ಸೋಮಶೇಖರ್ ಪಡುಕರೆ, ಬೆಂಗಳೂರು:
ಭಾರತ ಹಾಕಿ ತಂಡದ ಗೋಲ್‌ಕೀಪರ್ ಖುಷ್ಬೂ ಖಾನ್ ಮಧ್ಯಪ್ರದೇಶದಲ್ಲಿ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಅಲ್ಲಿಯ ಜನಪ್ರತಿನಿಧಿಗಳು ಕೇವಲ ಭರವಸೆಯನ್ನು ನೀಡದರೇ ಹೊರತು ಮನೆ ನೀಡಲಿಲ್ಲ. ಆದರೆ ಮುಂಬೈನಲ್ಲಿ ವಾಸಿಸುತ್ತಿರುವ, ಉತ್ತರ ಕನ್ನಡದ ಶಿರಾಲಿ ಮೂಲದವರಾದ ಶಿವ ಗುಲ್ವಾಡಿ ಅವರು ಭೋಪಾಲ್‌ನಲ್ಲಿ ಸುಮಾರು 37ಲಕ್ಷ ರೂ. ಬೆಲೆ ಬಾಳುವ ಮನೆಯನ್ನು ಹಾಕಿ ಆಟಗಾರ್ತಿಗೆ ಉಡುಗೊರೆಯಾಗಿ ನೀಡಿ ತನ್ನ ಉದಾರತೆಯನ್ನು ಮೆರೆದಿದ್ದಾರೆ.
20 ವರ್ಷ ಪ್ರಾಯದ ಆಟಗಾರ್ತಿ ಖುಷ್ಬೂ ಖಾನ್, ರಿಕ್ಷಾ ಚಾಲಕರಾದ ತನ್ನ ತಂದೆ ಹಾಗೂ ಮನೆಯ ಇತರ ಐವರು ಸದಸ್ಯರೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಆಟಗಾರ್ತಿಯ ನೋವನ್ನು ಅರ್ಥ ಮಾಡಿಕೊಂಡ ಶಿವ ಗುಲ್ವಾಡಿ ಅವರು ಮೂರು ಬೆಡ್‌ರೂಮ್‌ನ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಮುಂದಿನ ತಿಂಗಳು ತಮ್ಮ ಕುಟುಂಬದವರೊಂದಿಗೆ ಖುಷ್ಬೂ ಆ ಮನೆಯಲ್ಲಿ ವಾಸಿಸಲಿದ್ದಾರೆ.
ಭಾರತ ತಂಡದಲ್ಲಿದ್ದು ಜಗತ್ತಿನಾದ್ಯಂತ ಆಟವಾಡಿದರೂ ಗುಡಿಸಲಿನಲ್ಲಿ ವಾಸಿಸುವ ಖುಷ್ಬೂ ಅವರ ನೋವಿಗೆ ಮಧ್ಯಪ್ರದೇಶ ಸರಕಾರ ಸ್ಪಂದಿಸಲಿಲ್ಲ, ಆದರೆ ಖುಷ್ಬೂ ಅವರ ಸಾಧನೆ ಮತ್ತು ಅವರ ಕುಟುಂಬದ ನೋವನ್ನು ಗಮನಿಸಿದ ಶಿವ ಗುಲ್ವಾಡಿ ಅವರು ನೆರವಿನ ಹಸ್ತ ಚಾಚಿದ್ದಾರೆ.
ಉತ್ತರ ಕನ್ನಡದ ಶಿರಾಲಿ ಮೂಲದವರಾದ ಶಿವ ಗುಲ್ವಾಡಿ ಅವರು ನವಿಮುಂಬೈಯಲ್ಲಿ ನೆಲೆಸಿದ್ದು, ಪತ್ನಿ ಗೀತಾ ಗುಲ್ವಾಡಿ ಅವರು ಜನಪ್ರಿಯ ಶಾಸ್ತ್ರೀಯ ಸಂಗೀತ ಹಾಡುಗಾರ್ತಿ. ಬೆಂಗಳೂರಿನ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಪದ್ಮಿನಿ ರಾವ್ ಅವರು ಶಿವ ಗುಲ್ವಾಡಿ ಅವರ ಸಹೋದರಿ.
