Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜೂ. 29, 30: ರಾಷ್ಟ್ರೀಯ ಕಬಡ್ಡಿಗೆ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ

ಬೆಂಗಳೂರು:

ಹರಿಯಾಣದಲ್ಲಿ ಜುಲೈ 21 ರಿಂದ 24ರವರೆಗೆ ನಡೆಲಿರುವ 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯದ ಅರ್ಹ ಪುರುಷ ಆಟಗಾರರನ್ನು ಆಹ್ವಾನಿಸಲಾಗಿದೆ.

ಆಯ್ಕೆ ಪ್ರಕ್ರಿಯೆಯು ಜೂನ್‌ 29 ಮತ್ತು 30ರಂದು ತುಮಕೂರು ನಗರದಲ್ಲಿರುವ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ನ ಆಡಳಿತಾಧಿಕಾರಿ ಎಸ್‌.ಜಿ. ಮಂಜುನಾಥ್‌ ಸಿಂಗ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಈ ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಮಾಜಿ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಮತ್ತು ಭಾರತ ಸರಕಾರದ ಎಐಸಿಎಸ್‌ ಸದಸ್ಯರಾದ ಡಾ. ಸಿ. ಹೊನ್ನಪ್ಪ ಗೌಡ ನಿರ್ವಹಿಸಲಿದ್ದಾರೆ.

ಅರ್ಹತಾ ವಿವರಗಳು:

1 . ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ತೂಕ 85ಕೆಜಿ ಒಳಗಿರಬೇಕು.

  1. ವಯಸ್ಸಿನ ಮಿತಿ ಇರುವುದಿಲ್ಲ.
  2. ಅಭ್ಯರ್ಥಿಯ ಮೂಲ ಆಧಾರ್‌ ಕಾರ್ಡ್‌, 3 ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರಗಳನ್ನು ತರತಕ್ಕದ್ದು.

ಸೂಚನೆ:

  • ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇರುತ್ತದೆ.
  • ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಮ್ಯಾಟ್‌ ಶೂ ಧರಿಸತಕ್ಕದ್ದು.
  • ಆಯ್ಕೆಯಾದ ಕ್ರೀಡಾಪಟುಗಳಿಗೆ 1-7-2022 ರಿಂದ ತರಬೇತಿ ನೀಡಲಾಗುವುದು.
  • ಆಯ್ಕೆಗೊಂಡ ಆಟಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಸುನಿಲ್‌ : 9886252594, ಮೊಹಮ್ಮದ್‌ ಇಸ್ಮಾಯಿಲ್:‌ 9980588415 ಅವರನ್ನು ಸಂಪರ್ಕಿಸಬಹುದು.

ಆಯ್ಕೆ ಸಮಿತಿಯ ಆಯ್ಕೆ:

ಹರಿಯಾಣದ ಚಾರ್ಬಿ ದಾದ್ರಿಯಲ್ಲಿ 21-7-2022 ರಿಂದ 24-7-2022ರವರೆಗೆ ನಡೆಯಲಿರುವ 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯು ತುಮಕೂರಿನಲ್ಲಿ ಜೂನ್‌ 29 ಮತ್ತು 30ರಂದು ನಡೆಯಲಿದ್ದು ಈ ಬಗ್ಗೆ ಆಯ್ಕೆ ಸಮತಿಯ ಚೇರ್ಮನ್‌, ಶಿಬಿರದ ಮುಖ್ಯ ತರಬೇತುದಾರರು ಹಾಗೂ ಸಮಿತಿಯ ಸದಸ್ಯರನ್ನು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಪ್ರಕಟಿಸಿದೆ.

ಆಯ್ಕೆ ಸಮಿತಿಯ ಚೇರ್ಮನ್‌ ಹಾಗೂ ಶಿಬಿರದ ಮುಖ್ಯ ತರಬೇತುದಾರರನ್ನಾಗಿ ಅರ್ಜುನ ಪ್ರಶಸ್ತಿ ವಿಜೇತ ಡಾ. ಸಿ. ಹೊನ್ನಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರರು, ಎನ್‌ಐಎಸ್‌ ತರಬೇತುದಾರರಾದ ಈಶ್ವರ್‌ ಅಂಗಡಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ, ನೈಋತ್ಯ ರೈಲ್ವೆಯ ತೇಜಸ್ವಿನಿ ಬಾಯಿ, ಎನ್‌ಐಎಸ್‌ ತರಬೇತುದಾರರಾದ ಮೊಹಮ್ಮದ್‌ ಇಸ್ಮಾಯಿಲ್‌ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರಾದ ಮುನಿರಾಜು ಅವರನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.