Monday, November 25, 2024

24 ಗಂಟೆಗಳ ಅಂತಾರಾಷ್ಟ್ರೀಯ ಅಲ್ಟ್ರಾರನ್‌: ಭಾರತಕ್ಕೆ ಸಮಗ್ರ ಪ್ರಶಸ್ತಿ

ಬೆಂಗಳೂರು, ಜುಲೈ 6: ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಅಲ್ಟ್ರಾ ರನ್ನರ್ಸ್‌ ಆಯೋಜಿಸಿದ್ದ 24 ಗಂಟೆಗಳ ಏಷ್ಯಾ ಮತ್ತು ಒಸೇನಿಯಾ ಚಾಂಪಿಯನ್‌ಷಿಪ್‌ ಓಟದಲ್ಲಿ ಭಾರತ ಸ್ಪರ್ಧಿಗಳು ಪುರುಷರ ವಿಭಾಗದಲ್ಲಿ ಚಿನ್ನ, ತಂಡ ವಿಭಾಗದಲ್ಲಿ ಬೆಳ್ಳಿ  ಮತ್ತು ಮಹಿಳೆಯರು ಬೆಳ್ಳಿ ಪದಕಗಳ ಸಾಧನೆ ಮಾಡಿದ್ದಾರೆ.

ಅಮರ್‌ ಸಿಂಗ್‌ ದೇವೇಂದ್ರ ಅವರಿಂದ ಮುನ್ನಡೆಸಲ್ಪಟ್ಟ  ಭಾರತ ಪುರುಷರ ತಂಡ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ರೇಸ್‌ನಲ್ಲಿ 24 ಗಂಟೆಗಳಲ್ಲಿ 736.959 ಕಿಮೀ ದೂರವನ್ನು ಕ್ರಮಿಸಿ ಚಿನ್ನದ ಪದಕ ಗೆದ್ದಿದೆ.

ಅಮರ್‌ ಸಿಂಗ್‌ ಅವರು 258.418 ಕಿಮೀ ಕ್ರಮಿಸಿ ವೈಯಕ್ತಿ ಉತ್ತಮ ಸಾಧನೆ ಮಾಡಿದರು. ಹಿಂದಿಗಿಂತ 18ಕಿಮೀ ಹೆಚ್ಚು ದೂರ ಕ್ರಮಿಸಿ ತಮ್ಮ ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಿಕೊಂಡು ಚಿನ್ನ ಗೆದ್ದರು. ಸೌರವ್‌ ಕುಮಾರ್‌ ರಂಜನ್‌ (242.564) ಮತ್ತು ಗೀನೋ ಆಂಟೋನಿ (238.977) ಮೂರನೇ ಸ್ಥಾನ ಪಡೆಯುವುದರೊಂದಿಗೆ ಭಾರತ ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತು.

ಆಸ್ಟ್ರೇಲಿಯಾ (628.405) ಮತ್ತು ಚೈನೀಸ್‌ ತೈಪೆ (563.591ಕಿಮೀ) ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದವು.

“ಭಾರತದ ಓಟಗಾರರು ಉತ್ತಮ ರೀತಿಯ ಪ್ರದರ್ಶನ ತೋರಿರುವುದು ನಮಗೆ ಖುಷಿಕೊಟ್ಟಿದೆ, 24 ಗಂಟೆಗಳ ಕಾಲ ನಿರಂತರವಾಗಿ ಓಡಿದ ಓಟಗಾರರಿಗೆ ಅಭಿನಂದನೆಗಳು,” ಎಂದು ಏಜೆಸ್‌ ಫೆರಡಲ್‌ ಲೈಫ್‌ ಇನ್ಷುರೆನ್ಸ್‌ ಕಂಪೆನಿಯ ಕಾರ್ತಿಕ್‌ ರಾಮನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತಮ ಪ್ರದರ್ಶನ ತೋರಿದ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಒಟ್ಟು 570.70ಕಿಮೀ ಪೂರ್ಣಗೊಳಿಸಿದ ಭಾರತದ ಮಹಿಳಾ ತಂಡ ಎರಡನೇ ಸ್ಥಾನ ಗಳಿಸಿತು.

