Saturday, October 19, 2024

107 ರನ್‌ ಗುರಿ, 93ಕ್ಕೇ ಆಲೌಟ್, ಭಾರತಕ್ಕೆ 13 ರನ್‌ ಜಯ!

ಬೆಂಗಳೂರು: ‌ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್‌ ತಂಡಕ್ಕೆ 107 ರನ್‌ಗಳ ಗುರಿ ನೀಡಿದೆ. ಆದರೆ ಈ ಮೊತ್ತವನ್ನು ನಿಯಂತ್ರಿಸುವ ಸಾಮರ್ಥ್ಯ ಭಾರತದಲ್ಲಿ ಇದೆಯೇ? ಕ್ರಿಕೆಟ್‌ನ ಇತಿಹಾಸವನ್ನು ಹಿಂದಿರುಗಿ ನೋಡಿದಾಗ ಭಾರತಕ್ಕೆ ಆ ಸಾಮರ್ಥ್ಯ ಇದೆ. ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಥದೊಂದು ಮ್ಯಾಜಿಕ್‌ ನಡೆದರೆ ಅಚ್ಚರಿಪಡಬೇಕಾಗಿಲ್ಲ. History says Indian can win first test match against New Zealand.

2004ರಲ್ಲಿ ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ. ಎರಡೂ ತಂಡಗಳು ಅಲ್ಪ ಮೊತ್ತವನ್ನು ದಾಖಲಿಸಿದ್ದವು. ಅಂತಿಮವಾಗಿ ಆಸ್ಟ್ರೇಲಿಯಾಕ್ಕೆ 107 ರನ್‌ಗಳ ಗುರಿ. ಹರ್ಭಜನ್‌ ಸಿಂಗ್‌, ಮುರಳಿ ಕಾರ್ತಿಕ್‌ ಹಾಗೂ ಅನಿಲ್‌ ಕುಂಬ್ಳೆ ಅವರ ಸ್ಪಿನ್‌ ಜಾಲಕ್ಕೆ ಸಿಲುಕಿದ ಆಸ್ಟ್ರೇಲಿಯಾ 93 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತಕ್ಕೆ 13 ರನ್‌ ಜಯ ಲಭಿಸಿತ್ತು. ಹರ್ಭಜನ್‌ ಸಿಂಗ್‌ ಆ ಪಂದ್ಯದಲ್ಲಿ 10 ವಿಕೆಟ್‌ ಗಳಿಸಿದರೆ, ಮುರಳಿ ಕಾರ್ತಿಕ್‌ 7 ವಿಕೆಟ್‌ ಗಳಿಸಿದ್ದರು. ಅನಿಲ್‌ ಕುಂಬ್ಳೆ 6 ವಿಕೆಟ್‌ ಗಳಿಸಿದರು.

1969ರಲ್ಲಿ ಮುಂಬಯಿಯ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಪಂದ್ಯ. ನ್ಯೂಜಿಲೆಂಡ್‌ಗೆ 188 ರನ್‌ ಗುರಿ. ಸ್ಪಿನ್‌ ಜೋಡಿ ಎರಾಪಳ್ಳಿ ಪ್ರಸನ್ನ(4) ಮತ್ತು ಬಿಷನ್‌ ಸಿಂಗ್‌ ಬೇಡಿ (6) 10 ವಿಕೆಟ್‌ಗಳನ್ನು ಹಂಚಿಕೊಳ್ಳುವುದರೊಂದಿಗೆ ಭಾರತ 60 ರನ್‌ ಜಯ ಗಳಿಸಿತ್ತು.

ಚಿನ್ನಸ್ವಾಮಿಯಲ್ಲಿ ಆಸ್ಟ್ರೇಲಿಯಾವನ್ನೇ ಸೋಲಿಸಿದ್ದೆವು: 2017ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌. ಆಸ್ಟ್ರೇಲಿಯಾಕ್ಕೆ ಗೆಲ್ಲಲು 188 ರನ್‌ ಗುರಿ. ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 63 ರನ್‌ಗೆ 6 ವಿಕೆಟ್‌ ಗಳಿಸಿದ್ದರು. ರವಿಚಂದ್ರನ್‌ ಅಶ್ವಿನ್‌ 84 ರನ್‌ಗೆ 2 ವಿಕೆಟ್‌ ಗಳಿಸಿದ್ದರು. ಆಸ್ಟ್ರೇಲಿಯಾ 188 ರನ್‌ ಗುರಿಯನ್ನು ಸಲುಭವಾಗಿ ತಲಪುತ್ತದೆ ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವಾಗಿತ್ತು. ಆದರೆ ರವಿಚಂದ್ರನ್‌ ಅಶ್ವಿನ್‌ 41 ರನ್‌ಗೆ 6 ವಿಕೆಟ್‌ ಗಳಿಸುವುದರೊಂದಿಗೆ ಆಸ್ಟ್ರೇಲಿಯಾ 112 ರನ್‌ಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಕೆ,ಎಲ್‌. ರಾಹುಲ್‌ ಪಂದ್ಯಶ್ರೇಷ್ಠ ಎಂಬುದನ್ನು ಮರೆಯಬೇಡಿ.

ನಾಳೆಯ ಯಶಸ್ಸಿಗೆ ಸ್ಫೂರ್ತಿಯಾಗಲು ಇದು ಹಿಂದಿನ ಕತೆ. ಭಾರತ ಹೀಗೆ ಎಷ್ಟೋ ಪಂದ್ಯಗಳಲ್ಲಿ ಅಲ್ಪ ಮೊತ್ತವನ್ನು ನಿಯಂತ್ರಿಸಿ ಜಯ ಗಳಿಸಿದ ಉದಾಹರಣೆಗಳಿವೆ.

Related Articles