Thursday, November 21, 2024

ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿದ ಕ್ರಿಕೆಟಿಗ ರಾಬಿನ್‌ ಉತ್ತಪ್ಪ

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಯುವಕ ಶಂಕರ್‌ ನಾಯಕ ಅವರು ಅಲ್ಲಿಯ ಕ್ರೀಡಾಪಟುಗಳಿಗೆ 2016ರಿಂದ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಕ್ರೀಡಾಪಟುಗಳು ಧರಿಸಲು ಶೂ ಇಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಜೂನ್‌ 22ರಂದು www.sportsmail.net ನಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿಯನ್ನು ಓದಿದ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಕನ್ನಡಿಗ ರಾಬಿನ್‌ ಉತ್ತಪ್ಪ Robin Uthappa ಅವರು 45 ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್‌ ಶೂ ನೀಡಿ ಉಪಕಾರ ಮಾಡಿದ್ದಾರೆ. ಸದ್ಯದಲ್ಲಿಯೇ ಮಾನ್ವಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಕ್ರೀಡಾಪಟುಗಳಿಗೆ ಶೂ ವಿತರಿಸಲಾಗುವುದು. Indian former International cricketer Robin Uthappa donates 45 pairs of sports shoes to poor athletes of Raichur District Manvi Taluk Thammapura village.

ಸದ್ಯ ದುಬೈಯಲ್ಲಿ ನೆಲೆಸಿರುವ ರಾಬಿನ್‌ ಉತ್ತಪ್ಪ ಸುದ್ದಿಯನ್ನು ಓದಿ ಸಂಪರ್ಕ ಮಾಡಿದ್ದಾರೆ. “ಅವರಿಗೆ ಯಾವ ಸೌಲಭ್ಯಗಳ ಕೊರತೆ ಇದೆಯೋ ಅವೆಲ್ಲವನ್ನೂ ನೆರವೇರಿಸಲು ನಾನು ಸಿದ್ಧನಿದ್ದೇನೆ,” ಎಂದು ಹೇಳಿದರು. ಬಳಿಕ ಶಂಕರ್‌ ಅವರನ್ನು ಸಂಪರ್ಕಿಸಿ, ಮಕ್ಕಳ ವಿವರಗಳು ಮತ್ತು ಅವರ ಶೂ ಗಾತ್ರವನ್ನು ಪಡೆಯಲಾಯಿತು. ಉಡುಪಿಯ ಪ್ರಸಿದ್ಧ ಕ್ರೀಡಾ ಸಲಕರಣೆಗಳ ಮಾರಾಟಗಾರರಾದ ಸದಾನಂದ ನಾವುಡ ಅವರು ತಮ್ಮ Galaxy Sports world ಮೂಲಕ ಉತ್ತಮ ಗುಣಮಟ್ಟದ ಶೂ ತರಿಸಲು ಕೊಟೇಷನ್‌ ಸಿದ್ಧಗೊಳಿಸಿದರು. ಅದನ್ನು ರಾಬಿನ್‌ ಉತ್ತಪ್ಪ ಅವರಿಗೆ ಕಳುಹಿಸಲು ಅವರು 44,600 ರೂ. ಮೊತ್ತವನ್ನು ಕಳುಹಿಸಿ ಉತ್ತಮ ಗುಣಮಟ್ಟದ ಶೂ ನೀಡಲು ನೆರವಾದರು.

ಕ್ರೀಡಾಪಟುಗಳಲ್ಲಿ ಸಂಭ್ರಮ: ಇದುವರೆಗೂ ಶಂಕರ್‌ ಅವರ ಕ್ರೀಡಾಪಟುಗಳು ಬರಿಗಾಲಲ್ಲಿ ಅಭ್ಯಾಸ ಮಾಡಿ, ಬರಿಗಾಲಲ್ಲೇ ಸ್ಪರ್ಧಿಸುತ್ತಿದ್ದ ಕ್ರೀಡಾಪಟುಗಳಿಗೆ ಈಗ ಎಲ್ಲಿಲ್ಲದ ಸಂಭ್ರಮ. ಇಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದರೆ, ಹದಿನೈದಕ್ಕೂ ಹೆಚ್ಚು ಮಂದಿ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿರುತ್ತಾರೆ. “ಕಳೆದ ಎಂಟು ವರ್ಷಗಳಿಂದ ಇಲ್ಲಿಯ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದೇನೆ, ಆದರೆ ಯಾರಲ್ಲೂ ನಮ್ಮ ಕಷ್ಟಗಳನ್ನು ಹಂಚಿಕೊಂಡಿಲ್ಲ. ನೀವು ಬರೆದು ನಮ್ಮ ಕಷ್ಟವನ್ನು ಬೆಳಕಿಗೆ ತಂದಿದ್ದೀರಿ. ಆದರೆ ನೆರವು ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಪುಣ್ಯಾತ್ಮರಾದ ರಾಬಿನ್‌ ಉತ್ತಪ್ಪ  ಅವರು ನೆರವು ನೀಡಿರುವುದು ಇಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳ ಪುಣ್ಯ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ನೆರವು ನೀಡಿದ ಕರ್ನಾಟಕದ ಶ್ರೇಷ್ಠ ಕ್ರಿಕೆಟಿಗ ರಾಬಿನ್‌ ಅವರು ಇತರರಿಗೆ ಮಾದರಿ ಎನಿಸಿದ್ದಾರೆ. ರಾಬಿನ್‌ ಉತ್ತಪ್ಪ ಅವರಿಗೆ ನಮ್ಮೆಲ್ಲ ಕ್ರೀಡಾಪಟುಗಳ ವತಿಯಿಂದ ಅನಂತ ಧನ್ಯವಾದಗಳು,” ಎಂದು ಶಂಕರ್‌ sportsmailಗೆ ತಿಳಿಸಿದ್ದಾರೆ.

Related Articles