INDvPAK ದ್ವೇಷದ ಮಾರುಕಟ್ಟೆಯಲ್ಲಿ ಹಣವೇ ಚಾಂಪಿಯನ್
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡು ದೇಶಗಳ ನಡುವಿನ ವೈರತ್ವ, ದ್ವೇಷ ಹಾಗೂ ಪೈಪೋಟಿಯನ್ನೇ ನಗದು ಮಾಡಿಕೊಳ್ಳುತ್ತಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ. ಇಲ್ಲಿ ದೇಶಪ್ರೇಮ, ಕ್ರೀಡಾಸ್ಫೂರ್ತಿ ಹಾಗೂ ಜನರ ಭಾವನೆಗಳಿಗಿಂತ ಹಣ ಮುಖ್ಯ. How International Cricket Council making money by encashing INDO PAK cricket rivalry?
ಪಾಕಿಸ್ತಾನದಲ್ಲಿ ಆಡಲು ಸಿದ್ಧವೆಲ್ಲವೆಂದು ಭಾರತದ ಹೊರತಾಗಿ ಬೇರೆ ಯಾವುದೇ ರಾಷ್ಟ್ರ ಹೇಳಿರುತ್ತಿದ್ದರೆ ಆ ರಾಷ್ಟ್ರವನ್ನು ಕೈ ಬಿಟ್ಟು ಟೂರ್ನಿ ಮುಂದುವರೆಯುತ್ತಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಒಪ್ಪದಿದ್ದಾಗ ಪಾಕ್ ಮತ್ತು ಐಸಿಸಿ ಒಂದು ಒಪ್ಪಂದಕ್ಕೆ ಬಂದು ಭಾರತಕ್ಕೆ ಅನುಕೂಲವಾಗು ರೀತಿಯಲ್ಲಿ ದುಬೈ ಆಯ್ಕೆ ಮಾಡಲಾಯಿತು. ಕಾರಣ ಹರಿದು ಬರುವ ಹಣಕ್ಕೆ ದೇಶಪ್ರೇಮ, ದ್ವೇಷ ಯಾವುದೂ ಗೊತ್ತಿಲ್ಲ. ದ್ವೇಷದ ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಳ್ಳುವುದೇ ಮುಖ್ಯ.
1947 ರಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ವೈರತ್ವ ಮನೆ ಮಾಡಿದೆ. ಇದಕ್ಕೆ ಕಾರಣ ಎರಡೂ ದೇಶಗಳಿಗೂ ಗೊತ್ತಿದೆ. ಆದರೂ ಭಾರತ ಹಲವು ಬಾರಿ ಅವಕಾಶವನ್ನು ನೀಡಿತ್ತು. ಆದರೆ ಪಾಕಿಸ್ತಾನ ತನ್ನದೇ ಆದ ಕುತಂತ್ರವನ್ನು ಬಳಸಿ ಕಾಲು ಕೆದರಿ ಜಗಳ ಕಾಯುತ್ತಿತ್ತು. ಪ್ರತಿ ಬಾರಿಯೂ ಯುದ್ಧವಾದಾಗ ಭಾರತ ಸೂಕ್ತ ಉತ್ತರ ನೀಡಿತ್ತು. ಆ ನಂತರ ನಡೆದ ಭಯೋತ್ಪಾಕದರ ದಾಳಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗುವುದು, ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬರುವುದು 2012-13ರಿಂದ ನಿಂತಿತ್ತು. ಐಸಿಸಿ ಟೂರ್ನಿಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತದ್ದವು