Friday, November 22, 2024

ಕ್ರಿಕೆಟ್‌ ವಿಶ್ವಕಪ್‌ನಿಂದ್‌ ನಿಮ್ಮ ವ್ಯಾಪಾರಕ್ಕೆ “ಕಿಕ್‌” ಸಿಕ್ಕಿದೆಯಾ?

ಭಾರತದಲ್ಲೀಗ ಕ್ರಿಕೆಟ್‌ ವಿಶ್ವಕಪ್‌ ಸಂಭ್ರಮ.ICC Cricket World Cup 2023 betting Mafia ಯಾವುದೇ ತಂಡ ಸೋಲಲಿ, ಗೆಲ್ಲಲಿ. ಅದರಿಂದ ಹೆಚ್ಚು ಲಾಭ ಪಡೆಯುವುದು ಬೆಟ್ಟಿಂಗ್‌ ಆಪ್‌ಗಳು ಮತ್ತು ಬಾರ್‌ಗಳು. 16,000 ಕೋಟಿ ರೂ. ಬೆಟ್ಟಿಂಗ್‌ ದಂಧೆಯಲ್ಲಿ ನಿಮ್ಮ ಪಾತ್ರವೇನು? ಕ್ರಿಕೆಟ್‌ನಿಂದ ಯಾರ ಆರ್ಥಿಕ ಸುಧಾರಣೆ ಆಗುತ್ತಿದೆ?

ಮದ್ಯ ಮಾರಾಟವನ್ನು ನಿಷೇಧಿಸಿದ್ದ ಗುಜರಾತ್‌ ರಾಜ್ಯ ಒಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಒಂದು ವಾರದ ಮಟ್ಟಿಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಪ್ರತಿಯೊಂದು ಬಾರ್‌ಗಳಲ್ಲಿಯೂ ಈಗ ದೈತ್ಯ ಪರದೆ, ಪ್ರತ್ಯೇಕವಾದ ಹಾಲ್‌, ಕ್ರಿಕೆಟ್‌ಗಾಗಿಯೇ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಬೆಟ್ಟಿಂಗ್‌ ಆಪ್‌ಗಳಲ್ಲಿ ಹಣ ವಿನಿಯೋಗಿಸಿ ಆ ತಂಡ ಕಲ್ಲಲಿ, ಈ ತಂಡ ಗೆಲ್ಲಲಿ, ಇವನು ಆಡಬೇಕು, ಅನು ಆಡಬಾರದು ಎಂದು ಲೆಕ್ಕ ಹಾಕುವವರಿಗೇನೂ ಕೊರತೆ ಇಲ್ಲ. ಭಾರತ ದೇಶಕ್ಕಾಗಿ ಜೀವ ಕೊಡಲು ಸಿದ್ಧ, ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ಒಂದು ಹಾಡುತ್ತ, ಪಾಕಿಸ್ತಾನವನ್ನು ದ್ವೇಷಿಸುವವರು ಬೆಟ್ಟಿಂಗ್‌ಗೆ ಹಣ ಕಟ್ಟುವಾಗ ಪಾಕಿಸ್ತಾನ ಗೆಲ್ಲುತ್ತದೆ ಎಂದು ಕಟ್ಟುವವರೂ ಇದ್ದಾರೆ. ಕ್ರೀಡೆಗೆ ಯಾವುದೇ ದ್ವೇಷವಿಲ್ಲ, ಗಡಿ ಇಲ್ಲ.ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಟ್ಕಾ ಮತ್ತು ಪಾನ್‌ ಮಸಾಲಕ್ಕೆ ನಿಷೇಧ ಹೇರಿದಾಗ ಏನೋ ಜಗತ್ತೇ ಬದಲಾಯಿತು ಎಂದು ಅಂದುಕೊಂಡಿದ್ದರು ಜನ, ಆದರೆ ಈ ಕಡೆ ಮದ್ಯ ನಿಷೇಧವಾಗಿದ್ದರೂ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು ರಾಜ್ಯದ ಆರ್ಥಿಕ ಬೆಳವಣಿಗೆಗೇ ಅನ್ನಬೇಕು.

2500 ಟಿಕೆಟ್‌ ಬೆಲೆ 25000! ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಪಂದ್ಯದ ವೇಳೆ ಜನರನ್ನು ಸೇರಿಸುವ ಸಲುವಾಗಿ ಅಹಮದಾಬಾದ್‌ನ ಬಿಜೆಪಿ ಘಟಕ 30000 ಟಿಕೆಟ್‌ಗಳನ್ನು ಉಚಿತವಾಗಿ ನೀಡಿ ಜೊತೆಯಲ್ಲಿ ಉಚಿತ ಉಪಹಾರವನ್ನೂ ಘೋಷಿಸಿತ್ತು. ಆದರೆ ಜನ ಬರಲೇ ಇಲ್ಲ. ಆದರೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಜನರಿಗೆ ಉಚಿತ ಟಿಕೆಟ್‌ ಕೊಡುವುದಿರಲಿ, 2500 ರೂ. ಮುಖ ಬೆಲೆಯ ಟಿಕೆಟನ್ನು 25,000 ರೂ.ಗಳಿಗೆ ಮಾರ್ಕೊಂಡು ತಿಂದರು.

