Thursday, September 19, 2024

ಮನೆ ಕುಸಿದರೂ ಚಾಂಪಿಯನ್‌ ಲೋಕೇಶ್‌ ಮನಸ್ಸು ಕುಸಿಯಲಿಲ್ಲ!

ಬೆಂಗಳೂರು: ಇದು ಸಿನಿಮಾ ಕತೆಯಲ್ಲ..  ಸಿನಿಮಾ ಆಗಬೇಕಾದ ಕತೆ, ಇದು ಸಿನಿಮಾ ಹೀರೋ ಕತೆಯಲ್ಲ ಇದು ಸಾಮಾನ್ಯ ಯುವಕನೊಬ್ಬ ಹೀರೋ ಆದ ಕತೆ. ಇದು ಚಾಂಪಿಯನ್ನರ ಕತೆಯಲ್ಲ, ಚಾಂಪಿಯನ್ನರನ್ನು ಹುಟ್ಟು ಹಾಕಿದ ಬೆಂಗಳೂರಿನ ಲೋಕೇಶ್‌ ಕುಮಾರ್‌ ಗಜೇಂದ್ರ ಅವರ ಬದುಕಿನ ಕತೆ. How Billiards Champion became a Life Champion, Inspirational life story of a Billiards Champion Lokesh Kumar Gajendra

ಅದು 2016 ರ ನವೆಂಬರ್‌ 4. ಬೆಂಗಳೂರಿನಲ್ಲಿ ನಾಗರಬಾವಿಯಲ್ಲಿರುವ ರಾಧಾ ಹಾಗೂ ಗಜೇಂದ್ರ ದಂಪತಿಯ ಮನೆಯ ಮೇಲೆ ಪಕ್ಕದ ಮನೆ ಕುಸಿದು ಬಿತ್ತು. ಮನೆಯೊಳಗಡೆ ಇದ್ದ ಲೋಕೇಶ್‌ ಕುಮಾರ್‌ ಗಜೇಂದ್ರ ಸಾವನ್ನಪ್ಪಿರಬಹುದು ಎಂದು ಎಲ್ಲರೂ ಊಹಿಸಿದ್ದರು, ಆದರೆ ಲೋಕೇಶ್‌ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕಾಲು ಮತ್ತು ಬೆನ್ನಿನ ಮೂಳೆ ತುಂಡಾಗಿತ್ತು. ಒಂದು ಕೋಟಿ ರೂ. ಖರ್ಚಾಯಿತು. 11 ಶಸ್ತ್ರಚಿಕಿತ್ಸೆ ಮಾಡಲಾಯಿತು. ಮನೆಯ ಜೊತೆ ಪ್ರತಿಭಾವಂತ ಲೋಕೇಶನ ಬದುಕೂ ಕುಸಿಯಿತು. ಹೀರೋ ರೀತಿಯಲ್ಲಿದ್ದ ಲೋಕೇಶ್‌ ವೀಲ್‌ ಚೇರ್‌ ಮೂಲಕ ಚಲಿಸಬೇಕಾಯಿತು. ಭವ್ಯ ಬದುಕ ಕಾಣುತ್ತಿದ್ದ ಲೋಕೇಶ್‌ ದಿವ್ಯಾಂಗರಾದರು. ಆದರೆ ಈಗ ಜಗತ್ತೇ ಲೋಕೇಶ್‌ ಅವರ ಸಾಧನೆಯನ್ನು ಮೆಚ್ಚಿ ಕೊಂಡಾಡುತ್ತಿದೆ. ಅವರು ದಿವ್ಯಾಂಗ ಎಂದು ಯಾರೂ ಹೇಳುತ್ತಿಲ್ಲ.

ತನ್ನಂತೆಯೇ ಬೆನ್ನುಮೂಳೆ ಮುರಿದುಕೊಂಡು ಕಷ್ಟದಲ್ಲಿ ಬದುಕನ್ನು ಸಾಗಿಸುತ್ತಿದ್ದ ಅನೇಕರಿಗೆ ಲೋಕೇಶ್‌ ಆಶ್ರಯ ನೀಡಿದರು. INVOKE ಎಂಬ ಸಂಸ್ಥೆಯನ್ನು ಕಟ್ಟಿ ನೆರವು ನೀಡಲಾರಂಭಿಸಿದರು. ಈಜು ಮತ್ತು ಸ್ನೂಕರ್‌ ಆಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದಿವ್ಯಾಂಗರಿಗಾಗಿಯೇ ಕರ್ನಾಟಕ ರಾಜ್ಯ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆಯನ್ನು ಕಟ್ಟಿದ್ದಾರೆ. ಭಾರತೀಯ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಫೆಡರೇಷನ್‌ ಸಂಸ್ಥೆಯನ್ನೂ ಕಟ್ಟಿದ್ದಾರೆ. ಜಾಗತಿಕ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆ ಈ ಕನ್ನಡಿಗನ ಈ ಸಂಸ್ಥೆಗೆ ಮಾನ್ಯತೆ ನೀಡಿದೆ. ಮುಂದಿನ ವರ್ಷ ಭಾರತದಲ್ಲಿ ಅಂತಾರಾಷ್ಟ್ರೀಯ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಚಾಂಪಿಯನ್‌ಷಿಪ್‌ ನಡೆಸಲು ಅಂತಾರಾಷ್ಟ್ರೀಯ ಫೆಡರೇಷನ್‌ ಅನುಮತಿ ನೀಡಿದೆ.

