Tuesday, April 16, 2024

ಗೆಲುವಿನ ಸನಿಹದಲ್ಲಿ ಭಾರತ

ಅಡಿಲೇಡ್‌ :

ರವಿಚಂದ್ರನ್‌ ಅಶ್ವಿನ್‌(44ಕ್ಕೆ 2) ಸ್ಪಿನ್‌ ಮೋಡಿ ಹಾಗೂ ಮೊಹಮ್ಮದ್‌ ಶಮಿ(15ಕ್ಕೆ 2) ಮಾರಕ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 104  ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಭಾರತ ವಿರುದ್ಧ ಸೋಲಿನ ಭೀತಿಯಲ್ಲಿದೆ.

ಇನ್ನೂ ಭಾರತ ಆರು ವಿಕೆಟ್ ಪಡೆ ದು ಪಂದ್ಯ ಗೆದ್ದರೆ ಕಳೆದ ೨೦೦೮ರ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಗೆಲುವು ಇದಾಗಲಿದೆ .
ಅಡಿಲೇಡ್‌ ಅಂಗಳದಲ್ಲಿ ಭಾರತ ನೀಡಿದ 323 ರನ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ರವಿಚಂದ್ರನ್‌ ಅಶ್ವಿನ್‌ ಸ್ಪಿನ್‌ ಮೋಡಿಗೆ ಆರಂಭದಲ್ಲೆ ಕುಸಿಯಿತು. ಆರಂಭಿಕರಾಗಿ ಕಣಕ್ಕೆ ಇಳಿದ ಆ್ಯರೊನ್‌ ಪಿಂಚ್‌(11) ಹಾಗೂ ಮಾರ್ಕೂಸ್‌ ಹ್ಯಾರಿಸ್‌(26) ಅವರು ಕ್ರಮವಾಗಿ ಅಶ್ವಿನ್‌ ಹಾಗೂ ಮೊಹಮ್ಮದ್‌ ಶಮಿಗೆ ವಿಕೆಟ್‌ ಒಪ್ಪಿಸಿದರು.
ನಂತರ, ಕ್ರೀಸ್‌ಗೆ ಬಂದ ಉಸ್ಮಾನ್‌ ಖವಾಜ ಕೇವಲ 8 ರನ್‌ ಗಳಿಸಿ ಅಶ್ವಿನ್‌ ಎಸೆತದಲ್ಲಿ ರೋಹಿತ್‌ ಶರ್ಮಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ನಂತರ ಶಾನ್‌ ಮಾರ್ಷ್‌ಗೆ ಜತೆಯಾದ ಪೀಟರ್‌ ಹ್ಯಾಂಡ್ಸ್‌ಕೊಂಬ್‌ ಉತ್ತಮ ಇನಿಂಗ್ಸ್‌ ಕಟ್ಟುವ ಮುನ್ಸೂಚನೆ ನೀಡಿದರು. ಆದರೆ,  14 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ಮೊಹಮ್ಮದ್‌ ಶಮಿ ಎಸೆತದಲ್ಲಿ ಚೇತೇಶ್ವರ ಪೂಜಾರಗೆ ಕ್ಯಾಚ್‌ ನೀಡಿ ನಿರಾಸೆಯಿಂದ ಹೊರ ನಡೆದರು.
ಒಂದು ತುದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತ ಶಾನ್‌ ಮಾರ್ಷ್‌ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲರಾದರು. ತಾಳ್ಮೆಯ ಇನಿಂಗ್ಸ್ ಕಟ್ಟಿದ ಇವರು, ಆಡಿದ 92 ಎಸೆತಗಳಿಗೆ ಮೂರು ಬೌಂಡರಿಯೊಂದಿಗೆ 31 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮತ್ತೊಂದು ತುದಿಯಲ್ಲಿ 11 ರನ್‌ ಗಳಿಸಿ ಟ್ರಾವಿಸ್‌ ಹೆಡ್‌ ಇದ್ದಾರೆ.
ಒಟ್ಟಾರೆ, ನಾಲ್ಕನೇ ದಿನದ ಮುಕ್ತಾಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‌ ನಲ್ಲಿ 49 ಓವರ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು 104 ರನ್‌ ದಾಖಲಿಸಿದೆ. ಇನ್ನೂ ಆಸ್ಟ್ರೇಲಿಯಾ ಗೆಲುವಿಗೆ 219 ರನ್ ಅಗತ್ಯವಿದ್ದು, ಆರು ವಿಕೆಟ್‌ ಕೈಯಲ್ಲಿದೆ. ಇನ್ನೂ ಒಂದು ದಿನ ಬಾಕಿಯಿದ್ದು, ಮೊದಲ ಟೆಸ್ಟ್ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿದೆ.
ಇದಕ್ಕೂ ಮುನ್ನ ಮೂರು ವಿಕೆಟ್‌ ಕಳೆದುಕೊಂಡು 151 ರನ್‌ಗಳಿಂದ ನಾಲ್ಕನೇ ದಿನ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಒಟ್ಟಾರೆ, ಭಾರತ 106.5 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 307 ರನ್‌ ದಾಖಲಿಸಿತು. ಆ ಮೂಲಕ ಆಸ್ಟ್ರೇಲಿಯಾಗೆ 323 ರನ್‌ ಗುರಿ ನೀಡಿತ್ತು.
ಬ್ಯಾಟಿಂಗ್‌ ಮುಂದುವರಿಸಿದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಜೋಡಿ ಅಮೋಘ ಬ್ಯಾಟಿಂಗ್‌ ಮಾಡುವಲ್ಲಿ ಸಫಲವಾಯಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 87 ರನ್‌ ದಾಖಲಿಸಿತು. ಆ ಮೂಲಕ ತಂಡದ ಮೊತ್ತ 200ರ ಗಡಿ ದಾಟಲು ನೆರವಾಯಿತು.
ಬ್ಯಾಟಿಂಗ್‌ ಲಯ ಮುಂದುವರಿಸಿದ ಪೂಜಾರ:
ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಟೆಸ್ಟ್ ವಿಶೇಷ ಪರಿಣಿತ ಚೇತೇಶ್ವರ ಪೂಜಾರ ದ್ವಿತೀಯ ಇನಿಂಗ್ಸ್‌ನಲ್ಲೂ ಭಾರತಕ್ಕೆ ನೆರವಾದರು. ಆಸ್ಟ್ರೇಲಿಯಾ ಬೌಲರ್‌ಗಳನ್ನು ತಮ್ಮ ಶೈಲಿಯಲ್ಲಿ ಸೊಗಸಾಗಿ ಎದುರಿಸಿದ ಪೂಜಾರ 204 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಒಟ್ಟು 71 ರನ್ ಗಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯವೊಂದರ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧ ಶತಕ ಸಿಡಿಸಿದ ಮೂರನೇ ಭಾರತದ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಭಾಜನರಾದರು. ನಂತರ, ನಥಾನ್‌ ಲಿಯಾನ್‌ ಎಸೆತದಲ್ಲಿ ಪಿಂಚ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ ಸೇರಿದರು.
ಪ್ರಥಮ ಇನಿಂಗ್ಸ್‌ನಲ್ಲಿ ಅಲ್ಪ ಕಾಣಿಕೆ ನೀಡಿದ್ದ ರೋಹಿತ್‌ ಶರ್ಮಾ ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ ಒಂದು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ 16 ಎಸೆತಗಳಲ್ಲಿ 28 ರನ್ ಸಿಡಿಸಿ ಬಹುಬೇಗ ಲಿಯಾನ್‌ ಗೆ ಶರಣಾದರು. ನಂತರ ಅಶ್ವಿನ್ ಕೂಡ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ.
ರಹಾನೆ ಅರ್ಧಶತಕ:
ಪ್ರಥಮ ಇನಿಂಗ್ಸ್ ನಲ್ಲಿ ನಿರಾಸೆ ಮೂಡಿಸಿದ್ದ ಉಪ ನಾಯಕ ಅಜಿಂಕ್ಯಾ ರಹಾನೆ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಲಯಕ್ಕೆ ಮರಳಿದರು. ಒಂದು ತುದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಗಟ್ಟಿಯಾಗಿ ನೆಲೆನಿಂತ ರಹಾನೆ, ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು, ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಇವರು ಆಡಿದ 147 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 70 ರನ್‌ ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ನಂತರ, ನಥಾನ್ ಲಿಯಾನ್‌ ಎಸೆತದಲ್ಲಿ ಸ್ಟಾರ್ಕ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮುಖ ಮಾಡಿದರು. ಇವರ ಬಳಿಕ, ಇಶಾಂತ್‌ ಶರ್ಮಾ ಹಾಗೂ ಮೊಹಮ್ಮದ್‌ ಶಮಿ ಶೂನ್ಯಕ್ಕೆ ಔಟ್‌ ಆದರು.
ಮಿಂಚಿದ ಲಿಯಾನ್‌:
ಆಸೀಸ್‌ ಪರ ಉತ್ತಮ ಬೌಲಿಂಗ್‌ ಮಾಡಿದ ನಥಾನ್‌ ಲಿಯಾನ್‌ ಭಾರತಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ ವಿಲನ್‌ ಆಗಿ ಪರಿಣಮಿಸಿದರು. ಭಾರತದ ಮೇಲೆ ಏಕಾಂಗಿಯಾಗಿ ಒತ್ತಡ ಹೇರಿದ ಲಿಯಾನ್‌ ನಿಧಾನಗತಿಯಲ್ಲಿ ಭಾರತದ ಮೇಲೆ ನಿಯಂತ್ರಣ ಸಾಧಿಸಿದರು. 42 ಓವರ್‌ ಬೌಲಿಂಗ್‌ ಮಾಡಿದ ಇವರು, 122 ರನ್‌ ನಿಡಿ 6 ವಿಕೆಟ್‌ ಪಡೆದು ಮಿಂಚಿದರು. ಇವರಿಗೆ ಸಾಥ್‌ ನೀಡಿದ ಮಿಚೆಲ್‌ ಸ್ಟಾರ್ಕ್ 3 ವಿಕೆಟ್ ಪಡೆದರು.
ಸ್ಕೋರ್‌ ವಿವರ
ಭಾರತ
ಪ್ರಥಮ ಇನಿಂಗ್ಸ್: 250
ದ್ವಿತೀಯ ಇನಿಂಗ್ಸ್‌: 307/106.5
ಚೇತೇಶ್ವರ ಪೂಜಾರ-71
ಅಜಿಂಕ್ಯಾ ರಹಾನೆ-70
ಕೆ.ಎಲ್.ರಾಹುಲ್‌-44
ಬೌಲಿಂಗ್‌: ನಥಾನ್‌ ಲಿಯಾನ್‌ 122ಕ್ಕೆ 6, ಮಿಚೆಲ್‌ ಸ್ಟಾರ್ಕ್‌ 40ಕ್ಕೆ 3.
ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್‌: 235
ದ್ವಿತೀಯ ಇನಿಂಗ್ಸ್: 104/4(49)
ಶಾನ್ ಮಾರ್ಷ್‌-31
ಬೌಲಿಂಗ್‌: ಮೊಹಮ್ಮದ್‌ ಶಮಿ 15ಕ್ಕೆ 2 ಹಾಗೂ ರವಿಚಂದ್ರನ್‌ ಅಶ್ವಿನ್‌ 44ಕ್ಕೆ 2.

Related Articles