ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ
ರೋಶನ್‌ಬಾದ್: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka men’s Hockey Team won the Gold medal at 38th National Games Uttarakhand
ಒಲಿಂಪಿಯನ್ ಎಸ್ ವಿ ಸುನಿಲ್ ಅವರ ನಾಯಕತ್ವದಲ್ಲಿ ಬಲಿಷ್ಠ ತಂಡಗಳ ವಿರುದ್ಧ ಉತ್ತಮ ಪ್ರದರ್ಶಶನ ತೋರಿದ ಕರ್ನಾಟಕ ಫೈನಲ್ ಪಂದ್ಯದ ಆರಂಭದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಉತ್ತರ ಪ್ರದೇಶ ಫರಾಜ್ ಖಾನ್ ಮೊದಲ ನಿಮಿಷದಲ್ಲಿಯೇ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿ ಗೋಲಿನಿಂದ ಮುನ್ನಡೆ ಕಂಡಿತ್ತು. ಆದರೆ 8ನೇ ನಿಮಿಷದಲ್ಲಿ ಶಮಂತ್ ಸಿ ಎಸ್ ಗಳಿಸಿದ ಗೋಲಿನಿಂದ ಕರ್ನಾಟಕ ಸಮಬಲ ಸಾಧಿಸಿತು.
ಕರ್ನಾಟಕ 18ನೇ ನಿಮಿಷಲ್ಲಿ ಮತ್ತೆ ಮುನ್ನಡೆ ಕಂಡಿತು. ಭರತ್ ಮಹಾಲಿಂಗಪ್ಪ ಕುರ್ತಕೋಟಿ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲು ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟಿತು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕರ್ನಾಟಕದ ಪರ ಆಭರಣ್ ಸುದೇವ್ 39ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲು ಕರ್ನಾಟಕ ಪಾಲಿಗೆ ವಿಜಯದ ಗೋಲಾಯಿತು. 45ನೇ ನಿಮಿಷದಲ್ಲಿ ಉತ್ತರ ಪ್ರದೇಶದ ಶರದ್ ನಂದ ತಿವಾರಿ ಪೆನಾಲ್ಟಿ ಕಾರ್ನರ್ ಮೂಲಕ ತಂಡದ ಪರ ಎರಡನೇ ಗೋಲು ಗಳಿಸಿದರೂ ಕರ್ನಾಟಕದ ಚಿನ್ನದ ಪದಕಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.
2022ರಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಚಿನ್ನ ಗೆದ್ದಿತ್ತು. 2023 ರಲ್ಲೂ ಫೈನಲ್ ತಲುಪಿದ್ದ ಕರ್ನಾಟಕ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿತ್ತು. ಆದರೆ ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.