Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Punjab Kings : ಪಂಜಾಬ್‌ ಕಿಂಗ್ಸ್‌ ಗೆ 7 ರನ್ ಗೆಲುವು‌, ಕೋಲ್ಕತ್ತಾ ನೈಟ್‌ ರೈಡರ್ಸ್ ಗೆಲುವಿಗೆ ಮಳೆ ಅಡ್ಡಿ

ಮೊಹಾಲಿ : ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಗೆಲುವಿಗೆ ಭಂಗ ಬಂದಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಆರಂಭದಲ್ಲಿಯೇ ಮಳೆ ಆರ್ಭಟಿಸಿದೆ. ಐಪಿಎಲ್‌ನ ಎರಡನೇ ಪಂದ್ಯದ ಅಂತಿಮ ಹಂತದಲ್ಲಿ ಸುರಿದ ಮಳೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಗೆಲುವು ಕಸಿದಿದೆ. ಈ ಮೂಲಕ ಲೂವಿಸ್‌ ಡಕ್‌ವರ್ಥ್‌ ನಿಯಮದ ಪ್ರಕಾರ ಪಂಜಾಬ್‌ ಕಿಂಗ್ಸ್‌ ತಂಡ (Punjab Kings) 7 ರನ್‌ ಗಳ ಗೆಲುವು ದಾಖಲಿಸಿದೆ.

ಪಂಜಾಬ್‌ ಕಿಂಗ್ಸ್‌ (Punjab Kings) ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಎರಡೂ ತಂಡಗಳಿಗೂ ಗೆಲುವಿನ ಅವಕಾಶ ವಿತ್ತು. ಪಂಜಾಬ್‌ ಕಿಂಗ್ಸ್‌ ತಂಡ ರೆಸೆಲ್‌ ಹಾಗೂ ವೆಂಕಟೇಶ್‌ ಅಯ್ಯರ್‌ ವಿಕೆಟ್‌ ಪಡೆದುಕೊಳ್ಳುತ್ತಿದ್ದಂತೆಯೇ ಪಂಜಾಬ್‌ ಕಿಂಗ್ಸ್‌ಗೆ ಗೆಲುವಿನ ಆಸೆ ಚಿಗುರಿತ್ತು. ಈ ವೇಳೆ ಕೋಲ್ಕತ್ತಾ ತಂಡದ ಪರ ಶಾರ್ದೂಲ್‌ ಠಾಕೂರ್‌ ಹಾಗೂ ಸುನಿಲ್‌ ನರೇನ್‌ ಕ್ರೀಸ್‌ಗೆ ಆಗಮಿಸಿದ್ದು, ಉತ್ತಮ ಆಟದ ಪ್ರದರ್ಶನ ನೀಡಿದ್ದರು. ಆದರೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿದ್ದು ಕೋಲ್ಕತ್ತಾ ತಂಡದ ಗೆಲುವಿನ 24 ಎಸೆತಗಳಲ್ಲಿ 46 ರನ್‌ ಅಗತ್ಯವಿತ್ತು. ಈ ವೇಳೆಯಲ್ಲಿ ಸುರಿದ ಮಳೆ ಕೋಲ್ಕತ್ತಾ ಗೆಲುವಿನ ಆಸೆಗೆ ತಣ್ಣೀರೆರಚಿದೆ.

ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕರಾದ ಪ್ರಭಾಸಿಮ್ರನ್ ಹಾಗೂ ಶಿಖರ್‌ ಧವನ್‌ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ ಪ್ರಭಾಸಿಮ್ರನ್ 23 ರನ್‌ ಗಳಿಸಿ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಇಳಿದ ಬಿ.ರಾಜಪಕ್ಷ ಜೊತೆಯಾದ ಶಿಖರ್‌ ಧವನ್‌ ಇನ್ನಿಂಗ್ಸ್‌ ಕಟ್ಟುವ ಕಾರ್ಯಕ್ಕೆ ಮುಂದಾದ್ರು. ಶಿಖರ್‌ ಧವನ್‌ ನಿಧಾನಗತಿಯ ಬ್ಯಾಟಿಂಗ್‌ಗೆ ಮನಮಾಡಿದ್ರೆ, ರಾಜಪಕ್ಷ ಕೇವಲ 32 ಎಸೆತಗಳಲ್ಲಿ ಭರ್ಜರಿ 50 ರನ್‌ ಗಳಿಸಿದ್ರು. ನಂತರದಲ್ಲಿ ಬಂದ ಜಿತೇಶ್‌ ಶರ್ಮಾ 21, ರಾಜಾ 16 ರನ್‌ ಗಳಿಸಿದ್ರೆ, ಶಿಖರ್‌ ಧವನ್‌ 40 ರನ್‌ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ಸ್ಯಾಮ್‌ ಕರನ್‌ 17 ಎಸೆತಗಳಲ್ಲಿ 26 ಹಾಗೂ ಶಾರೂಖ್‌ ಖಾನ್‌ 7 ಎಸೆತಗಳಲ್ಲಿ 11 ರನ್‌ ಬಾರಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ನೆರವಾಗಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಟೀಂ ಸೌಥಿ 2 ಹಾಗೂ ಸುನಿಲ್‌ ನರೇನ್‌, ಉಮೇಶ್‌ ಯಾದವ್‌ ಹಾಗೂ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್‌ ತಂಡದ ಬೌಲರ್‌ ಅರ್ಷದೀಪ್‌ ಸಿಂಗ್‌ ಆಘಾತ ನೀಡಿದ್ರು. ಮನ್‌ದೀಪ್‌ ಸಿಂಗ್‌ ಕೇವಲ 2 ರನ್‌ ಗಳಿಗೆ ವಿಕೆಟ್‌ ಒಪ್ಪಿಸಿದ್ರೆ, ಅಂಕುಲ್‌ ರಾಯ್‌ ಆಟ ಕೇವಲ 4 ರನ್‌ ಗಳಿಗೆ ಕೊನೆಯಾಯ್ತು. ನಂತರ ಗುರ್ಬಜ್‌ ಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ. ಅಯ್ಯರ್‌ 34 ರನ್‌ ಗಳಿಸಿದ್ರೆ, ಗರ್ಬಜ್‌ 22 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ನಿತೇಶ್‌ ರಾಣಾ 24 ರನ್‌ ಹಾಗೂ ಆಂಡ್ರೆ ರಸೆಲ್‌ 35 ರನ್‌ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದಾರೆ. ಆದರೆ ಸ್ಯಾಮ್‌ ಕರನ್‌ ಹಾಗೂ ರಾಜಾ ಇಬ್ಬರನ್ನು ಬಲಿ ಪಡೆದಿದ್ದಾರೆ. ನಂತರ ಶಾರ್ದೂಲ್‌ ಠಾಕೂರ್‌ 8 ರನ್‌ ಹಾಗೂ ಸುನಿಲ್‌ ನರೇನ್‌ 7 ರನ್‌ ಗಳಿಸಿ ಉತ್ತಮ ಆಟವಾಡುತ್ತಿದ್ದ ವೇಳೆಯಲ್ಲಿಯೇ ಮಳೆ ಪಂದ್ಯಕ್ಕೆ ಅಡ್ಡಿಯಾಗಿದೆ. ಈ ವೇಳೆಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿದೆ. ಅಂತಿಮವಾಗಿ ಮಳೆ ಆರ್ಭಟ ನಿಲ್ಲಿಸದ ಹಿನ್ನೆಲೆಯಲ್ಲಿ ಲೂವಿಸ್‌ ಡಕ್‌ವರ್ಥ್‌ ನಿಯಮದ ಪ್ರಕಾರ ಪಂಜಾಬ್‌ ಕಿಂಗ್ಸ್‌ ತಂಡ ಗೆಲುವು ಕಂಡಿದೆ.

ಸಂಕ್ಷಿಪ್ತ ಸ್ಕೋರ್‌ :
ಪಂಜಾಬ್‌ ಕಿಂಗ್ಸ್‌ : 191 (5 ವಿಕೆಟ್, 20 ಓವರ್‌ ): ಬಿ.ರಾಜಪಕ್ಷ (50 ), ಶಿಖರ್‌ ಧವನ್‌ (40), ಸ್ಯಾಮ ಕರನ್‌ (26), ಪ್ರಭಾಸಿಮ್ರನ್ (23), ಜಿತೇಶ್‌ ಶರ್ಮಾ (21), ರಾಜಾ (16), ಶಾರೂಖ್‌ ಖಾನ್‌ (11), ಟೀಂ ಸೌಥಿ 2-54, ಚಕ್ರವರ್ತಿ 1-26, ಉಮೇಶ್‌ ಯಾದವ್‌ 1-27, ಸುನಿಲ್‌ ನರೇನ್ 1-40

ಕೋಲ್ಕತ್ತಾ ನೈಟ್‌ ರೈಡರ್ಸ್‌ : 146 (7 ವಿಕೆಟ್‌, 16 ಓವರ್)‌ : ಆಂಡ್ರೆ ರೆಸೆಲ್‌ (35), ವೆಂಕಟೇಶ್‌ ಅಯ್ಯರ್‌ (34), ನಿತೇಶ್‌ ರಾಣಾ (24), ರಹಮನುಲ್ಲಾ ಗುರ್ಬಜ್‌ (22), ಅರ್ಷದೀಪ್‌ 4-19, ಸಿಕಂದರ್‌ ರಾಜಾ 1-25, ನಥನ್‌ ಎಲ್ಲಿಸ್‌ 1-29, ಸ್ಯಾಮ್‌ ಕರನ್‌ 1-38, ರಾಹುಲ್‌ ಚಹರ್‌ 1-12

ಇದನ್ನೂ ಓದಿ : IPL 2023 CSK vs GT: ಮುಖೇಶ್ ಚೌಧರಿ ಬದಲಿಗೆ ಸಿಎಸ್ಕೆ ಸೇರಿದ ಆಕಾಶ್ ಸಿಂಗ್

ಇದನ್ನೂ ಓದಿ : ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಹೊಸ ಪ್ರತಿಭೆ ಕರಾವಳಿಯ ಅಖಿಲೇಶ್‌


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.