ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌ನ) ಕ್ರಿಕೆಟ್ ಸಂಭ್ರಮ ಈಗ ಹುಬ್ಬಳ್ಳಿಯಲ್ಲಿ ಕೇಂದ್ರೀಕರಿಸಿದೆ. ವಿನಯ್ ಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಕೋಟೆಯಲ್ಲಿ ಶಿವಮೊಗ್ಗ ಲಯನ್ಸ್ ಪ್ರಭುತ್ವ ಸಾಧಿಸಲು ಹೋರಾಟ ನಡೆಸಲಿದೆ. ಹುಬ್ಬಳ್ಳಿಯ ರಾಜಾನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ ಆತಿಥ್ಯಕ್ಕೆ ಸಜ್ಜಾಗಿದೆ.
ವಿನಯ್ ಕುಮಾರ್ ಪಡೆ ಬಿಜಾಪುರ ಬುಲ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಲಿದೆ. ಶಿವಮೊಗ್ಗ ಲಯನ್ಸ್ ತಂಡ ಋತುವಿನ ಮೊದಲ ಪಂದ್ಯವನ್ನಾಡಲಿದೆ. ನಾಯಕ ಅಭಿಮನ್ಯು ಮಿಥುನ್ ದುಲೀಪ್ ಟ್ರೋಫಿಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಂಡ ಅವರ ಸೇವೆಯಿಂದ ವಂಚಿತವಾಗಲಿದೆ. ಇದರಿಂದಾಗಿ ಯುವ ಆಟಗಾರ ಅನಿರುಧ್ ಜೋಶಿ ತಂಡವನ್ನು ಮುನ್ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಟೈಗರ್ಸ್ ಎದುರಾಳಿ ಲಯನ್ಸ್
ಸ್ಪೋರ್ಟ್ಸ್ ಮೇಲ್ ವರದಿ
ಮಿಥುನ್ ಅವರ ಅನುಪಸ್ಥಿತಿ ತಂಡವನ್ನು ಕಾಡುವುದು ನಿಜ, ಆದರೆ ನಮ್ಮಲ್ಲಿ ಆದಿತ್ಯ ಸೋಮಣ್ಣ ಇದ್ದಾರೆ, ಅವರಿಗೆ ಕೆಪಿಎಲ್ ಆಡಿದ ಅಪಾರ ಅನುಭವವಿದೆ. ಇತರ ಆಟಗಾರರಿಗೆ ಜವಾಬ್ದಾರಿಯುತ ಪ್ರದರ್ಶನ ತೋರಲು ಇದೊಂದು ಅವಕಾಶ. ಎಂದು ಜೋಶಿ ಹೇಳಿದ್ದಾರೆ.
ಮಿಥುನ್ ಅವರೊಂದಿಗೆ ಹಲವಾರು ಪಂದ್ಯಗಳನ್ನಾಡಿರುವ ವಿನಯ್ ಕುಮಾರ್, ಮೊದಲ ಪಂದ್ಯದಲ್ಲಿ ಕಂಡಿರುವ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿಲ್ಲ ಎಂದು ತಂಡದ ಆಟಗಾರರನ್ನು ಎಚ್ಚರಿಸಲು ಅವರು ಮರೆತಿಲ್ಲ. ಉತ್ತಮವಾಗಿ ಆಡಿದರೆ ಯಾವುದೇ ಬಲಿಷ್ಠ ತಂಡವನ್ನು ಸೋಲಿಸಬಹುದು ಎಂಬುದು ಅನುಭವಿ ವಿನಯ್ ಕುಮಾರ್ ಅವರ ಲೆಕ್ಕಾಚಾರ.
ಹುಬ್ಬಳ್ಳಿ ತಂಡಕ್ಕೆ ಅನುಕೂಲದ ಅಂಶವೆಂದರೆ ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹ. ನಮ್ಮ ಅಭಿಮಾನಿಗಳಿಗೂ ನಾವು ಗೆಲ್ಲಬೇಕೆಂಬ ಹಂಬಲವಿದೆ. ಅನಿರುಧ್ ಜೋಶಿ ಕೂಡ ಉತ್ತರ ಕರ್ನಾಟಕದವರು, ಆದ್ದರಿಂದ ಇತ್ತಂಡಗಳಿಗೂ ಪ್ರೋತ್ಸಾಹ ಇಲ್ಲಿ ಸಿಗುವುದು ಖಚಿತ.