ಬಿಟ್ಟರೆ ಎರಡು ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುತ್ತಿಲ್ಲ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ವೈರತ್ವದ ಪಂದ್ಯ. ಅದನ್ನು ಸಾಂಪ್ರದಾಯಿಕ ಎದುರಾಳಿಗಳು, ಬದ್ಧ ಎದುರಾಳಿಗಳು, ಬದ್ಧ ವೈರಿಗಳು ಎಂದೆಲ್ಲ ಬಣ್ಣಿಸುತ್ತಾರೆ. ಐಸಿಸಿ ವೇಳಾಪಟ್ಟಿಯನ್ನು ಸಿದ್ಧ ಮಾಡುವಾಗ ಭಾರತ ಹಾಗೂ ಪಾಕಿಸ್ತಾನವನ್ನು ಯಾವಾಗಲೂ ಒಂದೇ ಗುಂಪಿನಲ್ಲಿ ಸೇರಿಸುವುದು ಇದೇ ಕಾರಣಕ್ಕಾಗಿ. ಎರಡು ದೇಶಗಳ ನಡುವಿನ ಕ್ರಿಕೆಟ್ ಪ್ರೀತಿ, ಅಭಿಮಾನಿಗಳ ಸಂಖ್ಯೆ, ಪ್ರೇಕ್ಷಕರ ಸಂಖ್ಯೆ, ವೀಕ್ಷಕರ ಸಂಖ್ಯೆ ಎಲ್ಲವನ್ನೂ ಗಮನಿಸಿ, ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ ಸಿದ್ಧಪಡಿಸುತ್ತದೆ. ಕರಾಜಿಯಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಸಾಮಾನ್ಯ ಟಿಕೆಟ್‌ನ ಬೆಲೆ 2000 ರೂ. ಇದ್ದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿಕೆಟ್ ಬೆಲೆ ಎರಡುಪಟ್ಟು ಹೆಚ್ಚಿಗೆ ಇರುತ್ತದೆ. ಮತ್ತೆ ಅವುಗಳು ಹೆಚ್ಚಾಗಿ ಸಿಗುವುದೇ ಕಾಳಸಂತೆಯಲ್ಲಿ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಇತರ ಎರಡು ದೇಶಗಳ ನಡುವೆ ಪಂದ್ಯ ನಡೆಯುತ್ತಿದ್ದರೆ ಜಾಹೀರಾತುದಾರರು ಹೆಚ್ಚಿನ ಆಸಕ್ತಿ ವಹಿಸುವುದಿಲ್ಲ. ಆದರೆ ಇಂಡೋ-ಪಾಕ್ ಪಂದ್ಯ ಎಂದಾಗ ನಿಮಿಷಕ್ಕೆ 3-4 ಕೋಟಿ ರೂ. ವ್ಯಯ ಮಾಡಲು ಕಂಪೆನಿಗಳು ಮುಂದೆ ಬರುತ್ತವೆ. ಉದಾಹರಣೆಗೆ ಚಾಂಪಿಯನ್ಸ್ ಟ್ರೋಫಿಯ ಆದಾಯ 500 ಮಿಲಿಯನ್ ಡಾಲರ್ ಎಂದಿಟ್ಟುಕೊಂಡರೆ ಕೇವಲ ಭಾರತ ಹಾಗೂ ಪಾಕಿಸ್ತಾನದ ಪಂದ್ಯದಿಂದಲೇ 300 ಮಿಲಿಯನ್ ಡಾಲರ್ ಆದಾಯ ಬಂದಿರುತ್ತದೆ. ನಾಳೆಯ ಪಂದ್ಯಕ್ಕೆ 11 ಪ್ರಾಯೋಜಕರು 100 ಕ್ಕೂ ಹೆಚ್ಚು ಬ್ರಾಂಡ್‌ಗಳು ನೂರಾರು ಕೋಟಿ ಜನರ ಕಣ್ಣ ಮುಂದೆ ಹಾದು ಹೋಗಲಿವೆ. ಹೀಗಿರುವಾಗ ಭಾರತ ಹಾಗೂ ಪಾಕಿಸ್ತಾನ ನಡುವಿನ ವೈಷಮ್ಯದಲ್ಲಿ ಹಣ ಮಾಡುತ್ತಿರುವುದು ನಿಜವಲ್ಲವೇ?
