Thursday, October 31, 2024

ಫೈನಲ್ನ ಇಂಡಿಯಾ ಬಿ ಹಾಗೂ ಆಸ್ಟ್ರೇಲಿಯಾ ಎ

ಸ್ಪೋರ್ಟ್ಸ್ ಮೇಲ್ ವರದಿ

ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚತುಷ್ಕೋನ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ  ಇಂಡಿಯಾ  ಬಿ ಹಾಗೂ ಆಸ್ಟ್ರೇಲಿಯಾ ಎ ತಂಡಗಳು ಫೈನಲ್  ಪ್ರವೇಶಿಸಿವೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಸೋಮವಾರ ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಮನೀಶ್ ಪಾಂಡೆ (೧೧೭*) ಅವರ ಆಕರ್ಷಕ ಶತಕದ ನಡುವೆಯೂ ಇಂಡಿಯಾ  ಬಿ ತಂಡ  ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಸೋಲನುಭವಿಸಿತು. ಮನೀಶ್ ಅವರ ಇನಿಂಗ್ಸ್‌ನಲ್ಲಿ  ೭ ಬೌಂಡರಿ ಹಾಗೂ ೩ ಸಿಕ್ಸರ್ ಸೇರಿತ್ತು. ದೀಪಕ್ ಹೂಡಾ ೩೦ ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಆಸ್ಟ್ರೇಲಿಯಾ ಎ ತಂಡದ ಪರ ಮೈಕಲ್ ನೆಸಾರ್ ೪೭ಕ್ಕೆ ೩ ವಿಕೆಟ್ ಗಳಿಸಿದರು.
ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಆಸ್ಟ್ರೇಲಿಯಾ ಎ  ತಂಡಕ್ಕೆ ೪೦ ಓವರ್‌ಗಳಲ್ಲಿ ೨೪೭ ರನ್ ಗುರಿ ನೀಡಲಾಯಿತು. ಉಸ್ಮಮಾನ್ ಖವಾಜಾ (೧೦೧*) ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ಎ ತಂಡ ೪೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೪೮ ರನ್ ಗಳಿಸಿ ೫ ವಿಕೆಟ್‌ಗಳ ಜಯ ಸಾಧಿಸಿತು. ಜಲಜ್ ಸಕ್ಸೇನಾ ೪೮ ರನ್‌ಗೆ ೨ ವಿಕೆಟ್ ಗಳಿಸಿದರು.
ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಇಂಡಿಯಾ ಎ ತಂಡ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ  ೪ ವಿಕೆಟ್‌ಗಳ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಇಂಡಿಯಾ ಎ ತಂಡ ೩೭.೩ ಓವರ್‌ಗಳಲ್ಲಿ ಕೇವಲ ೧೫೭ ರನ್‌ಗೆ ಆಲೌಟ್ ಆಯಿತು. ಸಂಜು ಸ್ಯಾಮ್ಸನ್ (೩೬) ಹಾಗೂ ದೀಪಕ್ ಚಹಾರ್ (೩೮) ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಪರ ರಾಬರ್ಟ್ಕ್ ಫ್ರಾಯ್ಲಿಂಕ್  ೩೬ಕ್ಕೆ ೨ ಹಾಗೂ ಡೇನ್ ಪ್ಯಾಟರ್ಸನ್ ೧೯ರನ್‌ಗೆ ೫ ವಿಕೆಟ್ ಗಳಿಸಿದರು. ದಕ್ಷಿಣ ಆಫ್ರಿಕಾ ಎ ತಂಡ ೩೭.೪ ಓವರ್‌ಗಳಲ್ಲಿ  ೬ ವಿಕೆಟ್ ನಷ್ಟಕ್ಕೆ ೧೫೯ ರನ್ ಗಳಿಸಿ ೪ ವಿಕೆಟ್ ಜಯ ಗಳಿಸಿತು. ಮಲಾನ್ (೪೭), ಸರೇಲ್ ಎರ್ವಿ (೨೦) ದಕ್ಷಿಣ ಆಫ್ರಿಕಾದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.  ಖಲೀಲ್ ಅಹಮ್ಮದ್ ೪೫ಕ್ಕೆ ೩ ಹಾಗೂ ಕ್ರುಣಾಲ್ ಪಾಂಡ್ಯ ೩೭ ರನ್‌ಗೆ ೨ ವಿಕೆಟ್ ಗಳಿಸಿದರು.
ಇಂಡಿಯಾ  ಬಿ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ ಫೈನಲ್ ನಡೆಯಲಿದೆ. ಇಂಡಿಯಾ  ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳು ಮೂರು ಮತ್ತು  ನಾಲ್ಕನೇ ಸ್ಥಾನಕ್ಕಾಗಿ ಪಂದ್ಯವನ್ನಾಡಲಿವೆ.

Related Articles