Thursday, November 21, 2024

ಎಲ್ಲರೂ ಸ್ಟೇಡಿಯಂಗೆ ಬನ್ನಿ ಎಂದು ಕನ್ನಡದಲ್ಲೇ ಆಹ್ವಾನ ನೀಡಿದ ನೀರಜ್‌ ಚೋಪ್ರಾ!

ಬೆಂಗಳೂರು: ಗುರುವಾರ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಪಂಜಾಬ್‌ ಎಫ್‌ಸಿ ವಿರುದ್ಧ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜಯಕ್ಕಾಗಿ ಸೆಣಸಲಿದೆ. ಈ ಪಂದ್ಯವನ್ನು ವೀಕ್ಷಿಸಲು ಖ್ಯಾತ ಜಾವೆಲಿನ್‌ ಎಸೆತಗಾರ, ಒಲಿಂಪಿಕ್‌ ಸ್ವರ್ಣ ವಿಜೇತ ನೀರಜ್‌ ಚೋಪ್ರಾ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. “ಎಲ್ಲರೂ ಸ್ಟೇಡಿಯಂಗೆ ಬನ್ನಿ” ಎಂದು ಅವರು ಕನ್ನಡದಲ್ಲೇ ಹೇಳಿರುವ ವೀಡಿಯೋ ತುಣುಕನ್ನು ಬೆಂಗಳೂರು ಎಫ್‌ಸಿ X ನಲ್ಲಿ ಹಂಚಿಕೊಂಡಿದೆ. Indian Super League: Bengaluru FC and Punjab FC seek important wins.

ಮೊದಲ ಬಾರಿಗೆ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಪಂಜಾಬ್‌‌ ಎಫ್‌ಸಿ ತಂಡ ಮೊದಲ ಜಯದ ಹುಡುಕಾಟದಲ್ಲಿದೆ. ಜೆಮ್ಷೆಡ್ಪುರ ಎಫ್‌ಸಿ ಹಾಗೂ ನಾರ್ಥ್‌ ಈಸ್ಟ್‌ ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಪಂಜಾಬ್‌ ಹೋರಾಟ ನೀಡುವ ತಂಡವೆಂಬುದು ಸಾಬೀತಾಗಿದೆ. ಆದರೆ ಗೋವಾ ವಿರುದ್ಧದ ಪಂದ್ಯದಲ್ಲಿ 1-0 ಗೋಲಿನಿಂದ ಸೋಲನುಭವಿಸಿತ್ತು.

ಬೆಂಗಳೂರು ಎಫ್‌ಸಿ ಆಡಿರುವ ಏಳು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಸುನಿಲ್‌ ಛೆಟ್ರಿ ಪಡೆ ಹಿಂದಿನ ಪಂದ್ಯದಲ್ಲಿ ಗೋಲಿನ ಉಡುಗೊರೆಯ ಪ್ರಮಾದ ಮಾಡಿ ಪಂದ್ಯವನ್ನು ಕೈ ಚೆಲ್ಲಿತ್ತು. ಈಗ ಮನೆಯಂಗಣದಲ್ಲಿ ಹೊಸ ತಂಡದ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ತಂಡದ ಮುಂದಿದೆ. ಹಿಂದಿನ ಋತುವಿನಲ್ಲಿ ಬೆಂಗಳೂರು ಎಫ್‌ಸಿ ಸತತ ಐದು ಪಂದ್ಯಗಳಲ್ಲಿ ಜಯ ಕಾಣದೆ ಕಂಗೆಟ್ಟಿತ್ತು. ಆದರೆ ಆ ಬಳಿಕ ಚೇತರಿಸಿಕೊಂಡು ದಿಟ್ಟ ಪ್ರದರ್ಶನ ತೋರಿದ್ದನ್ನು ಮರೆಯುವಂತಿಲ್ಲ. ಅಂತಾರಾಷ್ಟ್ರೀಯ ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧೂ ತಂಡದ ಬೆನ್ನೆಲುಬಾಗಿದ್ದಾರೆ. ಪಂದ್ಯವೊಂದಕ್ಕೆ 2.28 ಗೋಲುಗಳನ್ನು ತಡೆದ ಸರಾಸರಿಯನ್ನು ಹೊಂದಿರುವ ಸಿಂಗ್‌ ನಾಳೆಯ ಪಂದ್ಯದಲ್ಲಿ ಎಲ್ಲರ ಆಕರ್ಷಣೆಯಾಗಿದ್ದಾರೆ.

Related Articles