ಸಾಮಾನ್ಯ ಹುಡುಗ ಅಸಮಾನ್ಯನಾದ: ಮಾತಿಗಾಗಿ ನಾವು ಹೇಳುವುದಿದೆ, “ಆಗುವುದೆಲ್ಲ ಒಳ್ಳೆಯದಕ್ಕೇ” ಎಂದು. ಲೋಕೇಶ್‌ ಅವರ ಬದುಕಿನಲ್ಲಿ ಆ ದುರಂತ ಸಂಭವಿಸಬಾರದಿತ್ತು. ಆದರೆ ಸಂಭವಿಸಿದೆ. ಬೆಂಗಳೂರಿನ ಕೆಎಲ್‌ಇ ಕಾಲೇಜಿನಲ್ಲಿ ಬಿಕಾಂ ಪದವಿ ಗಳಿಸಿರುವ ಲೋಕೇಶ್‌ ಅಂದು ದುರಂತ ಸಂಭವಿಸದೇ ಇರುತ್ತಿದ್ದರೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಇರುತ್ತಿದ್ದ. ದುರಂತ ಸಂಭವಿಸಿದ ನಂತರ ಲೋಕೇಶ್‌ ಅವರನ್ನು ಜಗತ್ತೇ ನೋಡುತ್ತಿದೆ. ಈಜು ಮತ್ತು ಬಿಲಿಯರ್ಡ್ಸ್‌ನಲ್ಲಿ ಲೋಕೇಶ್‌ ಮಾಡಿರುವ ಸಾಧನೆ ಅಪಾರ. ಬಿಲಿಯರ್ಡ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಲೋಕೇಶ್‌ ಹತ್ತು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಪದಕ ಗೆಲ್ಲುವುದರ ಜೊತೆಯಲ್ಲಿ ವಿಶ್ವ ranking ನಲ್ಲಿ 16ನೇ ಸ್ಥಾನದಲ್ಲಿದ್ದಾರೆ.

ಕರ್ನಾಟದಕಲ್ಲೇ 30 ಪ್ರೋ. ಆಟಗಾರರು!:  ಲೋಕೇಶ್‌ಗೆ ಹೊಸ ಬದುಕು ನೀಡಿದ್ದು ಕ್ರೀಡೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಮಾತ್ರವಲ್ಲ ಆಸಕ್ತರನ್ನು ಭೇಟಿ ಮಾಡಿ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಬಗ್ಗೆ ಅರಿವು ಮೂಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ನೋಂದಾಯಿತ 30 ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಆಟಗಾರರಿದ್ದಾರೆ. ದೇಶದಲ್ಲಿ ಒಟ್ಟು 110ಕ್ಕೂ ಹೆಚ್ಚು ದಿವ್ಯಾಂಗ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಆಟಗಾರರನ್ನು ಗುರುತಿಸಿದ್ದಾರೆ. ವಿವಿಧ ಜಾಗತಿಕ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಲೋಕೇಶ್‌ ಈಗಾಗಲೇ 10 ದೇಶಗಳನ್ನು ಸುತ್ತಿ ಬಂದಿದ್ದಾರೆ. ಮುಂದಿನ ದಿವ್ಯಾಂಗರ ವಿಶ್ವ ಸರಣಿ ಥಾಯ್ಲೆಂಡ್‌ನಲ್ಲಿ ನಡೆಯಲಿದೆ. ದೇಶದ ಟಾಪ್‌ 5 ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲೂ ದಿವ್ಯಾಂಗರ ಅಂತಾರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ ಎಂದು ಲೋಕೇಶ್‌ ತಿಳಿಸಿದ್ದಾರೆ.

