ಆರ್ಸೀಬಿ…. ನಿಮ್ಮ ಹಣ, ನಿಮ್ಮ ಆಯ್ಕೆ, ನಿಮ್ಮ ವ್ಯಾಪಾರ. ಇದರಲ್ಲಿ ಕನ್ನಡಿಗರು ಹಸ್ತಕ್ಷೇಪ ಮಾಡೊಲ್ಲ. ಆದರೆ ಕರ್ನಾಟಕದ ಆಟಗಾರರನ್ನು ಕಡೆಗಣಿಸುವ ನಿಮ್ಮ ದುರಹಂಕಾರಕ್ಕೆ ಕನ್ನಡಿಗರ ವಿರೋಧ ನಿರಂತರ. Kannadigas got angry against Royal Challengers Bengaluru for not selecting more state players.
ವಿಜಯ ಮಲ್ಯ ಅವರು ಮಾಲೀಕರಿದ್ದಾಗ ಕರ್ನಾಟಕದ ಎಲ್ಲ ಶ್ರೇಷ್ಠ ಆಟಗಾರರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಈಗ? ರಾಹುಲ್ ಅವರು Rcb ಸೇರುತ್ತಾರೆ, ಸೇರಬೇಕು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚಿನವರು ಬರೆದಿದ್ದರು. ಕರ್ನಾಟಕದ ಕ್ತಿಕೆಟ್ ಅಭಿಮಾನಿಗಳ ನಿರೀಕ್ಷೆಯೂ ಅದಾಗಿತ್ತು. ಕರ್ನಾಟಕದ ಆಟಗಾರರ ಹೆಸರು ಹರಾಜಿನಲ್ಲಿ ಬಂದಾಗ ಬೇರೆಲ್ಲೋ ನೋಡುತ್ತಿರುವ ನಿಮ್ಮ ಖರೀದಿದಾರರು, ವೆಂಕಟೇಶ್ ಅಯ್ಯರ್ ಬಗ್ಗೆ 24cr ವರೆಗೂ ಸ್ಪರ್ಧೆ ನೀಡಿದ್ದು ದುರಂತ. ಕರ್ನಾಟಕದ ಇಬ್ಬರು ಆಟಗಾರರು ಬೆಂಚ್ ಬಿಸಿ ಮಾಡಲು ಇದ್ದಾರೆ. ಮನೋಜ್ ಬಾಂಡಗೆ ಮೂರು ವರ್ಷಗಳಿಂದ ಬೆಂಚ್ ಬಿಸಿ ಮಾಡುತಿದ್ದು ಆಡಲು ಅವಕಾಶ ನೀಡುತ್ತಿಲ್ಲ.
ಇಲ್ಲಿಯ ಕ್ರೀಡಾಂಗಣ, ನೆಲ, ಜಲ ಎಲ್ಲ ಬಳಸಿ, ಇಲ್ಲಿಯವರ ಮನದಲ್ಲಿ ಲಿಕ್ಕರ್ ಬ್ರಾಂಡ್ ಗಳು ಬೇರೂರುವಂತೆ ಮಾಡಿ, ಒಂದು ಕ್ರೀಡಾ ತಂಡವಾಗಿದ್ದರೂ ಬಾರ್ ಗಳನ್ನು ಪ್ರಮೋಟ್ ಮಾಡಿ, ತಂಡದ ಲಾಂಛನವನ್ನು ರಾಯಲ್ ಚಾಲೆಂಜ್ ವಿಸ್ಕಿಯ ಲಾಂಛನಕ್ಕೆ ಬದಲಾಯಿಸಿ, ಮಾರ್ಕೆಟಿಂಗ್ ಗೆ ಕೊಹ್ಲಿಯನ್ನಿಟ್ಟುಕೊಂಡು, ಕ್ರಿಕೆಟ್ ಬರೇ ಹೆಸರಿಗೆ ಮಾತ್ರ. ನೀವು ಮಾಡಿದ ಒಳ್ಳೆಯ ಕೆಲಸವೆಂದರೆ ಎರಡು ಕೆರೆಗಳ ಜೀರ್ಣೋದ್ಧಾರ ಮಾಡಿದ್ದು. ಇದಕ್ಕೆ ಮುಖ್ಯ ಕಾರಣ ಪ್ರತಿ ದಿನ ಎಣ್ಣೆಗೆ ಮಿಕ್ಸ್ ಮಾಡಲು ನೀರು ಬೇಕ್ ನೋಡಿ. ಮೊದಲು ಇಲ್ಲಿಯ ಯುವ ಆಟಗಾರರಿಗೆ ಅವಕಾಶ ಕೊಡಿ. ಇಲ್ಲ ರಾಯಲ್ ಚಾಲೆಂಜರ್ಸ್ ಬಗ್ದಾದ್, ರಾಯಲ್ ಚಾಲೆಂಜರ್ಸ್ ಬರ್ಮುಡಾ, ರಾಯಲ್ ಚಾಲೆಂಜರ್ಸ್ ಬಾರ್, ರಾಯಲ್ ಚಾಲೆಂಜರ್ಸ್ ಬಕಾರ್ಡಿ….ಇಟ್ಟರೂ RCB ಯೇ ಬರುತ್ತದೆ. ಕನ್ನಡಿಗರನ್ನು ಕಡೆಗಣಿಸುವ ನಿಮಗೆ ಬೆಂಗಳೂರು ಹೆಸರನ್ನು ಬಳಸುವ ನೈತಿಕತೆ ಇಲ್ಲ. 2008 ಅಂದರೆ ಐಪಿಎಲ್ ಆರಂಭವಾದಾಗಿನಿಂದ ನಿಮ್ಮ ಸಾಧನೆಗಳ ಬಗ್ಗೆ ಬರ್ದೂ ಬರ್ದೂ ಸುಸ್ತಾಗಿದೆ. ನಿಮ್ಮ ಪ್ರದರ್ಶನ ನೀರಸ. ಸ್ಥಳೀಯ ಕ್ರಿಕೆಟಿಗರಿಗೆ ಅವಕಾಶ ಕೊಡದ, ಆಡಿಸದ ನಿಮ್ಮದೆಂಥಾ ಟೀಮು?.
ವಿಲ್ ಜಾಕ್ಸ್ ಅವರನ್ನು ಆರ್‌ಟಿಎಂ ಮಾಡಿಕೊಳ್ಳಲಾಗದೆ ಅವರು ಮುಂಬೈ ಇಂಡಿಯನ್ಸ್ ಪಾಲಾದಾಗ ಅದರ ಮಾಲೀಕ ಆಕಾಶ್ ಅಂಬಾನಿ ಬಂದು ಆರ್‌ಸಿಬಿಯ ಆಡಳಿತ ಮಂಡಳಿಯ ಕೈ ಕುಲುಕಿದ ಕ್ಷಣ ಇದೆಯಲ್ಲ ಅದು ನಿಮ್ಮ ಕ್ರಿಕೆಟ್ ಅರಿವವನ್ನು ಸ್ಪಷ್ಟಪಡಿಸುತ್ತದೆ.
ಟ್ರೋಫಿ ಯಾರೇ ಗೆಲ್ಲಲ್ಲಿ ಕ್ರಿಕೆಟ್ ಆಟದಲ್ಲಿ ನಾವು ಬದುಕಿನ ಪಾಠವನ್ನು ಕಲಿಯದಿದ್ದರೆ ಆ ಆಟ ಆಡಿ ಏನು ಪ್ರಯೋಜನ?. ನಮ್ಮ ನೆಲದಲ್ಲಿ ನಮ್ಮವರಿಗೆ ಅವಕಾಶ ಸಿಗಲಿಲ್ಲವೆಂದರೆ ಆ ತಂಡ ಗೆದ್ದರೇನು, ಬಿದ್ದರೇನು?