ನಮ್ಮ Sports Mail YouToube ಚಾನೆಲ್ subscribe ಆಗಿ ಪ್ರೋತ್ಸಾಹಿಸಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ವೈಷಮ್ಯವನ್ನು ರಾಜಕೀಯ ಪಕ್ಷಗಳು ಸದುಪಯೋಗಪಡಿಸಿಕೊಳ್ಳುತ್ತಿವೆ. ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಐಸಿಸಿ ಕೂಡ ಹಾಗೆಯೇ. ಚಾಂಪಿಯನ್ಸ್ ಟ್ರೋಫಿ ಮನೆ ಹಾಳಾಗಲಿ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಮೂಲಕ ಹಣದ ಹೊಳೆ ಹರಿದುಬರಲಿ ಎಂಬುದೇ ಕ್ರಿಕೆಟ್ ವ್ಯಾಪಾರಿಗಳ ಗುರಿ. ದೇಶಭಿಮಾನ ಎಲ್ಲರಲ್ಲಿಯೂ ಇದೆ. ಆದರೆ ಬೆಟ್ಟಿಂಗ್ ಕಟ್ಟುವಾಗ ಭಾರತ ಗೆಲ್ಲುತ್ತದೆ ಎಂದು 100 ರೂ. ಕಟ್ಟಿದರೆ. ಇನ್ನೊಂದೆಡೆ ಪಾಕಿಸ್ತಾನ ಗೆಲ್ಲುತ್ತದೆ ಎಂದು 25 ರೂಗಳನ್ನಾದರೂ ಕಟ್ಟುವ ದೇಶಪ್ರೇಮಿಗಳು ನಮ್ಮ ಪಕ್ಕದಲ್ಲೇ ಮ್ಯಾಚ್ ನೋಡುತ್ತಿರುತ್ತಾರೆ. ಪಾಕಿಸ್ತಾನ ಹಾಗೂ ಭಾರತದ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿ ನಗುತ್ತ, ಜೋಕ್ ಮಾಡುತ್ತ ಇರುವ ದೃಶ್ಯವನ್ನು ನೇರ ಪ್ರಸಾರ ಮಾಡುವವರು ತೋರಿಸುವುದಿದೆ, ಆದರೆ ಕ್ರಿಕೆಟ್ ಜಗತ್ತಿಗೆ ಈ ಎರಡು ದೇಶಗಳ ನಡುವಿನ ವೈರತ್ವ, ವೈಷಮ್ಯ ಅಥವಾ ದ್ವೇಷದ ಪೈಪೋಟಿ ಹಸಿರಾಗಿಯೇ ಇರಬೇಕು ಏಕೆಂದರೆ ಸದ್ಯದ ಮಾರುಕಟ್ಟೆಯಲ್ಲಿ ವೈಷಮ್ಯಕ್ಕೆ ಒಳ್ಳೆಯ ರೇಟ್ ಇದೆ. ಜೊತೆಯಲ್ಲಿ ಡ್ರೀಮ್ ಇಲೆವೆನ್ APP ಇದೆ.
ಭಾರತ ಮೇಲುಗೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ 135 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಾಕಿಸ್ತಾನ 73 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 57 ಪಂದ್ಯಗಳನ್ನು ಗೆದ್ದಿದೆ. 5 ಪಂದ್ಯಗಳ ಫಲಿತಾಂಶವಿಲ್ಲ. 2010ರಿಂದ ಇದುವರೆಗಿನ ಪಂದ್ಯಗಳಲ್ಲಿ ಒಟ್ಟು ಆಡಿದ 17 ಪಂದ್ಯಗಳಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ 3 ಗೆದ್ದರೆ ಭಾರತ 2 ಗೆದ್ದಿದೆ. ಆದರೆ ಏಕದಿನ ವಿಶ್ವಕಪ್‌ನಲ್ಲಿ ಭಾರತ 8-0 ಮುನ್ನಡೆ.
ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನ ಅವ್ಯವಸ್ಥೆಯನ್ನು ಕಂಡಾಗ ಪಾಕ್ ಕ್ರಿಕೆಟ್ ಮಂಡಳಿ ಹಣದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆಯೇ ವಿನಃ ಆಟಗಾರರಿಗೆ ಉತ್ತಮ ಸೌಲಭ್ಯ ನೀಡುತ್ತಿಲ್ಲ. ದೇಶೀಯ ಕ್ರಿಕೆಟಿಗರಿಗೆ ಬೆಲೆಯೇ ಇಲ್ಲದಾಗಿದೆ. ಕೋಚ್‌ಗಳನ್ನು ನಿಯೋಜಿಸಲು ಪಾಕಿಸ್ತಾನ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ, ಆದರೆ ದೇಶೀಯ ಕ್ರಿಕೆಟಿಗರು ಹಣ ಇಲ್ಲದೆ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದಾರೆ. ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್‌ಗೆ ಹೊಸ ಪ್ರತಿಭೆಗಳ ಪ್ರವೇಶ ಕಡಿಮೆಯಾಗುತ್ತಿದೆ. ತಂಡದ ಮನೋಬಲ ಕುಸಿದಿದ್ದು, ಅಂತಾರಾಷ್ಟ್ರೀಯ ಗುಣಮಟ್ಟ ಪೇಲವವಾಗುತ್ತಿದೆ.