Wednesday, December 4, 2024

ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್‌!

ಲಂಡನ್‌: ಫುಟ್ಬಾಲ್‌ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್‌ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್‌ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ ಶ್ರೀಮಂತ ಕ್ಲಬ್‌ಗಳಲ್ಲಿ ಒಂಬತ್ತೇ ಸ್ಥಾನದಲ್ಲಿರುವ ಚೆಲ್ಸಿ ಫುಟ್ಬಾಲ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದರೆ ನಿಜವಾಗಿಯೂ ಅದು ಯೋಗದ ಶಕ್ತಿ. How the Kerala’s Yoga Guru Changed the world-famous football club Chelsea FC.

ವಿನಯ್‌ ಮೆನನ್‌ ಮೂಲತಃ ಕೇರಳದವರು. ಹಿರಿಯರಿಂದ ಯೋಗ ಕಲಿತು ತರಬೇತಿ ನೀಡುತ್ತಿದ್ದರು. ದುಬೈನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಒಮ್ಮೆ ದುಬೈಯ ಐಶಾರಾಮಿ ಹೊಟೇಲ್‌ನಲ್ಲಿ ತಂಗಿದ್ದ ಅಬ್ರಾಮೊವಿಕ್‌ ಕುಟುಂಬಕ್ಕೆ ಮೆನನ್‌ ಅವರಿಂದ ಯೋಗದ ಅರಿವಾಗುತ್ತದೆ. ಯೋಗದಿಂದ ಅವರು ಪ್ರಭಾವಿತರಾಗಿ ಮೆನನ್‌ ಅವರನ್ನು ಲಂಡನ್‌ಗೆ ಕರೆದೊಯ್ಯುತ್ತಾರೆ. ಮೆನನ್‌ ಅಲ್ಲಿ ಯೋಗ ತರಗತಿಗಳನ್ನು ನೀಡುತ್ತಿದ್ದರು. ತರಗತಿಯಿಂದ ಪ್ರಭಾವಿತರಾದ ಚೆಲ್ಸಿ ಮಾಲೀಕ ಅಬ್ರಾಮೊವಿಕ್‌ ತನ್ನ ತಂಡದ ಮೇಲೆ ಯೋಗ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂದು ಯೋಚಿಸಿದರು. ಚೆಲ್ಸಿ ಆಟಗಾರರು ತರಬೇತಿ ಪಡೆಯುತ್ತಿರುವ ಕೊಬ್‌ಹ್ಯಾಮ್‌ ಅಂಗಣಕ್ಕೆ ವಿನಯ್‌ ಮೆನನ್‌ ಅವರನ್ನು ಕಳುಹಿಸಿದರು. ಅಲ್ಲಿ ತಂಡದ ಕ್ಷೇಮ ನೋಡಿಕೊಳ್ಳುವ (ವೆಲ್‌ನೆಸ್‌) ಕೆಲಸಕ್ಕೆ ಸೇರಿದರು. ಅಲ್ಲಿಂದ ಚೆಲ್ಸಿಯ ಅದೃಷ್ಟವೇ ಬದಲಾಯಿತು. ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ವೆಲ್‌ನೆಸ್‌ ಕೋಚ್‌‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೆಲ್ಸಿ ಫುಟ್ಬಾಲ್‌ ಕ್ಲಬ್‌ಗೆ ಈ ರೀತಿಯಲ್ಲಿ ಪ್ರವೇಶ ಮಾಡಿದವರು ಯಾರೂ ಇಲ್ಲ. ಆಟಗಾರರನ್ನಾದರೆ ಹಣ ಕೊಟ್ಟು ಖರೀದಿಸುತ್ತಾರೆ. ಆ ಕೆಲಸ ಮಾಡಲು ಮ್ಯಾನೇಜರ್‌ ಇರುತ್ತಾರೆ. ಆದರೆ ಮಾಲೀಕರೇ ಬಂದು ಕೆಲಸಕ್ಕೆ ಸೇರಿಸಿರುವುದು ಚೆಲ್ಸಿ ಇತಿಹಾಸದಲ್ಲೇ ಮೊದಲು.

