Sunday, September 8, 2024

ಕಿವೀಸ್:‌ ಜಯ ಜಯ ಜಯ ಜಯ ಹೇ

ಚೆನ್ನೈ: ನ್ಯೂಜಿಲೆಂಡ್‌ ತಂಡ ವಿಶ್ವಕಪ್‌ ಪಂದ್ಯದಲ್ಲಿ ಅಫಘಾನಿಸ್ತಾನದ ವಿರುದ್ಧ 149 ರನ್‌ ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ ನಾಲ್ಕನೇ ಜಯ New Zealand four wins on the trot ದಾಖಲಿಸಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಅಫಘಾನಿಸ್ತಾನ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮಾಡುವಲ್ಲಿ ವಿಫಲವಾಯಿತು. ವಿಲ್‌ ಯಂಗ್‌ (54), ಗ್ಲೆನ್‌ ಫಿಲಿಪ್ಸ್‌ (71) ಹಾಗೂ ನಾಯಕ ಟಾಮ್‌ ಲಥಾಮ್‌ (68) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಕಿವೀಸ್‌ ಪಡೆ 6 ವಿಕೆಟ್‌ ನಷ್ಟಕ್ಕೆ ಸವಾಲಿನ 288 ರನ್‌ ಗಳಿಸಿತು. ಉತ್ತಮ ಬೌಲಿಂಗ್‌ ಪಡೆಯನ್ನು ಹೊಂದಿರುವ ಕಿವೀಸ್‌ ವಿರುದ್ಧ ಸಮರ್ಥ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲವಾದ ಅಫಘಾನಿಸ್ತಾನ ಕೇವಲ 34.4 ಓವರ್‌ಗಳಲ್ಲಿ 139 ರನ್‌ ಗಳಿಸಿ, 149 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್‌ ವಿರುದ್ಧ ತೋರಿದ ಪ್ರದರ್ಶನದ ಯಾವುದೇ ಹೋರಾಟವನ್ನು ಅಫ್ಘಾನ್‌ ಇಂದು ತೋರುವಲ್ಲಿ ವಿಫಲವಾಯಿತು. ರಹಮತ್‌ ಶಾ ಗಳಿಸಿದ 36 ರನ್‌ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ರನ್‌ ಆಗಿತ್ತು.

ಮಧ್ಯಮ ಕ್ರಮಾಂಕದಲ್ಲಿ 80 ಎಸೆತಗಳನ್ನೆದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್‌ ಮೂಲಕ 71 ರನ್‌ ಗಳಿಸಿದ ಫಿಲಿಪ್ಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಕಳೆದ ಬಾರಿ ಫೈನಲ್‌ನಲ್ಲಿ ಸೋಲಿನ ಆಘಾತ ಕಂಡಿದ್ದ ನ್ಯೂಜಿಲೆಂಡ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ಎಚ್ಚರಿಕೆಯ ಆಟವನ್ನು ಆಡುತ್ತಿದೆ. ಇದುವರೆಗಿನ ಪಂದ್ಯಗಳಿಗಿಂತ ಮುಂದಿನ ಪಂದ್ಯಗಳು ಕಿವೀಸ್‌ ಪಾಲಿಗೆ ಸವಾಲಿನ ಪಂದ್ಯಗಳೆನಿಸಿವೆ.

ಅಫಘಾನಿಸ್ತಾನದ ವಿರುದ್ಧ ಒಂದು ಹಂತದಲ್ಲಿ 109 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲೆಂಡ್‌ 110 ರನ್‌ ಗಡಿ ತಲಪುವಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವೃತ್ತಿಪರ ಆಟಗಾರರಿಂದ ಕೂಡಿದ್ದ ತಂಡ ಎಚ್ಚರಿಕೆಯೊಂದಿಗೆ ಸಲವಾಲಿನ ಮೊತ್ತ ದಾಖಲಿಸಿತು. ಐದು ಕ್ಯಾಚ್‌ ಮತ್ತು ಒಂದು ರನೌಟ್‌ ಅವಕಾಶವನ್ನು ಕೈ ಚೆಲ್ಲಿದ ಅಫಘಾನಿಸ್ತಾನ ಅದಕ್ಕೆ ತಕ್ಕ ಬೆಲೆ ತೆರಬೇಕಾಯಿತು.

Related Articles