ಇಂಡಿಯನ್ ಪ್ರೀಮಿಯರ್ ಲೀಗ್ Indian Premier League ಹರಾಜಿನಲ್ಲಿ ಅನೇಕ ಆಟಗಾರರು ಕೋಟ್ಯಂತರ ಮೊತ್ತಕ್ಕೆ ವಿವಿಧ ತಂಡಗಳನ್ನು ಸೇರಿದರು. ಲೀಗ್ ಈಗ ಪ್ಲೇ ಆಫ್ ಹಂತವನ್ನು ತಲಪುವ ಸನಿಹದಲ್ಲಿದೆ. ಆದರೆ ಅನೇಕ ಆಟಗಾರರು ತಾವು ಪಡೆದ ಮೊತ್ತಕ್ಕೆ ಅನುಗುಣವಾಗಿ ಆಟವನ್ನು ಆಡಿರಲೇ ಇಲ್ಲ. ಅವರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟ ಪ್ರದರ್ಶಿಸಬಲ್ಲ ಇಂಗ್ಲೆಂಡ್‌ನ ಆಲ್ರೌಂಡರ್ Ben Stokes ಬೆನ್ ಸ್ಟೋಕ್ಸ್.
16.25 ಕೋಟಿ ರೂ.ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದ್ದ ಬೆನ್ ಸ್ಕೋಕ್ಸ್, ಇದುವರೆಗೂ ಆಡಿರುವುದು ಎರಡು ಪಂದ್ಯಗಳು ಮಾತ್ರ. ಗಳಿಸಿದ್ದು ಬರೇ 15 ರನ್. ಮೇ 20 ರಂದು ನಡೆಯಲಿರುವ ಲೀಗ್‌ನ ಕೊನೆಯ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ಗೆ ಕೊನೆಯಲ್ಲಿ ಮತ್ತೊಂದು ಅವಕಾಶ ನೀಡಲೂ ಬಹುದು. ಏಕೆಂದರೆ ಆ ಬಳಿಕ ಅವರು ಚೆನ್ನೈ ಪಡೆಯನ್ನು ತೊರೆದು ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದೆ, ಆ ನಂತರ ಬೆನ್ ಸ್ಟೋಕ್ಸ್ ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಸ್ಟೋಕ್ಸ್, ತಾಯ್ನಾಡಿನಲ್ಲಿ ನಡೆಯುವ ಸರಣಿಗೆ ಮುನ್ನವೇ ಸಂಪೂರ್ಣ ಫಿಟ್ ಆಗಿ ಮತ್ತೆ ಅಂಗಣಕ್ಕೆ ಇಳಿಯಬೇಕಾಗಿದೆ. ಬೆನ್‌ಸ್ಟೋಕ್ಸ್ ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅವರ ಸ್ಫೋಟಕ ಆಟ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವಂತೆ ಮಾಡಿತ್ತು.
ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಪಂದ್ಯವನ್ನಾಡಿದ ಸ್ಟೋಕ್ಸ್ ಗಳಿಸಿದ್ದು ಕೇವಲ 7 ರನ್. ನಂತರ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದರು. ಎಸೆದ ಒಂದೇ ಓವರ್‌ನಲ್ಲಿ 18 ರನ್ ನೀಡಿದ್ದರು. ಆ ನಂತರ ಗಾಯದ ಕಾರಣ ಬೆಂಚ್ ಕಾಯುವ ಕೆಲಸ ಮಾಡಿದ್ದರು.
ಸ್ಟೋಕ್ಸ್ Ben Stokes ಅವರನ್ನು ದುಬಾರಿ ಮೊತ್ತಕ್ಕೆ ಪಡೆದರೂ ಚೆನ್ನೈಗೆ ಅವರ ಪ್ರಯೋಜನ ಸಿಗಲಿಲ್ಲ. ಮೇ 20 ರಂದು ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಜಯ ಗಳಿಸಿದರೆ ಚೆನ್ನೈ ಪ್ಲೇ ಆಫ್ ತಲುಪಲಿದೆ. ಇಲ್ಲವಾದಲ್ಲಿ ಇತರ ತಂಡಗಳ ಫಲಿತಾಂಶವನ್ನು ಆಧರಿಸಬೇಕಾಗಿದೆ. ಸ್ಟೋಕ್ಸ್ ಅವರು ಗಾಯಗೊಂಡ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಬೇಕಾಯಿತು.
ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೂ 13 ಪಂದ್ಯಗಳನ್ನಾಡಿದ್ದು, 7 ಜಯ ಹಾಗೂ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು. 1 ಪಂದ್ಯ ಫಲಿತಾಂಶ ರಹಿತವಾಗಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಧಾನ ಕೋಚ್ ಸ್ಟಿಫನ್ ಫ್ಲೆಮಿಂಗ್ ಕೊನೆಯ ಲೀಗ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಆಡುವ ಬಗ್ಗೆ ಖಚಿತ ನಿಲುವನ್ನು ವ್ಯಕ್ತಪಡಿಸಿಲ್ಲ. ಮೊಯಿನ್ ಅಲಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ನಡೆಸೊಲ್ಲ ಎಂಬ ಸುಳಿವು ನೀಡಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಸೋತಿರುವುದು ನಿಜ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರಯೋಗ ಮಾಡದೆ ಇದೇ ತಂಡವನ್ನು ಮುನ್ನಡೆಸಲಾಗುವುದು ಎಂಬ ಸುಳಿವನ್ನು ಫ್ಲೆಮಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಜ್ಯದ ಪ್ರಿಯಾ ಚಿನ್ನದ ಸಾಧನೆ