Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಲ್ಯಾಡಿ ಮಡಿಲಿಗೆ ಮಹಾಲಿಂಗೇಶ್ವರ ಟ್ರೋಫಿ

sportsmail:

ಅತ್ಯಂತ ರೋಚಕವಾಗಿ ನಡೆದ ಫೈನಲ್‌ ಪಂದ್ಯದಲ್ಲಿ ಕುಂದಾಪುರ ಫ್ರೆಂಡ್ಸ್‌ ಕುಂದಾಪುರ ತಂಡವನ್ನು ಮಣಿಸಿದ ಮಲ್ಯಾಡಿಯ ಮಲ್ಯಾಡಿ ಫ್ರೆಂಡ್ಸ್‌ ತಂಡ ಪ್ರತಿಷ್ಠಿತ ಮಹಾಲಿಂಗೇಶ್ವರ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ.

ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ ಆಟಗಾರರಿಗೆ ಮೀಸಲಾದ ಈ ಏರಿಯಾವೈಸ್‌ ಚಾಂಪಿಯನ್‌ಷಿಪ್‌ನಲ್ಲಿ  ಎಲ್ಲ ವಲಯದಿಂದ 16 ತಂಡಗಳು ಪಾಲ್ಗೊಂಡಿದ್ದವು.

ಚಾಂಪಿಯನ್‌ ತಂಡ ಮಲ್ಯಾಡಿ ಆಕರ್ಷಕ ಟ್ರೋಫಿಯೊಂದಿಗೆ 30,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನ ಪಡೆದ ಕುಂದಾಪುರ ಫ್ರೆಂಡ್ಸ್‌ ತಂಡ ಆಕರ್ಷಕ ಟ್ರೋಫಿಯೊಂದಿಗೆ 20,000 ರೂ, ನಗದು ಬಹುಮಾನ ಗೆದ್ದುಕೊಂಡಿತು. ಮೂರನೇ ಸ್ಥಾನವನ್ನು ಗೆದ್ದ ಕಟ್ಕೆರೆಯ ಕಟ್ಕೆರೆ ಫ್ರೆಂಡ್ಸ್‌ ಟ್ರೋಫಿಯೊಂದಿಗೆ 10,000 ರೂ. ತನ್ನದಾಗಿಸಿಕೊಂಡಿತು. ನಾಲ್ಕನೇ ಸ್ಥಾನ ಗಳಿಸಿದ ತೆಕ್ಕಟ್ಟೆಯ ಕಂಚಕಾರ್‌ ಫ್ರೆಂಡ್ಸ್‌ 5,000 ರೂ, ನಗದು ಹಾಗೂ ಟ್ರೋಫಿ ಗೆದ್ದುಕೊಂಡಿತು.

 

ವೈಯಕ್ತಿಕ ಬಹುಮಾನ:

ಉತ್ತಮ ಅಟ್ಯಾಕರ್‌ : ನಿತೇಶ್‌, ಮಲ್ಯಾಡಿ ಫ್ರೆಂಡ್ಸ್‌.

ಉತ್ತಮ ಆಲ್ರೌಂಡರ್:‌ ಪ್ರಸನ್ನ, ಕಂಚಕಾರ್‌ ಫ್ರೆಂಡ್ಸ್‌.

ಉತ್ತಮ ಪಾಸರ್‌: ನಿತಿನ್‌, ಕುಂದಾಪುರ ಫ್ರೆಂಡ್ಸ್‌,

ಉತ್ತಮ ಲೆಬ್ರೋ: ಯಾನಂದ, ಕಟ್ಕೆರೆ ಫ್ರೆಂಡ್ಸ್.‌

ಉತ್ತಮ ಸಂಘಟನೆ: ಎಸ್.‌ ಪ್ರಭಾಕರನ್‌

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭದ್ರಾ ಹುಲಿಸಂರಕ್ಷಣಾ ವಿಭಾಗದ ನಿರ್ದೇಶಕರಾಗಿರುವ, ಮೌಂಟ್‌ ಎವರೆಸ್ಟ್‌ ಏರಿದ ದೇಶದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಸ್‌. ಪ್ರಭಾಕರನ್‌ ಐಎಫ್‌ಎಸ್‌ ಅವರು ಮಾತನಾಡಿ, “ಇಲ್ಲಿ ನೆರೆದ ಜನರನ್ನು ಕಂಡಾಗ ಹೆಮ್ಮೆ ಅನಿಸುತ್ತಿದೆ, ಉತ್ತಮ ರೀತಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಟೂರ್ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು, ಇಲ್ಲಿಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು, ವಾಲಿಬಾಲ್‌ ಕ್ರೀಡೆಯ ಬಗ್ಗೆ ಆಸಕ್ತಿ ಇರುವವರು ಮಾತ್ರ ಈ ರೀತಿಯಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗಮನದಲ್ಲಿರಿಸಿಕೊಂಡು ಟೂರ್ನಿ ಆಯೋಜಿಸಲು ಸಾಧ್ಯ,” ಎಂದರು.

ಕೆದೂರಿನ ಮಾಳವಿಕ ಕನ್‌ಸ್ಟ್ರಕ್ಷನ್‌ನ ಮಾಲೀಕರಾದ ಕೆ. ಸದಾನಂದ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಊರಿನ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್.‌ ಪ್ರಭಾಕರನ್‌ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೈಹಿಕ ಶಿಕ್ಷಕ ಸತೀಶ್‌ ಶೆಟ್ಟಿ ಅರೆಹೊಳೆ ಇವರನ್ನೂ ಇದೇ ಸಂದರ್ಭದಲ್ಲಿ ಸಂಘಟಕರಿಂದ ಸನ್ಮಾನಿಸಲಾಯಿತು.

ಆಲ್ರೌಂಡರ್‌ ಸೂರಜ್‌ ಶೆಟ್ಟಿ:

ಮಹಾಲಿಂಗೇಶ್ವರ ಟ್ರೋಫಿ ವಾಲಿಬಾಲ್‌ ಟೂರ್ನಿಯ ಯಶಸ್ಸಿನ ಹಿಂದೆ ಶಾರದಾ ಕಾಲೇಜು ಬಸ್ರೂರು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸೂರಜ್‌ ಶೆಟ್ಟಿ ಅವರ ಪಾತ್ರ ಪ್ರಮುಖವಾಗಿತ್ತು. ಅತ್ಯಂತ ಶಿಸ್ತಿನಲ್ಲಿ ತಂಡಗಳನ್ನು ಒಗ್ಗೂಡಿಸಿ, ಎಲ್ಲಿಯೂ ಗೊಂದಲಗಳಾಗದಂತೆ ನೋಡಿಕೊಂಡು, ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಂಗಣದಲ್ಲಿದ್ದು, ಟೂರ್ನಿಯ ಯಶಸ್ಸಿಗಾಗಿ ಶ್ರಮಿಸಿದ ಸೂರಜ್‌ ಶೆಟ್ಟಿಯವರಿಗೆ ಸಂಘಟಕರಾದ ಸುದೀಪ್‌ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ಸೂರಜ್‌ ಶೆಟ್ಟಿ ಅವರಲ್ಲಿ ಪಳಗಿದ ಅನೇಕ ವಾಲಿಬಾಲ್‌ ಆಟಗಾರರು ರಾಜ್ಯದ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ, ಮಾತ್ರವಲ್ಲ ವಿವಿಧ ಇಲಾಖೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.