ಸೋಮಶೇಖರ್ ಪಡುಕರೆ, ಬೆಂಗಳೂರು
ಇದು ಮಕ್ಕಳ ಕ್ರೀಡಾ ಸಾಧನೆಗಾಗಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉನ್ನತ ಹುದ್ದೆಯನ್ನೇ ತೊರೆದ ತಂದೆಯೊಬ್ಬರ ಕತೆ. ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗಿಲ್ಲ. ಆದರೆ ತನ್ನ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಪಣ ತೊಟ್ಟು ಅವರ ಕ್ರೀಡಾ ಆರೈಕೆಗಾಗಿ ಸೆಜೆಂಟಾ ಎಂಬ ಬಹುರಾಷ್ಟ್ರೀಯ ಕಂಪನೆಯ ಉದ್ಯೋಗವನ್ನೇ ತೊರೆದ ತುಮಕೂರಿನ ಮಂಜುನಾಥ ತಿಮ್ಮಯ್ಯ ಎಂಬ ಮಾಜಿ ಕ್ರೀಡಾಪಟುವೊಬ್ಬರ ಜೀವನ ಗಾಥೆ.
ಗುಜರಾತಿನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು 20 ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾದ ಕೃಷಿಕ್ ಎಂ, ಅವರ ಕ್ರೀಡಾ ಬದುಕಿನ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದಾಗ ಅವರ ತಂದೆ ಮಂಜುನಾಥ ಅವರ ಕ್ರೀಡಾ ಬದುಕು ಕುತೂಹಲವೆನಿಸಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಯಲದಲ್ಲಿ ಬಿಎಸ್‌ಸಿ ಎಗ್ರಿಕಲ್ಚರ್ ಓದುವಾಗ ಮಂಜುನಾಥ್ ಅವರು 400 ಮೀ. ಓಟದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬೆಳ್ಳಿ ಹಾಗೂ 200 ಮೀ. ಓಟದಲ್ಲಿ ಕಂಚಿನ ಪದಕವನ್ನು ಗೆದ್ದವರು. ಕಾರಣಾಂತರಗಳಿಂದ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಆಗಲಿಲ್ಲ. ಕೃಷಿಯಲ್ಲಿ ಪದವಿ ಮುಗಿಸಿದ ನಂತರ ಸೆಜೆಂಟಾ ಎಂಬ ಕೃಷಿ ಸಂಬಂಧಿತ ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಇಡೀ ಕರ್ನಾಟಕದ ಮಾರುಕಟ್ಟೆ ವಿಭಾಗವನ್ನು ನಿರ್ವಹಿಸುವ ಉನ್ನತೆ ಹುದ್ದೆ ಸಿಕ್ಕಿತು. ಕೈ ತುಂಬ ಸಂಬಳವೂ ಬರುತ್ತಿತ್ತು. ಪತ್ನಿ ರೂಪಾ ಸಿ.ಎಚ್. ಕೂಡ ಕೃಷಿ ವಿಜ್ಞಾದಲ್ಲಿ ಪದವೀಧರೆ. ಕೃಷಿಯನ್ನೇ ಉಸಿರಾಗಿಸಿಕೊಂಡ ದಂಪತಿ ತಮಗೆ ಹುಟ್ಟಿದ ಮೊದಲ ಮಗುವಿಗೆ ಪ್ರೀತಿಯಿಂದ ಕೃಷಿಕ ಎಂದು ಹೆಸರಿಟ್ಟರು.
ಕೃಷಿಕನಲ್ಲಿ ಕ್ರೀಡೆಯ ಕಾಳಜಿ: ಕೃಷಿಕನಿಗೆ ಚಿಕ್ಕಂದಿನಿಂದಲೂ ಆಟೋಟದಲ್ಲಿ ಬಹಳ ಕಾಳಜಿ. ಇದು ಮಂಜುನಾಥ ಅವರಲ್ಲಿ ಹೊಸ ಉತ್ಸಾಹವನ್ನು ಉಂಟು ಮಾಡಿತ್ತು. ಓದಿಗಿಂತ ಮಗನ ಕ್ರೀಡಾಸಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅದರಂತೆ ಕೃಷಿಕ ಜೂನಿಯರ್ ಹಂತದಲ್ಲಿ ರಾಜ್ಯಮಟ್ಟದಲ್ಲಿ ಪದಕ ಗೆಲ್ಲಲಾರಂಭಿಸಿದ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ತುಮಕೂರು ಜಿಲ್ಲೆಯ ಕೋಚ್ ಶಿವಪ್ರಸಾದ್ ಅವರಲ್ಲಿ ಉತ್ತಮ ತರಬೇತಿಯೂ ಸಿಕ್ಕಿತು.
