Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹ್ಯಾಟ್ರಿಕ್‌ ಚಿನ್ನದೊಂದಿಗೆ ರಾಜ್ಯಕ್ಕೆ ಕೀರ್ತಿ ತಂದ ಕೀರ್ತಿ ಚಿಕ್ಕರಂಗಸ್ವಾಮಿ

ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕರಂಗಸ್ವಾಮಿ ಅವರ ಮಗಳು ಕೀರ್ತಿ ಚಿಕ್ಕರಂಗಸ್ವಾಮಿ ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದು ಈಗ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. Karnataka’s Keerthi Chikka Rangaswamy create history by winning three gold medals at 38th National Games Uttarakhand.

ಕೀರ್ತಿ ಮಹಿಳೆಯರ ಸ್ಕ್ರ್ಯಾಚ್‌ ರೇಸ್‌, ಕೇರಿನ್‌ ಹಾಗೂ ಒಮ್ನಿಯಮ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದರು. ಕರ್ನಾಟಕದಲ್ಲಿ ಯಾರೂ ಈ ಸಾಧನೆಯನ್ನು ಯಾರೂ ಮಾಡಿರಲಿಲ್ಲ. ತನ್ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅಸಾಧ್ಯವಾದ ನೋವನ್ನೇ ಚಲವಾಗಿಸಿಕೊಂಡ ಚಿಕ್ಕರಂಗಸ್ವಾಮಿ ಅವರು ತನ್ನ ಮೂವರೂ ಮಕ್ಕಳನ್ನು ಸೈಕ್ಲಿಷ್ಟ್‌ಗಳನ್ನಾಗಿ ರೂಪಿಸಿರುವುದು ಕ್ರೀಡಾ ಜಗತ್ತಿಗೇ ಮಾದರಿ. ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ [Seshadripuram College] ಬಿಕಾಂ ಪದವಿ ಮುಗಿಸಿರುವ ಕೀರ್ತಿ 12 ವರ್ಷ ವಯಸ್ಸಿನ ವರೆಗೂ ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಚಿಕ್ಕರಂಗಸ್ವಾಮಿ ಅವರಿಗೆ ಮಗಳ ಸಾಧನೆಯ ಬಗ್ಗೆ ತೃಪ್ತಿ ಇರಲಿಲ್ಲ. ಈ ಕಾರಣಕ್ಕಾಗಿ ಸೈಕಲ್‌‌ ತಂದುಕೊಟ್ಟರು. ಮಾತ್ರವಲ್ಲ ತಾನು ತರಬೇತಿ ನೀಡುತ್ತಿರುವ ಹುಡುಗರೊಂದಿಗೆ ಮಗಳನ್ನೂ ಕರೆದೊಯ್ದು ಆಕೆಯನ್ನು ಸೈಕ್ಲಿಂಗ್‌ ಚಾಂಪಿಯನ್ ಆಗಿ ಬದಲಾಯಿಸಿದರು.

ಚಿಕ್ಕರಂಗಸ್ವಾಮಿ ಅವರು ಕರ್ನಾಟಕ ಕಂಡ ಉತ್ತಮ ವೇಟ್‌ಲಿಫ್ಟರ್. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ‌ 150ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿದಾಗ ದೈಹಿಕ ಶಿಕ್ಷಣ ತರಬೇತಿ ಪಡೆದು ಅದರಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಸುತ್ತಾರೆ. ನಂತರ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಪುರಂ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ಶೂಟಿಂಗ್‌ನಲ್ಲೂ ಆಸಕ್ತಿ ಹೊಂದಿರುವ ಚಿಕ್ಕರಂಗಸ್ವಾಮಿ ಅವರು ಪಿಸ್ತೂಲ್‌ ಶೂಟಿಂಗ್‌ನಲ್ಲೂ ತರಬೇತಿ ಪಡೆದು ಕಾಲೇಜಿನಲ್ಲಿ ಶೂಟಿಂಗ್‌ ರೇಂಜನ್ನು ಸ್ಥಾಪಿಸಿದ್ದಾರೆ. ಕರ್ನಾಟಕದಲ್ಲಿ ಶೂಟಿಂಗ್‌ ರೇಂಜ್‌ ಹೊಂದಿರುವ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಶೇಷಾದ್ರಿಪುರಂ ಕಾಲೇಜು ಪಾತ್ರವಾಗಿದೆ. ಚಿಕ್ಕರಂಗಸ್ವಾಮಿ ಅವರ ಅಣ್ಣ ಶ್ರೀನಿವಾಸ ಸ್ವಾಮಿ ಅಂತಾರಾಷ್ಟ್ರೀಯ ಬಾಡಿಬಿಲ್ಡರ್‌. ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಅವರು ಈಗ ಬೆಂಗಳೂರಿನ ಮೈಸೂರು ರೋಡ್‌ನಲ್ಲಿ ತಮ್ಮದೇ ಆದ ಜಿಮ್‌ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ ಕೀರ್ತಿಗೆ 12 ನೇ ವಯಸ್ಸಿನಲ್ಲಿ ಸೈಕಲ್‌ ಕೊಡಿಸಿದ ಚಿಕ್ಕರಂಗಸ್ವಾಮಿ ಅವರು ಸುಮ್ಮನಿರಲಿಲ್ಲ. ಹುಡುಗರೊಂದಿಗೆ ಸೈಕಲ್‌ ಯಾನ ಮಾಡುವಾಗ ಮಗಳನ್ನೂ ಕರೆದೊಯ್ಯುತ್ತಿದ್ದರು. ಚಿಕ್ಕವಳಾಗಿದ್ದರೂ ಕೀರ್ತಿ 100 ಕಿಮೀ ದೂರವನ್ನು ನಿರಾಯಾಸವಾಗಿ ಪೆಡಲ್‌ ಮಾಡುತ್ತಿದ್ದಳು. ನಂತರ ಶ್ರವಣಬೆಳಗೊಳ, ಧರ್ಮಸ್ಥಳ, ನಂದಿಬೆಟ್ಟ, ಮೈಸೂರು ಮಾರ್ಗಗಳಲ್ಲಿ ಶನಿವಾರ ಮತ್ತು ಭಾನುವಾರ ಸೈಕಲ್‌ ತುಳಿದು ಯಾನ ಆರಂಭಿಸಿದರು. ಇದು ಕೀರ್ತಿಯಲ್ಲಿ ಹೊಸ ಉತ್ಸಾಹವನ್ನು ತಂದಿತು. ನಂತರ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಅಲ್ಲಿ ಪದಕಗಳನ್ನು ಗೆದ್ದ ನಂತರ 2022ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕೀರ್ತಿ ಬೆಳ್ಳಿ ಪದಕ ಗೆದ್ದರು. ನಂತರ ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.

