ಮ್ಯಾಡ್ರಿಡ್: ಕಠಿಣ ಹೋರಾಟದ ನಡುವೆಯೂ ಭಾರತ ಕಿರಿಯರ ಹಾಕಿ ತಂಡ ಎಂಟು ರಾಷ್ಟ್ರಗಳ 21 ವಯೋಮಿತಿ ಆಹ್ವಾನಿತ ಟೂರ್ನಿಯ ಪಂದ್ಯದಲ್ಲಿ ನೆದರ್‌ಲೆಂಡ್ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತು.
ಪಂದ್ಯದ ಮೊದಲ ಕ್ವಾರ್ಟರ್ 5ನೇ ನಿಮಿಷದಲ್ಲೇ ಜಿಮ್ ವಾನ್ ಡೆ ವೆನ್ನೆ ಅವರು ನೆದರ್‌ಲೆಂಡ್‌ಗೆ ಗೋಲಿನ ಖಾತೆ ತೆರೆದರು. ನಂತರ, ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ.
ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ನಡುವೆ ಭಾರಿ ಕಾದಾಟ ಏರ್ಪಟ್ಟಿತ್ತು. ಆದರೆ, ಎರಡೂ ತಂಡಗಳು ರಕ್ಷಣಾ ಕೋಟೆಗಳ ಗುಣಮಟ್ಟದ ಪ್ರದರ್ಶನ ತೋರಿದವು. 23ನೇ ನಿಮಿಷದಲ್ಲಿ ವಿಷ್ಣುಕಾಂತ್ ಅವರು ಭಾರತಕ್ಕೆ ಗೋಲಿನ ಖಾತೆ ತೆರೆದರು. ಇದರೊಂದಿಗೆ ಎರಡೂ ತಂಡಗಳು ಸಮಬಲ ಸಾಧಿಸಿದವು.
ಆದರೆ, ಭಾರತ ಸಮಬಲ ಮಾಡಿಕೊಂಡ ಮೂರು ನಿಮಿಷಗಳ ಬಳಿಕ ನೆದರ್‌ಲೆಂಡ್‌ಗೆ ವಾನ್ ಡೆ ವೆನ್ನೆ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲರಾಗುತ್ತಾರೆ. ಮೊದಲ ಅವಧಿ ಬಳಿಕ ನೆದರ್‌ಲೆಂಡ್ 2-1 ಮುನ್ನಡೆಯೊಂದಿಗೆ ವಿಶ್ರಾಂತಿಗೆ ತೆರಳಿತು.
ವಿಶ್ರಾಂತಿ ಬಳಿಕ ಕಣಕ್ಕೆ ಇಳಿದ ಭಾರತ ಹಾಗೂ ನೆದರ್‌ಲೆಂಡ್ ತಂಡಗಳು ಆಟದ ತೀವ್ರತೆ ಹಾಗೂ ವೇಗವನ್ನು ಹೆಚ್ಚಿಸಿದವು. ಆದರೆ, ಡೆರ್ಕ್ ಡೆ ವಿಲ್ಡರ್ ಅವರು ನೆದರ್‌ಲೆಂಡ್‌ಗೆ ಮೂರನೇ ಗೋಲು ಕೊಡುಗೆಯಾಗಿ ನೀಡಿದರು.
ಎರಡು ಗೋಲುಗಳ ಹಿನ್ನಡೆಯಿಂದ ತೀವ್ರ ಒತ್ತಡಕ್ಕೆ ಒಳಗಾದ ಭಾರತ, ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಅದರಂತೆ 37ನೆ ನಿಮಿಷದಲ್ಲಿ ಸುದೀಪ್ ಚಿರ್ಮಾಕೊ ಅವರು ಮಹತ್ವದ ಗೋಲು ಗಳಿಸಿ ತಂಡದ ಹಿನ್ನಡೆಯ ಅಂತರವನ್ನು ಕಡಿಮೆಗೊಳಿಸಿದರು.
ನಂತರ ಅಂತಿಮ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ಗೋಲು ಗಳಿಸಲು ಸಾಕಷ್ಟು ಹೆಣಗಾಡಿತು. ಆದರೂ ಡಚ್ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 2-3 ಅಂತರದಲ್ಲಿ ಭಾರತ, ನೆದರ್‌ಲೆಂಡ್‌ಗೆ ಶರಣಾಯಿತು.