ಸಿನಿಮಾ ಮತ್ತು ರಂಗಭೂಮಿ: ಲೋಕೇಶ್‌ ಅಪಘಾತ ಸಂಭವಿಸುವುದಕ್ಕೆ ಮುನ್ನ ರಂಗ ಭೂಮಿ ಹಾಗೂ ಬೆಳ್ಳಿ ಪರದೆಯ ಮೇಲೆ ಹೀರೋ ಆಗಿದ್ದ. ಆಗ ಕನ್ನಡಿಗರು ಮಾತ್ರ ನೋಡುತ್ತಿದ್ದರೇನೋ. ಆದರೆ ಈಗ ಜಗತ್ತೇ ಲೋಕೇಶ್‌ ಅವರ ಸಾದನೆಯನ್ನು ಮೆಚ್ಚುತ್ತಿದೆ. ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಲೋಕೇಶ್‌ 20 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಖಾಸಗಿ ಚಾನೆಲ್‌ಗಳಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿಚ್ಚ ಸದೀಪ್‌ ನಟಿಸಿರುವ ಪೈಲ್ವಾನ್‌ ಸಿನಿಮಾದ ಪ್ರೊಡಕ್ಷನ್‌ ಕಂಟ್ರೋಲರ್‌ ಹಾಗೂ ಹಲವು ದಾರಾವಾಹಿಗಳಲ್ಲೂ ಪ್ರೊಡಕ್ಷನ್‌ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದಾರೆ.

ಸವಾಲುಗಳನ್ನೇ ಗೆದ್ದ ಲೋಕೇಶ್‌: ಬದುಕಿನ ಪ್ರತಿಯೊಂದು ಸಲವಾಲುಗಳೂ ನಮ್ಮ ಬದುಕಿನ ಪರೀಕ್ಷೆಯಾಗಿರುತ್ತದೆ. ನಾವು ಅವುಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಿಗುತ್ತದೆ. ಲೋಕೇಶ್‌ ಅವರ ಬದುಕಿನ ಹಾದಿಯನ್ನು ಹಿಂದಿರುಗಿ ನೋಡಿದಾಗ ಅವರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. “ನಾವು ಪ್ರಾಯೋಜಕತ್ವಕ್ಕಾಗಿ, ಯಾವುದೋ ನೆರವಿಗಾಗಿ ನಮ್ಮ ಕಷ್ಟಗಳನ್ನು ಯಾರಲ್ಲೂ ಹಂಚಿಕೊಳ್ಳುವುದಿಲ್ಲ. ಕ್ರೀಡೆ ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ಹುಟ್ಟುಹಾಕಿದೆ. ಆ ಶಕ್ತಿಯಲ್ಲಿಯೇ ಇಷ್ಟು ಯಶಸ್ಸಿನ ಹೆಜ್ಜೆಗಳನ್ನು ಹಾಕಲು ಸಾಧ್ಯವಾಯಿತು. ನನ್ನಂತೆ ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎಂಬುದು ನನ್ನ ಬದುಕಿನ ಗುರಿ. ವ್ಹೀಲ್‌ ಚೇರ್‌ನಲ್ಲೇ ಪ್ರಯಾಣ ಮಾಡುತ್ತೇನೆ. ನನಗೆ ಬಂದ ಕಷ್ಟಗಳು ನಾನು ಯಾರು ಎಂಬುದನ್ನು ನನ್ನನ್ನೇ ಪ್ರಶ್ನಿಸುವಂತೆ ಮಾಡಿವೆ. ಒಮ್ಮೊಮ್ಮೆ ಅನಿಸುವುದು ನಾನು ಒಬ್ಬ ಸಾಮಾನ್ಯ ಹುಡುಗನಾಗಿರುತ್ತಿದ್ದರೆ ಇದೆಲ್ಲ ಮಾಡಲು ಸಾಧ್ಯವಾಗಿರುತ್ತಿತ್ತೋ ಇಲ್ಲವೋ? ಎಂದು. ನನ್ನ ದೇಹ ಮಾತ್ರ ದಿವ್ಯಾಂಗವಾಗಿದೆ. ಆದರೆ ನನ್ನ ಮನಸ್ಸು ಬಲಿಷ್ಠವಾಗಿದೆ. DISability ಯ “DIS” ತೆಗೆದು ಹಾಕಿ ಕೇವಲ ability ಕಡೆಗೆ ಫೋಕಸ್‌ ಮಾಡಬೇಕು. ಹಾಗಿದ್ದಲ್ಲಿ ಮಾತ್ರ ಈ ಸಮಾಜದಲ್ಲಿ ಸಮರ್ಥವಾಗಿ ಎದ್ದು ನಿಲ್ಲಲು ಸಾಧ್ಯ.” ಎಂದು ಲೋಕೇಶ್‌ ಹೇಳುವ ಮಾತು ಸ್ಫೂರ್ತಿಯ ಸಾಗರದಂತೆ.

Related Articles