Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಿವರ್‌ ರಾಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದ ಪಂಚಕನ್ಯೆಯರು

ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್‌ ರಿವರ್‌ ರಾಫ್ಟಿಂಗ್‌ನಲ್ಲಿ ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka girls won the Gold in Down River Rafting event at the 38th National Games being held in Uttarakhand.

ಬೆಂಗಳೂರಿನ ಪ್ರಾಂಜಲ, ಮಡಿಕೇರಿಯ ಪುಷ್ಪ, ಮೈಸೂರಿನ ಬಿಂದು, ಶಿವಮೊಗ್ಗದ ಐಶ್ವರ್ಯ ಹಾಗೂ ಶಿವಮೊಗ್ಗದ ಧನಲಕ್ಷ್ಮೀ ಅವರು ಕರ್ನಾಟಕ ರಾಜ್ಯದ ತಂಡದ ಸದಸ್ಯೆಯರಾಗಿರುತ್ತಾರೆ. ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ  ಕೋಚ್‌ ಶಬ್ಬೀರ್‌ ಅವರು ಈ ಸಾಧಕರಿಗೆ ತರಬೇತಿ ನೀಡಿರುತ್ತಾರೆ. ಸಾಲೋಂ ವೈಯಕ್ತಿಕ ವಿಭಾಗದಲ್ಲಿ ಧಲಕ್ಷ್ಮೀ ಹಾಗೂ ಪ್ರಾಂಜಲ ಪದಕ ಗೆಲ್ಲುವಲ್ಲಿ ವಿಫಲರಾದರೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.

ಉತ್ತರಾಖಂಡ್‌ನಿಂದ sportsmail ಜೊತೆ ಮಾತನಾಡಿದ ಧನಲಕ್ಷ್ಮೀ, “ನಮಗೆ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕಿದೆ. ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ಕೋಚ್‌ ಶಬ್ಬೀರ್‌ ಸರ್‌ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿದುದರ ಪರಿಣಾಮ ಈ ಯಶಸ್ಸು ಸಾಧಿಸಲು ಸಾಧ್ಯವಾಯಿತು. ವೈಯಕ್ತಿಕ ವಿಭಾಗದಲ್ಲಿ ಪದಕ ತಪ್ಪಿರುವುದು ನೋವನ್ನುಂಟು ಮಾಡಿದೆ. ಮುಂದಿನ ಸ್ಪರ್ಧೆಗಳಲ್ಲಿ ಯಶಸ್ಸು ಕಾಣುವತ್ತ ಪ್ರಯತ್ನ ಮುಂದುವರಿಯುವುದು. ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಇದೆ,” ಎಂದು ಹೇಳಿದರು. ರಿವರ್‌‌ ರಾಫ್ಟಿಂಗ್‌ನಲ್ಲಿ ಉತ್ತರಾಖಂಡ, ಮಧ್ಯಪ್ರದೇಶ, ಮಿಜೋರಾಂ ಹಾಗೂ ಸರ್ವಿಸಸ್‌ ತಂಡಗಳು ಬಲಿಷ್ಠವಾಗಿರುತ್ತವೆ. ಏಕೆಂದರೆ ಅಲ್ಲಿಯ ನದಿಗಳ ಅರಿವು ಸ್ಪರ್ಧಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ ನಮ್ಮ ರಾಜ್ಯದ ಯುವತಿಯರು ದಿಟ್ಟ ಹೋರಾಟ ನೀಡಿ ಚಿನ್ನ ಗೆದ್ದಿರುವುದು ಹೆಮ್ಮೆಯ ಸಂಗತಿ.

ಬೆಂಗಳೂರಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಾಂಜಲ ಮಾತನಾಡಿ, “ಕಳೆದ ಒಂದು ವರ್ಷದಿಂದ ನಿರಂತರ ಅಭ್ಯಾಸ ನಡೆಸುತ್ತಿರುವುಕ್ಕೆ ಫಲ ಸಿಕ್ಕಿದೆ. ನಮ್ಮ ತರಬೇತುದಾರರು ಉತ್ತಮ ರೀತಿಯಲ್ಲಿ ನಮ್ಮನ್ನು ಸಜ್ಜುಗೊಳಸಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ ಪದಕ ತಪ್ಪಿದ ಬಗ್ಗೆ ನೋವಿರುವುದು ಸಹಜ. ಆದರೆ ಆ ನೋವನ್ನು ಇಲ್ಲಿಯೇ ಬಿಟ್ಟು ಮುಂದಿನ ಸವಾಲುಗಳಿಗೆ ಸಜ್ಜಾಗುತ್ತೇವೆ. ತಪ್ಪಿನಿಂದ ಪಾಠ ಕಲಿತು, ಆ ತಪ್ಪುಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದರು.

ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ವಾಣಿವಿಲಾಸ ಸಾಗರದಲ್ಲಿ ಕೋಚ್‌ ಹಾಗೂ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಶಬ್ಬೀರ್‌, sportsmail ಜೊತೆ ಮಾತನಾಡಿ, “ನಮ್ಮ ತಂಡದಲ್ಲಿ ಹಳ್ಳಿಯ ಹಾಗೂ ಬಡವರ ಮನೆ ಮಕ್ಕಳೇ ಹೆಚ್ಚು. ಇವರಿಗೆ ಕಳೆದ ಆರು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. ಇವರೆಲ್ಲರೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದಾರೆ. ರಾಜ್ಯದ ವಾಣಿ ವಿಲಾಸ, ದಾಂಡೇಲಿ ಹಾಗೂ ಬರಪೊಳೆಯಲ್ಲಿ ತರಬೇತಿ ನೀಡಲಾಗಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯು ಎಲ್ಲ ರೀತಿಯ ಪ್ರೋತ್ಸಾಃವನ್ನು ನೀಡಿದೆ, ಇನ್ನುಳಿದ ಸ್ಪರ್ಧೆಗಳಲ್ಲೂ ಪದಕ ಗೆಲ್ಲುತ್ತಾರೆಂಬ ಆತ್ಮವಿಶ್ವಾಸವಿದೆ.

ದಾದಪೀರ್‌ಗೆ ಕಂಚು: ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ವಿದ್ಯಾರ್ಥಿ ದಾದಾಪೀರ್‌ ಪುರುಷರ ಕೆನಾಯಿಂಗ್‌ & ಕಯಾಕಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಪದಕ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ: ಈಜಿನ ಸ್ಪರ್ಧೆ ನಡೆಯುತ್ತಿರುವವರೆಗೂ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಕರ್ನಾಟಕ 11 ನೇ ದಿನದಂತ್ಯಕ್ಕೆ ಎರಡನೇ ಸ್ಥಾನ ತಲುಪಿದೆ. ಸರ್ವಿಸಸ್‌ ಅಗ್ರ ಸ್ಥಾನದಲ್ಲಿದೆ. 30 ಚಿನ್ನ, 12 ಬೆಳ್ಳಿ ಹಾಗೂ 16 ಕಂಚಿನ ಪದಕಗಳನ್ನು ಗೆದ್ದಿರುವ ಕರ್ನಾಟಕ ಒಟ್ಟು 58 ಪದಕಗಳನೊಂದಿಗೆ ಎರಡನೇ ಸ್ಥಾನದಲ್ಲಿದೆ.

ನಮ್ಮ ಕ್ರೀಡಾ ಚಾನೆಲ್‌ಗೆ subscribe ಆಗಿ ಪ್ರೋತ್ಸಾಹಿಸಿ

ಹಾಕಿಯಲ್ಲಿ ಪುರುಷರ ತಂಡ ಸೆಮಿಫೈನಲ್‌ಗೆ: ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷರ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾ ಕೂಟದ ಸೆಮಿಫೈನಲ್‌ ಪ್ರವೇಶಿಸಿದೆ. ಪಂಜಾಬ್‌ (3-0), ಒಡಿಶಾ((2-1) ಹಾಗೂ ಮಣಿಪುರ  (4-1) ವಿರುದ್ಧ ಜಯ ಗಳಿಸಿದ ಕರ್ನಾಟಕ ಅಂತಿಮ ನಾಲ್ಕರ ಹಂತ ತಲುಪಿದೆ.


administrator