Sunday, September 8, 2024

ನಾಲ್ಕು ಗೆದ್ದಂತೆ ಐದರಲ್ಲಿ ಗೆಲ್ಲುವುದು ಸುಲಭವಲ್ಲ

ಧರ್ಮಶಾಲಾ: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಇದುವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆದ್ದು ಪ್ರಭುತ್ವ ಸಾಧಿಸಿವೆ. India vs New Zealand at Dharmashala ಆದರೆ ಭಾನುವಾರ ಧರ್ಮಶಾಲಾದಲ್ಲಿ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕ್ರಿಕೆಟ್‌ ಅಭಿಮಾನಿಗಳನ್ನು ಕೇಳಿದರೆ “ಭಾರತ ಗೆಲ್ಲಬೇಕು, ಆದರೆ ನ್ಯೂಜಿಲೆಂಡ್‌ ಗೆಲ್ಲುತ್ತದೆ,” ಎಂದು ಉತ್ತರಿಸುವವರೇ ಹೆಚ್ಚು. ಆದರೆ ನಾಲ್ಕರಲ್ಲಿ ಗೆದ್ದಂತೆ ಐದರಲ್ಲಿ ಗೆಲ್ಲುವುದು ಸುಲಭವಲ್ಲ.

ನ್ಯೂಜಿಲೆಂಡ್‌ ಗೆಲ್ಲುವ ಫೇವರಿಟ್‌… ಆದರೆ  ಭಾರತ ಗೆಲ್ಲಲೇ ಬೇಕು ಎನ್ನುವವರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಭಾರತದ ಮೇಲಿನ ಪ್ರೀತಿಗೆ ನಾವು ಈ ಬಾರಿ ವಿಶ್ವಕಪ್‌ ಗೆದ್ದೇ ಗೆಲ್ಲುತ್ತೇವೆ ಎನ್ನುತ್ತೇವೆ, ಅದು ಎಲ್ಲರ ಆಶಯವೂ ಕೂಡ. ಆದರೆ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಹಾಗೂ ಭಾರತ ತಂಡಗಳು ಇದುವರೆಗೂ 9 ಬಾರಿ ಮುಖಾಮುಖಿಯಾಗಿವೆ. ನ್ಯೂಜಿಲೆಂಡ್‌ 5 ಪಂದ್ಯಗಳಲ್ಲಿ ಜಯ ಗಳಿಸಿದರೆ ಭಾರತ 3 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. 1992ರಿಂದ ಐಸಿಸಿ ಪಂದ್ಯಗಳಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿದ್ದು ಒಂದು ಬಾರಿ ಮಾತ್ರ.

ಇದೆಲ್ಲ ಹಿಂದಿನ ಇತಿಹಾಸ. ಆದರೆ ಈಗ ಎರಡೂ ತಂಡಗಳು ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠ ಎನಿಸಿವೆ, ಧರ್ಮಶಾಲಾ ಪಿಚ್‌ ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ನ್ಯೂಜಿಲೆಂಡ್‌ ಉತ್ತಮ ಬೌಲಿಂಗ್‌ ಪಡೆಯನ್ನು ಹೊಂದಿದೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಆರಂಭಿಕ ಹತ್ತು ಓವರ್‌ಗಳು ನಿರ್ಣಾಯಕ ಎನಿಸಲಿವೆ. ಭಾರತದ ಪರ ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಗಮನಾರ್ಹ. ಶಾರ್ದೂಲ್‌ ಠಾಕೂರ್‌ ಇದುವರೆಗೂ ವಿಶ್ವಕಪ್‌ ಗುಣಮಟ್ಟದಲ್ಲಿ ಬೌಲಿಂಗ್‌ ಮಾಡಿರಲಿಲ್ಲ. ಪಾಂಡ್ಯಾ ಅನುಪಸ್ಥಿತಿಯಲ್ಲಿ ಬೌಲರ್‌ಗೆ ಅವಕಾಶ ನೀಡುವುದಾದರೆ ಮೊಹಮ್ಮದ್‌ ಶಮಿ ಮೊದಲ ಆಯ್ಕೆಯಾಗಬೇಕು. ಇಲ್ಲ ಬ್ಯಾಟಿಂಗ್‌ ಶಕ್ತಿಗೆ ಹೆಚ್ಚಿನ ಒತ್ತು ನೀಡುವುದಾದರೆ ಸೂರ್ಯಕುಮಾರ್‌ ಯಾದವ್‌ ಅಥವಾ ಇಶಾನ್‌ ಕಿಶನ್‌ ಅವರಲ್ಲಿ ಒಬ್ಬರನ್ನು ಪರಿಗಣಿಸಬೇಕು.

ಭಾರತದ ಬ್ಯಾಟಿಂಗ್‌ ಶಕ್ತಿಯ ಬಗ್ಗೆ ವಿವರಿಸುವ ಅಗತ್ಯವಿಲ್ಲ. ನಾಯಕ ರೋಹಿತ್‌ ಶರ್ಮಾ ಗಂಟೆಗೆ 200ಕಿಮೀ ವೇಗದಲ್ಲಿದ್ದಾರೆ. ವಿರಾಟ್‌ ಕೊಹ್ಲಿಯ ಅಬ್ಬರ ಎಂದಿನಂತೆ ಮುಂದುವರಿದರೆ, ಕೆಎಲ್‌ ರಾಹುಲ್‌ ನೈಜ ಆಟ ಪ್ರದರ್ಶಿಸಿದರೆ ನ್ಯೂಜಿಲೆಂಡ್‌ ಹಾದಿ ಕಠಿಣವಾಗಲಿದೆ. ಕಿವೀಸ್‌ ಪಡೆಯಲ್ಲಿ ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೊಲ್ಟ್‌, ಲೂಕಿ ಫರ್ಗ್ಯುಸನ್‌ ತಂಡಕ್ಕೆ ಆದಾರವಾಗಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿದ್ದಾರೆ.

ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯಗಳಿಗೆ ಹೆಚ್ಚಿನ ಪ್ರಚಾರ ನೀಡಿ ಕ್ರಿಕೆಟ್‌ ಅಭಿಮಾನಿಗಳನ್ನು ಹುಚ್ಚೆಬ್ಬಿಸುವ ಮಾಧ್ಯಮಗಳು ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಪಂದ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ಏಕೆಂದರೆ ನಿಜವಾಗಿಯೂ ಎರಡು ವೃತ್ತಿಪರ ಪಂದ್ಯಗಳ ನಡುವಿನ ಕುತೂಹಲದ ಕಾದಾಟವಿದು. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಸೋತರೆ ಭಾರತ ಆ ಸ್ಥಾನಕ್ಕೆ ತಲುಪಲಿದೆ. ನ್ಯೂಜಿಲೆಂಡ್‌ ಹಾಗೂ ಭಾರತ ಸದ್ಯ ಅಂಕಪಟ್ಟಿಯಲ್ಲಿ 1-2 ಸ್ಥಾನದಲ್ಲಿವೆ.

Related Articles