ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ICC Cricket World Cup ನಲ್ಲಿ ನ್ಯೂಜಿಲೆಂಡ್ ತಂಡ 8 ವಿಕೆಟ್ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಿವೀಸ್ ತಂಡ ಬಾಂಗ್ಲಾವನ್ನು 245 ರನ್‌ಗೆ ಕಟ್ಟಿ ಹಾಕಿತು. ಲೊಕಿ ಫರ್ಗ್ಯುಸನ್ (3/49) ಉತ್ತಮ ಬೌಲಿಂಗ್ ಪ್ರದರ್ಶಿಸಿ ಪಂದ್ಯಶ್ರೇಷ್ಠರೆನಿಸಿದರು. ಬಾಂಗ್ಲಾ ಪರ ಮುಷ್ಫಿಕರ್ ರಹೀಂ 66 ರನ್ ಗಳಿಸಿ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿರು. ಟ್ರೆಂಟ್ ಬೋಲ್ಟ್ ಮತ್ತು ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಗಳಿಸಿದರೆ ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ 1 ವಿಕೆಟ್ ಗಳಿಸಿ ಬಾಂಗ್ಲಾದೇಶವನ್ನು ನಿಯಂತ್ರಿಸುವಲ್ಲಿ ಸಫಲರಾದರು.
246 ರನ್ ಜಯದ ಗುರಿ ಹೊತ್ತ ಕಿವೀಸ್ ಪಡೆ ಡಿವೋನ್ ಕಾನ್ವೆ 45 ರನ್ ಗಳಿಸಿ ಉತ್ತಮ ತಳಪಾಯ ಹಾಕಿದರು. ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ರಾಚಿನ್ ರವೀಂದ್ರ ಈ ಬಾರಿ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದರು.
ಏಳು ತಿಂಗಳಿಂದ ವೃತ್ತಿಪರ ಕ್ರಿಕೆಟ್‌ನಿಂದ ದೂರವಿದ್ದು ಮತ್ತೆ ಅಂಗಣಕ್ಕೆ ಕಾಲಿಟ್ಟ ನಾಯಕ ಕೇನ್ ವಿಲಯಮ್ಸನ್ ಅವರು ಆಕರ್ಷಕ 78 ರನ್ ಗಳಿಸಿಯೂ ಗಾಯಗೊಂಡು ಅಂಗಣದಿಂದ ಹೊರ ನಡೆಯಬೇಕಾಗಿ ಬಂದದ್ದು ನೋವಿನ ಸಂಗತಿಯಾಗಿತ್ತು. ಆದರೆ ನಾಯಕನ ಜವಾಬ್ದರಿ ಆಟ ಪ್ರದರ್ಶಿಸಿದ ವಿಲಿಯಮ್ಸನ್ ತಂಡಕ್ಕೆ ಆಗಲೇ ಜಯದ ಹಾದಿ ತೋರಿಸಿದ್ದರು. ಡೇರಿಲ್ ಮಿಚೆಲ್ ಅಜೇಯ 89 ರನ್ ಸಿಡಿಸಿ ಇನ್ನೂ 43 ಎಸೆತ ಬಾಕಿ ಇರುವಾಗಲೇ 8 ವಿಕೆಟ್ ಜಯ ತಂದುಕೊಟ್ಟರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು.