Thursday, April 18, 2024

ವಿಶ್ವ ಪಂಜ ಕುಸ್ತಿಗೆ ಪಂಚ ಕನ್ನಡಿಗರು

ಸೋಮಶೇಖರ್ ಪಡುಕರೆ ಬೆಂಗಳೂರು 

ಪಂಜ ಕುಸ್ತಿ,  ಅಂದರೆ ಆರ್ಮ್ ರೆಸ್ಲಿಂಗ್. ತೋಳ್ಬಲ ಬಲಿಷ್ಠವಾಗಿದ್ದರೆ ಈ ಕ್ರೀಡೆ ಸಲೀಸು. ಟರ್ಕಿಯಲ್ಲಿ  ಅಕ್ಟೋಬರ್ 12ರಿಂದ ನಡೆಯಲಿರುವ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐವರು ಪಾಲ್ಗೊಳ್ಳಲಿದ್ದಾರೆ.

ಸಾಮಾನ್ಯರ ವಿಭಾಗದಲ್ಲಿ ಬೆಂಗಳೂರಿನ ಆಕ್ಸಿಕ್ ಬ್ಯಾಂಕ್ ಉದ್ಯೋಗಿ ಮನೋಜ್ ದೇವನಾಥ್, ಹಾಸನದ ಎಂವಿಕೆ ಕಾಲೇಜಿನ ವಿದ್ಯಾರ್ಥಿನಿ ಮಧುರಾ, ಥಾಮ್ಸನ್ ಆಂಡ್ ರಾಯ್ಟರ್ಸ್‌ನ ಸಂದೇಶ್ ಬಿಜೆ ವೀಲ್‌ಚೇರ್ ವಿಭಾಗದಲ್ಲಿ, ಚಿಕ್ಕಮಗಳೂರಿನ ದೀಪಕ್, ಮೈಸೂರಿನ ರಾಜು ದೇಶವನ್ನು ಪ್ರತಿನಿಧಿಸುತ್ತಿರುವ ಆಟಗಾರರು.
ಮನೋಜ್ ಗುವಾಹಟಿ ಮೂಲದವರಾಗಿದ್ದರೂ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇಲ್ಲಿಯ ಆರ್ಮ್ ರೆಸ್ಲಿಂಗ್ ಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ.

ಸಂದೇಶ್ ಬಿಜೆ

ಇದುವರೆಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಸಂದೇಶ್‌ವೀಲ್ ಚೇರ್ ಡಿಸ್ಕಸ್  ಹಾಗೂ  ಶಾಟ್‌ಪುಟ್‌ನಲ್ಲಿ ದೇಶವನ್ನನು ಪ್ರತಿನಿಧಿಸಿರುತ್ತಾರೆ. ಈ ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಸಂದೇಶ್‌ಗೆ ಅರ್ಹತೆ ಪಡೆಯಲಾಗಲಿಲ್ಲ. ಆದರೆ ಮುಂದಿನ ಟೊಕಿಯೋ ಒಲಿಂಪಿಕ್ಸ್‌ನಲ್ಲಿ  ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಂಡಿರುವ ಆರ್ಮ್ ರೆಸ್ಲಿಂಗ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಆರ್ಮ್ ರೆಸ್ಲಿಂಗ್‌ನಲ್ಲಿ ಪದಕ ಗೆದ್ದ ಸಂದೇಶ್ ಬಿ.ಜೆ. ಈಗ ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ೩೨ ಮಂದಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮನೋಜ್ ದೇವನಾಥ್

ಈಗಾಗಲೇ ಜಾಗತಿಕ ಮಟ್ಟದ ಆರ್ಮ್ ರೆಸ್ಲಿಂಗ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಗುವಾಹಟಿ ಮೂಲದ ಆರ್ಮ್ ರೆಸ್ಲರ್ ಮನೋಜ್ ದೇವನಾಥ್ ಟರ್ಕಿಯಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಭರವಸೆಯ ರೆಸ್ಲರ್. ವಿಶ್ವದಲ್ಲಿ 6ನೇ ಹಾಗೂ ಏಷ್ಯಾದಲ್ಲಿ ನಾಲ್ಕನೇ ರಾಂಕ್ ಹೊಂದಿರುವ ಮನೋಜ್, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  ಅಸ್ಸಾಂ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.  ಬಲ್ಗೇರಿಯಾದಲ್ಲಿ ನಡೆದ ೩೮ನೇ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮನೋಜ್ ಆರನೇ ಸ್ಥಾನ ಗಳಿಸಿದ್ದರು. ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮನೋಜ್ ಎಡ ಹಾಗೂ ಬಲ ಕೈ ಎರಡರಲ್ಲೂ ಚಾಂಪಿಯನ್ ಪಟ್ಟ ಗೆದ್ದಿದ್ದರು.

ವಿರೋಧದ ನಡುವೆಯೂ ಕುಸ್ತಿ

ಹಾಸನದ ಮಧುರಾ ಕೃಷಿ ಕುಟುಂಬದಿಂದ ಬಂದ ಕ್ರೀಡಾಪಟು. ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಂತರ ಆರ್ಮ್ ಕುಸ್ತಿಯಲ್ಲೂ ಪಳಗಿದವರು. ತಂದೆ ನಾಗೇಂದ್ರ ಹಾಗೂ ತಾಯಿ ಶಿವಮ್ಮ ಅವರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೆ ವಿರೋಧ  ವ್ಯಕ್ತಪಡಿಸುತ್ತಿದ್ದರೂ, ಕ್ರೀಡೆಯನ್ನು ಉಸಿರಾಗಿಸಿಕೊಂಡು ಕಾಲೇಜು ಹಾಗೂ ಮನೆಗೆ  ಕೀರ್ತಿ ತಂದ ದಿಟ್ಟ ಚಾಂಪಿಯನ್. ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಹಾಗೂ ದಸರಾ ಆರ್ಮ್ ರೆಸ್ಲಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮಧುರಾ ಈ ಬಾರಿ ದಸರಾ ಕ್ರೀಡಾಕೂಟ ತಪ್ಪಿಹೋಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಟರ್ಕಿಯಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ದೇಶವನ್ನು ಪ್ರತನಿಧಿಸುತ್ತಿರುವ 32 ಸದಸ್ಯರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಮಧುರಾ ಪಾತ್ರರಾಗಿದ್ದಾರೆ.

ಮೈಸೂರಿನ ರಾಜು 

ಖಾಸಗಿ  ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ರಾಜು ಕುರಬ ಅವರು ಸಂಕಷ್ಟದ ನಡುವೆಯೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಬಾಡಿ ಬಿಲ್ಡಿಂಗ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗೆದ್ದಿರುವ, ಪಾತ್ರೆ ಅಂಗಡಿಯ ಮಾಲೀಕ ದೀಪಕ್ ಕುಮಾರ್ ವಿಶೇಷ ಚೇತನ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

Related Articles