2010 ರಿಂದ ಚೆಲ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿನಯ್‌ ಮೆನನ್‌ ಆಗಮಿಸಿದ ನಂತರ ಚೆಲ್ಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿತು. ಮಾಲೀಕರು ವಿನಯ್‌ ಮೆನನ್‌ ಅವರನ್ನು ಕರೆದು ಟ್ರೋಫಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಭಾರತೀಯ ಯೋಗಕ್ಕೆ ಸಿಕ್ಕಿದ ಯೋಗ. ಕಳೆದ 13 ವರ್ಷಗಳಿಂದ ಚೆಲ್ಸಿ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಮೆನನ್‌ ಫುಟ್ಬಾಲ್‌ ಜಗತ್ತಿನ ಶ್ರೇಷ್ಠ ಕೋಚ್‌ಗಳಾದ ಕಾರ್ಲೋ ಆನ್ಸೆಲೊಟಿ, ರಾಫೆಲ್‌ ಬೆನಿಟೇಜ್‌, ಜೋಸ್‌ ಮೌರಿನೋ, ಆಂಟೋನಿಯೋ ಕಾಂಟೆ ಮತ್ತು ಥಾಮಸ್‌ ಟಚೆಲ್‌ ಅವರೊಂದಿಗೆ ಕೆಲಸ ಮಾಡಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

2022ರಲ್ಲಿ ಅಬ್ರಾಮೊವಿಕ್‌ ತಂಡವನ್ನು ಟಾಡ್‌ ಬೊಹ್ಲಿ ಮತ್ತು ಕ್ಲಿಯರ್‌ಲೇಕ್‌ ಕ್ಯಾಪಿಟಲ್‌ಗೆ ಮಾರಿದಾಗಲೂ ವಿನಯ್‌ ಮೆನನ್‌ ಅವರ ಕೆಲಸಕ್ಕೆ ಅಡ್ಡಿಯಾಗಲಿಲ್ಲ. ವಿನಯ್‌ ಮೆನನ್‌ ಅವರ ಯೋಗ ತಂಡದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿತೆಂದರೆ ತಂಡ ಎರಡು ಬಾರಿ ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌, ಎರಡು ಬಾರಿ ಯುಇಎಫ್‌ಎ , ಯೂರೋಪ್‌ ಲೀಗ್‌, ಒಂದು ಬಾರಿ ಯುಇಎಫ್‌ಎ ಸೂಪರ್‌ ಕಪ್‌, ಫಿಫಾ ವಿಶ್ವ ಕ್ಲಬ್‌ ವಿಶ್ವಕಪ್‌, ಎಫ್‌ಎ ಕಪ್‌ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿತು.

ಧ್ಯಾನ, ಮಾನಸಿಕ ಆರೋಗ್ಯ, ಮನಸ್ಸಿನ ಋಣಾತ್ಮಕ ಯೋಚನೆಗಳನ್ನು ತೆಗೆದುಹಾಕುವುದು, ಆಧ್ಯಾತ್ಮದ ಬಗ್ಗೆ ಅರಿವು, ಭಾವುಕತೆಯ ಸಮತೋಲನವನ್ನು ಕಾಪಾಡುವುದು ಈ ಎಲ್ಲ ಯೋಗದಿಂದ ಮೆನನ್‌ ಆಟಗಾರರಿಗೆ ತಿಳಿಸುತ್ತಿದ್ದರು. ಇದು ತಂಡದ ಯಶಸ್ಸಿಗೆ ಕಾರಣವಾಯಿತು. 2022ರ ಫಿಫಾ ವಿಶ್ವಕಪ್‌ನಲ್ಲಿ ಬೆಲ್ಜಿಯಂ ಫುಟ್ಬಾಲ್‌ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ಸದ್ಯ ದುಬೈನಲ್ಲಿ ನೆಲೆಸಿದ್ದು, ಬುರ್ಜೀಲ್‌ ಹೋಲ್ಡಿಂಗ್ಸ್‌/ವಿಪಿಎಸ್‌ ಹೆಲ್ತ್‌ ಕೇರ್‌ನ ಸ್ಪೋರ್ಟ್ಸ್‌ವೆಲ್ನೆಸ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles