ಸ್ಪೋರ್ಟ್ಸ್ ಮೇಲ್ ವರದಿ
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯಕ್ಕೆ ಕಳೆದ ಒಂದು ತಿಂಗಳಿಂದ ನೀಡುತ್ತಿರುವ ಜಾಹೀರಾತುಗಳನ್ನು ಗಮನಿಸಿದಾಗ ಏನೋ ಯುದ್ಧವೇ ನಡೆದು ಹೋಗುತ್ತದೆ ಎನ್ನುವಂತಿತ್ತು.
ಆದರೆ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅಂತ್ಯ ನೀರಸವಾಗಿ ಅಂತ್ಯಗೊಂಡಿತು. ಪಾಕಿಸ್ತಾನ ಕೇವಲ 162 ರನ್‌ಗೆ ಆಲೌಟ್ ಆಗುವ ಮೂಲಕ ಭಾರತ ಅತ್ಯಂತ ಸುಲಭವಾಗಿ 8 ವಿಕೆಟ್‌ಗಳ ಜಯ ಗಳಿಸಿ ಏಷ್ಯಾ ಕಪ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಪಾಕಿಸ್ತಾನ ತಂಡದ ಆಟಗಾರರು ಹಾಂಕಾಂಗ್‌ನ ಆರಂಭಿಕ ಆಟಗಾರರು ಗಳಿಸಿದ ಮೊತ್ತವನ್ನೂ ಗಳಿಸಲು ವಿಫಲವಾಯಿತು. ಭುವನೇಶ್ವರ್ ಕುಮಾರ್ (15ಕ್ಕೆ 3), ಕೇದಾರ್ ಜಾದವ್ (23ಕ್ಕೆ 3), ಜಸ್‌ಪ್ರೀತ್ ಬುಮ್ರಾ (23ಕ್ಕೆ 2) ಹಾಗೂ ಕುಲದೀಪ್ ಯಾದವ್ (37ಕ್ಕೆ 1) ಅವರ ದಾಳಿಗೆ ತತ್ತರಿಸಿದ ಪಾಕಿಸ್ತಾನ 43.1 ಓವರ್‌ಗಳಲ್ಲಿ ಕೇವಲ 162ರನ್‌ಗೆ ಸರ್ವ ಪತನ ಕಂಡಿತು.
ಅಲ್ಪ ಮೊತ್ತವನ್ನು ಬೆಂಬತ್ತಿದ ಭಾರತದ ನಾಯಕ ರೋಹಿತ್ ಶರ್ಮ (57), ಶಿಖರ್ ಧವನ್ (46), ಅಂಬಾಟಿ ರಾಯುಡು (31*) ಹಾಗೂ ದಿನೇಶ್ ಕಾರ್ತಿಕ್ (31*) ಅವರ ಬ್ಯಾಟಿಂಗ್ ನೆರವಿನಿಂದ 29 ಓವರ್‌ಗಳಲ್ಲಿ 164ರನ್ ಗಳಿಸಿ ಜಯ ಸಾಧಿಸಿತು