Monday, September 16, 2024

ಮೀನುಗಾರರ ಕೇರಿಯಿಂದ ಏಷ್ಯನ್‌ ಗೇಮ್ಸ್‌ಗೆ ಹರೀಶ್‌ ಮುತ್ತು!

ಉಡುಪಿ: ಶಾಲೆಗೆ ಚಕ್ಕರ್‌ ಹಾಕುತ್ತ, ತಂದೆಯೊಂದಿಗೆ ಮೀನು ಹಿಡಿಯುತ್ತ, ಚಿಕ್ಕಪ್ಪನೊಂದಿಗೆ ಸರ್ಫಿಂಗ್‌ ಕಲಿಯುತ್ತ, ಕಡಲನ್ನೇ ನಂಬಿ ಬದುಕಿರುವ ತಮಿಳುನಾಡಿನ ಮಹಾಬಲಿಪುರಂ ಅಥವಾ ಮಾಮಲ್ಲಪುರಂನ ಮೀನುಗಾರರ ಕಾಲೊನಿಯ ಹುಡುಗ ಹರೀಶ್‌ ಮುತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಆಯ್ಕೆಯಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ಆದರೆ ಏಷ್ಯನ್‌ ಗೇಮ್ಸ್‌ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಫಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಹಿರಿಮೆ ಹರೀಶ್‌ ಮುತ್ತುಗೆ ಲಭಿಸಿದೆ. Inspirational journey of Harish Muthu from fishermen colony to Asian Games Japan 2026

ಮಾಲ್ಡೀವ್ಸ್‌ನಲ್ಲಿ ನಡೆದ ಏಷ್ಯನ್‌ ಸರ್ಫಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲಪುವ ಮೂಲಕ ಹರೀಶ್‌ ಮುತ್ತು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮೀನುಗಾರರು ಕಡಲನ್ನೇ ಆಶ್ರಯಿಸಿರುತ್ತಾರೆ. ಇಲ್ಲಿ ನಿರಂತರವಾಗಿ ಬರುವ ಅಲೆಗಳೇ ಅವರ ಬದುಕನ್ನು ನಿರ್ಧರಿಸುತ್ತವೆ. ಹರೀಶ್‌ ಚಿಕ್ಕಂದಿನಿಂದಲೇ ತಂದೆ ಮುತ್ತು ಅವರೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ. ಮೀನುಗಾರಿಕೆ ನಡುವೆ ಬಿಡುವಿದ್ದಾಗ ಶಾಲೆಗೆ ಹೋಗುತ್ತಿದ್ದ. ಜೊತೆಯಲ್ಲಿ ಅಲೆಗಳೊಂದಿಗೆ ಬೆರೆತು ಚಿಕ್ಕಪ್ಪನೊಂದಿಗೆ ಸರ್ಫಿಂಗ್‌ ಕಲಿತಿದ್ದ. ಮಹಾಬಲಿಪುರಂ ಮೀನುಗಾರರ ಕಾಲೊನಿಯಲ್ಲಿ ಒಂದು ಸರ್ಫಿಂಗ್‌ ತರಬೇತಿ ಕೇಂದ್ರವಿದ್ದು ಹೆಸರು ಮುಮು. ಇದನ್ನು ಹರೀಶ್‌ ಅವರ ಚಿಕ್ಕಪ್ಪ ನಡೆಸುತ್ತಾರೆ. ಹರೀಶ್‌ ಅವರ ತಾಯಿ ಸರೀತಾ ಅವರು ಮುತ್ತು ಅವರಿಗೆ ಮೀನುಗಾರಿಕೆಯಲ್ಲಿ ನೆರವಾಗುತ್ತ, ಮನೆಗೆಲಸ ಮಾಡುತ್ತಾರೆ.

20 ವರ್ಷ ಪ್ರಾಯದ ಹರೀಶ್‌ ಆರನೇ ವಯಸ್ಸಿನಲ್ಲೇ ಸರ್ಫಿಂಗ್‌ ಕಲಿತವ. ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದು ರ‍್ಯಾಂಕಿಂಗ್‌ನಲ್ಲಿ ದೇಶದಲ್ಲಿ 5ನೇ ಸ್ಥಾನ ತಲುಪಿದವ. ಆದರೆ ಏಷ್ಯನ್‌ ಗೇಮ್ಸ್‌, ನ್ಯಾಷನಲ್‌ ಗೇಮ್ಸ್‌ ಆಯ್ಕೆ ಪ್ರಕ್ರಿಯೆ ಬಗ್ಗೆ ಹರೀಶ್‌ಗೆ ಅಷ್ಟು ಮಾಹಿತಿ ಇಲ್ಲ.

“ಒಟ್ಟಾರೆ ಅಲೆಗಳ ನಡುವೆ ಇರುತ್ತೇನೆ, ತೇಲುತ್ತೇನೆ, ಅಪ್ಪಗೆ ಮೀನುಗಾರಿಕೆಯಲ್ಲಿ ನೆರವಾಗುತ್ತೇನೆ, ದಿನಕ್ಕೆ  ಒಂದರಿಂದ ಒಂದೂವರೆ ಸಾವಿರ ಸಂಪಾದನೆ ಆಗುತ್ತದೆ. ದೊಡ್ಡ ಅಲೆಗಳಿದ್ದರೆ ಮೀನುಗಾರಿಕೆಗೆ ರಜೆ. ಚಿಕ್ಕಪ್ಪನ ಸರ್ಫಿಂಗ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವೆ. ಏಷ್ಯನ್‌ ಗೇಮ್ಸ್‌ಗೆ ಸರ್ಫಿಂಗ್‌ನಲ್ಲಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಸುದ್ದಿಕೇಳಿ ಖುಷಿಯಾಯಿತು. ಕ್ರೀಡೆ ನಮ್ಮಂಥ ಬಡ ಕುಟುಂಬದ ಮನೆಯನ್ನು ಬೆಳಗುವುದಾದರೆ ಆ ಹಾದಿಯಲ್ಲೇ ಮುಂದೆ ಸಾಗುವೆ. ಮೀನುಗಾರಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿದ ಕಾರಣ ಓದಿನ ಕಡೆಗೆ ಗಮನ ಹರಿಸಲಾಗಲಿಲ್ಲ. ದ್ವಿತೀಯ ಪಿಯುಸಿ ಪಾಸಾಗಿ ಸದ್ಯ ಓದಿಗೆ ವಿರಾಮ ಹಾಕಿರುವೆ. ಸರ್ಫಿಂಗ್‌ನಲ್ಲಿ ಮತ್ತಷ್ಟು ಸಾಧನೆ ಮಾಡಿ ಓದಿನಲ್ಲಿ ಮುಂದುವರಿಯಬೇಕೆಂಬ ಹಂಬಲವಿದೆ,” ಎಂದು ಹರೀಶ್‌ ಮುತ್ತು sportsmail ಗೆ ತಿಳಿಸಿದ್ದಾರೆ.

Related Articles