ವಿಶ್ವಕಪ್‌ನಿಂದಾಗಿ ಹೊಟೇಲ್‌ ಉದ್ಯಮಗಳಿಗೂ ಅನುಕೂಲವಾಗಿದೆ. ಕ್ರಿಕೆಟ್‌ ಆತಿಥ್ಯ ವಹಿಸುವ ನಗರಗಳಲ್ಲಿ ಹೊಟೇಲ್‌ ರೂಮಿನ ಬೆಲೆಯನ್ನು 125% ರಿಂದ 300% ಏರಿಕೆಯಾಗಿದೆ. ಕಳೆದ ವಾರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ಹೊಟೇಲ್‌ ಮತ್ತು ಬಾರ್‌ ಮಾಲೀಕರು ಅಧಿಕ ಸಂಪಾದನೆ ಮಾಡುವುದು ಬಿಡಿ ಕ್ರೀಡಾಂಗಣದ ಸುತ್ತಮುತ್ತ ಖಾಲಿ ಗದ್ದೆ ಇರುವವರೂ ಪಾರ್ಕಿಂಗ್‌ ಮೂಲಕ ಲಕ್ಷಾಂತರ ಹಣ ಗಳಿಸಿರುತ್ತಾರೆ. ಸಾಮಾನ್ಯ ದಿನಗಳಲ್ಲಿ 4000 ರೂ.ಗಳಿಗೆ ರೂಮುಗಳನ್ನು ಬಾಡಿಗೆ ನೀಡುತ್ತಿದ್ದ ಜಿಂಜಿರ್‌ ಹೊಟೇಲ್‌ ಪಂದ್ಯದ ದಿನ ಬೆಲೆಯನ್ನು 50000ಕ್ಕೆ ಏರಿಸಿದೆ. ಬಿಯರ್‌ ಮಾರಾಟದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ಮಾಧ್ಯಮಗಳಲ್ಲಿ ಜಾಹೀರಾತು, ಟಿಕೆಟ್‌ ಮಾರಾಟದಲ್ಲಿ ಏರಿಕೆ, ಸಾರಿಗೆ ಇವುಗಳ ಮೂಲಕವೂ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಗೊಳ್ಳುವುದು ಸಹಜ.

ಅಡ್ಡ ಕಸುಬಿಗಳ ಆರ್ಥಿಕತೆ: ವಿಶ್ವಕಪ್‌ನಲ್ಲಿ ನ್ಯಾಯ ರೀತಿಯಲ್ಲಿ ವ್ಯವಹಾರ ಮಾಡುವ ಮೂಲಕ ಆರ್ಥಿಕ ಸುಧಾರಣೆ ಒಂದೆಡೆಯಾದರೆ ಅನ್ಯಾಯದ ಮಾರ್ಗದಲ್ಲೂ ಬದುಕುವವರಿದ್ದಾರೆ. ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಹೊಟೇಲ್‌ ಕೊಠಡಿ ಮಾರುವುದು, ಬೆಟ್ಟಿಂಗ್‌ನಲ್ಲಿ ಹಣ ಹೂಡುವುದು, 2000 ರೂ. ಟಿಕೆಟನ್ನು 25000ಕ್ಕೆ ಮಾರುವುದು ಇತ್ಯಾದಿ.

ಹೊಟೇಲ್‌ನವರು ಇಂದು ಗಳಿಸಿದರೆ ನಾಳೆ ಗ್ರಾಹಕರಿಲ್ಲದಾಗ ನಷ್ಟ ಅನುಭವಿಸುತ್ತಾರೆ. ಅದು ಉದ್ದಿಮೆಯಲ್ಲಿರುವುದು ಸಾಮಾನ್ಯ. ಆದರೆ ಕಷ್ಟದಲ್ಲಿ ಬದುಕನ್ನು ನಡೆಸುವವರು ಡ್ರೀಮ್‌ ಇಲೆವೆನ್‌ನಂಥ ಆಪ್‌ಗಳನ್ನು ಡೌನ್‌ ಲೋಡ್‌ ಮಾಡಿಕೊಂಡು ಅದರಲ್ಲಿ ಹಣ ಹೂಡಿ, ಸಾಲದೆಂಬಂತೆ ಬುಕ್ಕಿಗಳ ಜೊತೆ ಬೆಟ್ಟಿಂಗ್‌ ಆಡಿ ಹಣ ಕಳೆದುಕೊಂಡ ತಲೆಬಿಸಿಗೆ ಮತ್ತೆ ಹೋಗುವುದು ಬಾರ್‌ಗೆ. ಇದರಿಂದ ಜನ ಸಾಮಾನ್ಯರ ಬದುಕು ಕ್ರಿಕೆಟ್‌ನಿಂದ ಬೀದಿಗೆ ಬರುವುದೂ ಇದೆ. ಕ್ರಿಕೆಟನ್ನೇ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ನಂಬಬೇಡಿ. ಬಿಂಬಿಸಬೇಡಿ. ಕ್ರಿಕೆಟ್‌ ಶ್ರೀಮಂತರನ್ನು ಶ್ರೀಮಂತಗೊಳಿಸುತ್ತಿದೆ ಆದರೆ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಕಾರಣ ಬೆಟ್ಟಿಂಗ್‌ ಮಾಫಿಯಾ. ಇದುವರೆಗೂ 16,000 ಕೋಟಿ ಬೆಟ್ಟಿಂಗ್‌ ವ್ಯವಹಾರವಾಗಿದೆ. ನಿಮ್ಮ ಮನೆಗೆ ಎಷ್ಟು ಬಂದಿದೆ ನೋಡಿಕೊಳ್ಳಿ.

Related Articles