು ಚಾಂಪಿಯನ್‌ಷಿಪ್‌ಗೆ ಹಣ ಎಲ್ಲಿಂದ ತರಲಿ? ಅದಕ್ಕಾಗಿ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ,‘ ಎಂದರು.

ಆಸ್ಪತ್ರೆ ಹಣಕ್ಕಾಗಿ ಮನೆ ಮಾರಿದರು 

೨೦೧೬ ರಿಂದ ಲವಣ್ ಕ್ರೋಮ್ಸ್ ನಿಂದ ಬಳಲುತ್ತಿದ್ದರು.ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವೈದ್ಯರಿಗೆ ಕಾಯಿಲೆ ಏನೆಂಬುದನ್ನು ಕಂಡುಹಿಡಿಯಲಾಗಲಿಲ್ಲ. ಆಗಲೇ ಆಸ್ಪತ್ರೆ ವೆಚ್ಚ ೮೦ ಲಕ್ಷ ದಾಟಿತ್ತು. ಇದಕ್ಕಾಗಿ ಉದಯ್ ಬಸವನಗುಡಿಯಲ್ಲಿರುವ ತಮ್ಮ ಮನೆಯನ್ನೇ ಮಾರಿ ಮಗನ ಆಸ್ಪತ್ರೆ ವೆಚ್ಚ ಭರಿಸಿದರು. ನಂತರ ಹೈದೆರಾಬಾದ್ ನಲ್ಲಿ ರೋಗದ ಪತ್ತೆಯಾಯಿತು. ಇದುವರೆಗೂ ಉದಯ್ ಮಗನ ಕಾಯಿಲೆಗೆ ವ್ಯಯ ಮಾಡಿದ್ದು ಒಂದು ಕೋಟಿ ರೂ ದಾಟಿದೆ.
ಸ್ಪಂದಿಸದ ಸರಕಾರ 
ಚಾಂಪಿಯನ್ ಆಟಗಾರನಿಗೆ ನೆರವು ನೀಡಿ ಎಂದು ಉದಯ್ ಹಲವು ಬಾರಿ ವಿಧಾನ ಸೌಧದ ಮೆಟ್ಟಿಲು ತುಳಿದಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಏನಾದರೂ ಸಹಾಯ ಮಾಡಿ ಎಂದು ವಿನಂತಿಸಿದ್ದಾರೆ. ಆದರೆ ನೋಡುವ ನೋಡುವ …ಎನ್ನುವಷ್ಟರಲ್ಲೇ ಚುನಾವಣೆ ಬಂದು ಅಂದಿನ ಮುಖ್ಯ ಮಂತ್ರಿ ಸಿದ್ಧರಾಮಯ್ಯ  ಅವರಿಂದ ನೆರವು ಸಿಗಲಿಲ್ಲ.
ಮುಖ್ಯಮಂತ್ರಿಗಳೇ ಗಮನಿಸಿ
ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಈಗಾಗಲೇ ಹಲವಾರು ಕ್ರೀಡಾಪಟುಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಕ್ರೀಡಾಪಟುಗಳ ಸಮಸ್ಯೆಗಳಿಗೆ ನೆರವಾಗಿ ಎಂದು ಅಧಿಕಾರಿಗಳಿಗೆ ಕೂಡಲೇ ಆದೇಶಿಸುತ್ತಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಲವಣ್ ಕುಮಾರ್ ಅವರ ಕಷ್ಟಕ್ಕೆ ಸ್ಪಂದಿಸಿದರೆ ಆ ಕುಟುಂಬ ನೆಮ್ಮದಿಯ ದಿನಗಳನ್ನು ಕಾಣಬಹುದು.
ಐಸಿಯುನಿಂದ ಟೆಕ್ವಾಂಡೋ ಮ್ಯಾಟ್‌ಗೆ
ಆಗಸ್ಟ್ ಕೊನೆಯ ವಾರದಲ್ಲಿ ಲವಣ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡಿತು. ಬ್ಲಡ್‌ಪ್ಲೇಟ್ ಹಾಗೂ ರಕ್ತದಲ್ಲಿ ಹಿಮೋಗ್ಲೇಬಿನ್ ಕಡಿಮೆಯಾದ ಕಾರಣ ಅವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆಗಸ್ಟ್ ೪ ಮತ್ತು ೫ರಂದು ರಾಜ್ಯಮಟ್ಟದ ಟೆಕ್ವಾಂಡೋ ಚಾಂಪಿಯನ್‌ಷಿಪ್. ವೈದ್ಯರ ಸಲಹೆ ಮೇರೆಗೆ ಲವಣ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲೇಬೇಕೆಂದು ಲವಣ್ ಹೆತ್ತವರಲ್ಲಿ ಹಠ ಮಾಡಿದ. ಪದಕ ಸಿಗುವುದು ಕಷ್ಟ, ಅದರಲ್ಲೂ ಬಳಲಿದ್ದಿ  ಎಂದು ಹೆತ್ತವರು ಒತ್ತಾಯ ಮಾಡಿದರೂ, ಲವಣ್ ಅದಕ್ಕೆ ಒಪ್ಪದೇ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಒಂದು ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದಾರೆ.

Related Articles