ಮಂಜುನಾಥ್ ಅವರ ಕಾರ್ಯವೈಖರಿಯನ್ನು ಮೆಚ್ಚಿದ ಕಂಪೆನಿಯು ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಪದೋನ್ನತಿ ನೀಡಿತು. ಇದು ನಡೆದದ್ದು 2013ರಲ್ಲಿ. ತಿಂಗಳಿಗೆ ಲಕ್ಷಾಂತರ ವೇತನ ಸಿಗುವ ಕೆಲಸ ಉತ್ತಮವೋ ತನ್ನ ಮಗನ ಕ್ರೀಡಾ ಭವಿಷ್ಯ ಮುಖ್ಯವೋ ಎಂಬುದರ ಬಗ್ಗೆ ಮಂಜುನಾಥ್ ಯೋಚಿಸತೊಡಗಿದರು. ಕ್ರೀಡೆಯಲ್ಲಿ ತನಗೆ ದೇಶವನ್ನು ಪ್ರತಿನಿಧಿಸಲಾಗಲಿಲ್ಲ, ತನ್ನ ಮಕ್ಕಳಾದರೂ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರಲಿ ಎಂಬ ಉದ್ದೇಶದಿಂದ ಕಂಪೆನಿಯ ಹುದ್ದೆಯನ್ನು ತೊರೆದು ಮಕ್ಕಳ ಕ್ರೀಡಾ ಬದುಕಿಗೆ ನೆರವಾಗಲು ಗಟ್ಟಿ ಮನಸ್ಸುಮಾಡಿ ಉದ್ಯೋಗ ತೊರೆದು ಹೊರಬಂದರು.
ಮಂಜುನಾಥ್ ಅವರ ಕಿರಿಯ ಮಗ ಕನಿಷ್ಕ್ ಎಂ. ಕೂಡ 100, 200 ಮೀ ಓಟದಲ್ಲಿ ಕಿರಿಯರ ವಿಭಾಗದಲ್ಲಿ ಚಾಂಪಿಯನ್. ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಮತ್ತು ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿ ಭವಿಷ್ಯದಲ್ಲಿ ಉತ್ತಮ ಅಥ್ಲೀಟ್ ಅಗುವ ಭರವಸೆ ತೋರಿಸಿದ್ದಾರೆ.
ಮಾದರಿ ತಂದೆ: ಪರೀಕ್ಷೆಯಲ್ಲಿ ಅಂಕ ಗಳಿಸಿದ್ದು ಕಡೆಮಿಯಾಯಿತು ಎಂದು ಗೊಣಗುವ ಹೆತ್ತವರ ನಡುವೆ ಮಂಜುನಾಥ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಮಾದರಿ ಎನಿಸಿದ್ದಾರೆ. ಅಂದು ಕೈಗೊಂಡ ತೀರ್ಮಾನದ ಬಗ್ಗೆ ಈಗ ಹೆಮ್ಮೆ ಅನಿಸುತ್ತಿದೆ ಎಂದಿದ್ದಾರೆ. “2013ರಲ್ಲಿ ರಾಜೀನಾಮೆ ನೀಡುವಾಗ ಕೈ ನಡುಗುತ್ತಿತ್ತು. ಮನೆಯವರನ್ನು ಯಾವ ರೀತಿಯಲ್ಲಿ ಮನವೊಲಿಸಲಿ ಎಂಬ ಚಿಂತೆ ಕಾಡುತ್ತಿತ್ತು. ಈ ನಡುವೆ ಪತ್ನಿಗೆ ಸರಕಾರಿ ಉದ್ಯೋಗ ಸಿಕ್ಕಿತು. ಅದೊಂದು ಧೈರ್ಯ, ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನಲ್ಲಿ ಎರಡು ಚಪಾತಿ, ಎರಡು ಇಡ್ಲಿ ಇದ್ದರೆ ಸಾಕೆಂಬ ಸಿದ್ಧಾಂತ ನನ್ನದು. ಅದು ನನ್ನ ವೈಯಕ್ತಿಕ. ಅಂತಿಮವಾಗಿ ಗಟ್ಟಿ ನಿರ್ಧಾರ ಕೈಗೊಂಡು ಸಹಿ ಮಾಡಿದೆ. ಆಗ ನನಗೆ ಬರೇ 40 ವರ್ಷ. ಬದುಕಿನಲ್ಲಿ ಗಳಿಸಬಹುದಾದ ಸಮಯ. ಆದರೆ ನನಗೆ ನನ್ನ ಮಕ್ಕಳ ಕ್ರೀಡಾ ಬದುಕು ಮುಖ್ಯವಾಗಿತ್ತು. ಪ್ರಾಥಮಿಕ ಹಂತದಲ್ಲಿ ಉತ್ತಮ ಪ್ರೋತ್ಸಾಹ ಸಿಕ್ಕರೆ ಸೀನಿಯರ್ ಹಂತದಲ್ಲಿ ಅವರಾಗಿಯೇ ಹೊಂದಿಕೊಳ್ಳುತ್ತಾರೆ. ಈಗ ನಾನು ಉತ್ತಮ ತೀರ್ಮಾನವನ್ನೇ ಕೈಗೊಂಡಿರುವೆ ಅನಿಸುತ್ತಿದೆ. ಇಬ್ಬರೂ ಕ್ರೀಡೆಯಲ್ಲಿ ಆಸಕ್ತಿ ತೋರಿ ತಮ್ಮ ವಯಸ್ಸಿಗೆ ಅನುಗುಣವಾದ ಸಾಧನೆ ಮಾಡುತ್ತಿದ್ದಾರೆ. ಹಣ ಗಳಿಸುತ್ತಲೇ ಬದುಕು ಮೂಲೆಗುಂಪಾಗಬಾರದು. ಈ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕು,” ಎಂದು ಮಂಜುನಾಥ್ ಹೇಳುವಾಗ ಅಚ್ಚರಿಯ ಬದುಕೊಂದು ಸ್ಪಷ್ಟವಾಗುತ್ತದೆ.