607.63 ಕಿ.ಮೀ. ಪೂರ್ಣಗೊಳಿಸಿದ ಆಸ್ಟ್ರೇಲಿಯಾ ಚಿನ್ನದ ಪದಕ ಗೆದ್ದರೆ, 529.082 ಕಿಮೀ ಪೂರ್ಣಗೊಳಿಸಿದ ಚೈನೀಸ್‌ ತೈಪೆ ಕಂಚಿನ ಪದಕ ಗೆದ್ದುಕೊಂಡಿತು. 216.877ಕಿಮೀ ಪೂರ್ಣಗೊಳಿಸಿದ ಚೈನೀಸ್‌ ತೈಪೆಯ  ಕುವಾನ್‌ ಜೂ ಲಿನ್‌ ವನಿತೆಯ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರು. ಆಸ್ಟ್ರೇಲಿಯಾದ ಕಾಸ್ಸೀ ಕೊಹೇನ್‌ 214.990 ಕಿಮೀ ಪೂರ್ಣಗೊಳಿಸಿ ವೈಯಕ್ತಿಕ ವಿಭಾಗದ ಬೆಳ್ಳಿ ಗೆದ್ದರು. ಆಸೀಸ್‌ನ ಅಲಿಸಿಯಾ ಹೆರೋನ್‌ 211.442 ಕಿಮೀ ದೂರ ಕ್ರಮಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮುಕ್ತ ವಿಭಾಗದಲ್ಲಿ ಪೊಲೆಂಡ್‌ನ ಜೊಆನ್ನಾ ಜಕ್ರಾಸ್ವೆಕ್ಸಿ 199.20 ಕಿಮೀ ಕ್ರಮಿಸಿ ಅಗ್ರ ಸ್ಥಾನ ಪಡೆದರು. ಭಾರತದ ತೃಪ್ತಿ ಚಹ್ವಾಣ್‌ 134.90 ಕಿಮೀ ಕ್ರಮಿಸಿ ದ್ವಿತೀಯ ಸ್ಥಾನಿಯಾದರು.

ಎಲೈಟ್‌ ಪುರುಷರ ವಿಭಾಗದಲ್ಲಿ ಪೊಲೆಂಡ್‌ನ ಥೊಮಾಸ್‌ ಪೌಲೋಸ್ಕಿ 222 ಕಿಮೀ ಕ್ರಮಿಸಿ ಅಗ್ರ ಸ್ಥಾನ ಗಳಿಸಿದರೆ, ಮುಕ್ತ ವಿಭಾಗದಲ್ಲಿ ಭಾರತದ ಸಿಖಂದರ್‌ ಲಾಂಬಾ (203.36 ಕಿ.ಮಿ) ಅಗ್ರ ಸ್ಥಾನ ಗಳಿಸಿದರೆ, ಸಂಡೆಲ್‌ ನಿಪಾನೆ (190.53 ಕಿಮೀ) ದ್ವಿತೀಯ ಸ್ಥಾನಿಯಾದರು.

ರೇಸ್‌ ಡೈರೆಕ್ಟರ್‌, ಸಂಘಟಕರಾದ ಎನ್‌ಇಬಿ ಸ್ಪೋರ್ಟ್ಸ್‌ನ ನಗರಾಜ್‌ ಅಡಿಗ ಅವರು ಚಾಂಪಿಯನ್‌ಷಿಪ್‌ ಯಶಸ್ಸುಗೊಂಡಿರುವ ಬಗ್ಗೆ ಮಾತನಾಡಿ, “ಈ ರೀತಿಯಾಗಿ ಐಎಯು ಚಾಂಪಿಯನ್‌ಷಿಪ್‌ ಅನ್ನು ಭಾರತದಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲು. ಇದು ಉತ್ತಮ ರೀತಿಯಲ್ಲಿ ಯಶಸ್ಸು ಕಾಣಲು ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,” ಎಂದು ಹೇಳಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ.ಎಚ್‌.ಎನ್‌. ಗೋಪಾಲಕೃಷ್ಣ ಪಾಲ್ಗೊಂಡು, ವಿಜೇತರಿಗೆ ಬಹುಮಾನ ವಿತರಿಸಿದರು.

Related Articles