“ಪತ್ರಿಕೆಯಲ್ಲಿನ ವರದಿ ಓದಿದ ನಂತರ ಆ ಆಟಗಾರ್ತಿ ಮತ್ತು ಅವರ ಮನೆಯವರು ಎಷ್ಟು ನೋವಿನಲ್ಲಿ ದಿನಗಳನ್ನು ಕಳೆಯುತ್ತಿರಬಹುದು ಎಂದು ಯೋಚಿಸಿದೆ. ದೇವರ ದಯೆಯಿಂದ ಆಕೆ ಮುಂದಿನ ತಿಂಗಳು ತನ್ನ ಮನೆಯನ್ನು ಪಡೆಯಲಿದ್ದಾಳೆ. ಇನ್ನು ಆಕೆ ತನ್ನ ಆಟದ ಕಡೆಗೆ ಹೆಚ್ಚಿನ ಗಮನ ನೀಡಬಹದು,” ಎಂದು ಶಿವ ಗುಲ್ವಾಡಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Sportsmail ಜತೆ ಮಾತನಾಡಿದ ಶಿವ ಗುಲ್ವಾಡಿ:
“ಅವರು ಭಾರತವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಅವರ ಮನೆಯ ಪರಿಸ್ಥಿತಿಯನ್ನು ನೋಡಿದಾಗ ನನಗೂ ಬೇಸರವಾಯಿತು. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹಾಕಿ ಆಡಿ, ದೇಶದ ಗೌರವವನ್ನು ಕಾಪಾಡಿ ಕೊನೆಯಲ್ಲಿ ಗುಡಿಸಲಿನಲ್ಲಿ ಬಂದು ಮಲಗುವುದನ್ನು ಕಂಡಾಗ ಭಾರತೀಯ ಪ್ರಜೆಯಾದ ನನಗೆ ಯೋಚಿಸುವಂತೆ ಮಾಡಿತು. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿ ಇರುವ ದೇಶದಲ್ಲಿ ಒಬ್ಬ ಹಾಕಿ ಆಟಗಾರ್ತಿಯ ಕುಟುಂಬ ಈ ರೀತಿಯಲ್ಲಿ ಬದುಕುತ್ತಿರುವುದು ಸೂಕ್ತವಲ್ಲ. ಆಕೆ ಕುಟುಂಬ ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದೆ. ಈ ಬಗೆಯ ಪ್ರೋತ್ಸಾಹ ಎಂಬುದು ಸಾಮಾನ್ಯವಲ್ಲ. ಮನೆಯಲ್ಲಿ ಕಷ್ಟವಿದ್ದರೂ ಮಗಳ ಹಾಕಿಗೆ ಪ್ರೋತ್ಸಾಹ ಮಾಡಿರುವುದು ಅವರ ಕ್ರೀಡಾ ಬದ್ಧತೆಯನ್ನು ತೋರಿಸುತ್ತದೆ,” ಎಂದು ಶಿವ ಗುಲ್ವಾಡಿ ತಿಳಿಸಿದರು.
ಅದು ಕನಸಿನ ಮನೆಯಾಗಿರಬೇಕು: “ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯನ್ನು ಓದಿದ ಕೂಡಲೇ ನನಗೆ ಅತೀವ ನೋವಾಯಿತು. ಆದರೆ ನಾನು ನೆರವು ನೀಡುವ ಬಗ್ಗೆ ತರಾತುರಿ ಮಾಡಲಿಲ್ಲ. ಆಕೆಯ ಕನಸಿನ ಮನೆಯನ್ನೇ ನೀಡಬೇಕು ಎಂದು ತೀರ್ಮಾನಿಸಿದೆ. ಒಂದು ರೂಮಿನಲ್ಲಿ ಮನೆಯ ಆರು ಮಂದಿ ವಾಸಿಸುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿತ್ತು. ಆಕೆ ಅಂತಾರಾಷ್ಟ್ರೀಯ ಆಟಗಾರ್ತಿ. ಮನೆಯ ಕಷ್ಟ ಆಕೆಯ ಆಟಕ್ಕೆ ಅಡ್ಡಿಯಾಗಬಾರದು ಅದಕ್ಕೆ ಸೂಕ್ತವಾದ ಮನೆ ನೀಡಲು ತೀರ್ಮಾನಿಸಿದೆ. ಸುಮ್ಮನೆ ಹರಕೆ ತೀರಿಸುವ ಕೆಲಸ ಮಾಡಬಾರದು. ಅದಕ್ಕಾಗಿಯೇ ಮೂರು ಕೊಠಡಿಗಳ ಮನೆ ಉಡುಗೊರೆಯಾಗಿ ನೀಡಿದೆ. ಮತ್ತೆ ಅವರು ಮನೆಯ ಬಗ್ಗೆ ಯೋಚಿಸಬಾರದು. ಇನ್ನು ಖುಷ್ಬೂ ಉತ್ತಮವಾಗಿ ಆಡಲಿ ಎಂಬುದೇ ಹಾರೈಕೆ,” ಎಂದರು.
ಬೆಂಗಳೂರಿನ ಶಿಬಿರದಲ್ಲಿ ಖುಷ್ಬೂ: ಭಾರತ ಮಹಿಳಾ ಹಾಕಿ ತಂಡ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ಶಿಬಿರದಲ್ಲಿದ್ದು, ಶಿವ ಗುಲ್ವಾಡಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. “ನಮ್ಮ ಬದುಕಿಗೆ ಸ್ಪಂದಿಸಿದ ಶಿವ ಸರ್ ಅವರಿಗೆ ನಮ್ಮ ಕುಟುಂಬ ಯಾವಾಗಲೂ ಚಿರಋಣಿಯಾಗಿರುತ್ತದೆ,” ಎಂದಿದ್ದಾರೆ.