ನಿಜವಾದ ಕೃಷಿಕ: ಮಂಜುನಾಥ್ ಅವರು ಬಹುರಾಷ್ಟ್ರೀಯ ಕಂಪೆನಿ ತೊರೆದರೂ, ಕೃಷಿಯನ್ನು ಮುಂದುವರಿಸಿದರು. ಗೆಳೆಯರ ಜೊತೆ ಸೇರಿಕೊಂಡು ತುಮಕೂರಿನ ಹೊರವಲಯದಲ್ಲಿ ತೋಟಗಾರಿಕೆಯನ್ನು ಮಾಡಿಕೊಂಡಿದ್ದಾರೆ. “ಕೃಷಿ ಪದವಿಯಲ್ಲಿ ಕಲಿತದ್ದನ್ನು ಕಾರ್ಯರೂಪಕ್ಕೆ ತಂದು ಈಗ ಕೃಷಿಯನ್ನೇ ಬದುಕನ್ನಾಗಿಸಿಕೊಂಡಿರುವೆ. ಮಕ್ಕಳ ಕ್ರೀಡೆಗೆ ನೆರವಾಗುತ್ತಿರುವೆ,” ಎಂದು ಮಂಜುನಾಥ್ ಹೇಳಿದರು.
ತಂದೆಯೇ ಸ್ಫೂರ್ತಿ: ಕೃಷಿಕ್
ಕ್ರೀಡೆಗಾಗಿ ಮಂಜುನಾಥ್ ಅವರು ಮಾಡಿರುವ ತ್ಯಾಗಕ್ಕೆ ಅವರ ಮಗ ಕೃಷಿಕ್ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದಾರೆ. ನನ್ನೆಲ್ಲ ಯಶಸ್ಸಿಗೆ ತಂದೆಯೇ ಸ್ಫೂರ್ತಿ ಎನ್ನುತ್ತಾರೆ. “ಎಂಜಿನಿಯರಿಂಗ್ ಸೇರುವುದಕ್ಕೆ ಮೊದಲು ಪ್ರತಿ ನಿತ್ಯವೂ ಐದು ಗಂಟೆಗೆ ಅಭ್ಯಾಸಕ್ಕಾಗಿ ನನ್ನೊಂದಿಗೆ ಅಂಗಣಕ್ಕೆ ಬರುವರು. ಆಹಾರ, ವ್ಯಯಾಮ ಕ್ರಮ ಮೊದಲಾದ ವಿಷಯಗಳ ಬಗ್ಗೆ ಸಲಹೆ ನೀಡುವರು. ಪ್ರತಿ ಬಾರಿಯೂ ಅಂಗಣದಲ್ಲಿ ಓಡುವಾಗ ಅವರನ್ನೇ ನೆನಪಿಸಿಕೊಂಡು ಓಡುವೆ. ನನ್ನ ಕ್ರೀಡಾ ಬದುಕಿಗಾಗಿ ಅವರು ಮಾಡಿದ ತ್ಯಾಗಕ್ಕೆ ಪದಕಗಳ ಉಡುಗೊರೆ ನೀಡುವುದೇ ನನ್ನ ಹಂಬಲ. ಆ ನಿಟ್ಟಿನಲ್ಲಿ ಶ್ರಮವಹಿಸುವೆ,” ಎಂದು ಕೃಷಿಕ್ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ಗೆ ತೆರಳುವ ಮುನ್ನ ನುಡಿದರು.