ಈಗ ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೀರ್ತಿ 3 ಚಿನ್ನದ ಪದಕಳನ್ನು ಗೆದ್ದು ಹ್ಯಾಟ್ರಿಕ್‌ ಗೋಲ್ಡನ್‌ ದಾಖಲೆ ಬರೆದಿದ್ದಾರೆ. ಈಗ ದೆಹಲಿಯಲ್ಲಿ ತರಬೇತಿ ನಡೆಸುತ್ತಿರುವ ಕೀರ್ತಿ ಫೆಬ್ರವರಿ 15 ರಿಂದ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಚಾಂಪಿಯನ್ನರ ಮನೆ: ಚಿಕ್ಕರಂಗಸ್ವಾಮಿ ಅವರು ವೇಟ್‌ಲಿಫ್ಟಿಂಗ್‌ ಹಾಗೂ ಶೂಟಿಂಗ್‌ನಲ್ಲಿ ಚಾಂಪಿಯನ್‌. ಅವರ ಅಣ್ಣ ಶ್ರೀನಿವಾಸ್‌ ಅಂತಾರಾಷ್ಟ್ರೀಯ ಬಾಡಿಬಿಲ್ಡರ್‌, ಮಗಳು ಕೀರ್ತಿ ರಾಷ್ಟ್ರೀಯ ಚಾಂಪಿಯನ್‌, ಚಿಕ್ಕ ಮಕ್ಕಳಾದ ರಿತ್ವಿಕ್‌ ಗೌಡ ಹಾಗೂ ರುಚಿತ ಗೌಡ ಅವರೂ ಸೈಕ್ಲಿಂಗ್‌ಗೆ ಸಜ್ಜಾಗುತ್ತಿದ್ದಾರೆ.

SPORTSMAIL ಜೊತೆ ಮಾತನಾಡಿದ ಚಿಕ್ಕರಂಗಸ್ವಾಮಿ ಅವರು, “ನನಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಾಗಲಿಲ್ಲ, ಆದರೆ ನನ್ನ ಮಗಳು ಆ ಸಾಧನೆಯನ್ನು ಮಾಡುತ್ತಿದ್ದಾಳೆ. ನನಗೆ ಕ್ರೀಡೆ ಬದುಕು ನೀಡಿದೆ. ನನ್ನ ಮಕ್ಕಳು ಕೂಡ ಕ್ರೀಡೆಯಲ್ಲೇ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ. ಶೇಷಾದ್ರಿಪುರಂ ಕಾಲೇಜು ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಇಲ್ಲಿಯ ಹಳೆ ವಿದ್ಯಾರ್ಥಿಗಳ ಸಂಘಟನೆಗೂ ಎಲ್ಲ ರೀತಿಯಲ್ಲಿ ನೆರವು ನೀಡುತ್ತಿದೆ. ಇದರಿಂದಾಗಿ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾದ್ಯವಾಯಿತು. ಅವರೆಲ್ಲರಿಗೂ ನಾನು ಚಿರ ಋಣಿಯಾಗಿದ್ದೇನೆ. ವಿಶೇಷವಾಗಿ ಪ್ರಾಂಶುಪಾಲರಾದ ಡಾ. ಸತೀಶ್‌ ಎನ್‌. ಮತ್ತು ಪ್ರೊ. ವಿದ್ಯಾ ಶಿವಣ್ಣನವರ್‌ ಅವರ ಪ್ರೋತ್ಸಾಹ ಗಮನಾರ್ಹ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕೀರ್ತಿ ದೇಶಕ್ಕೆ ಕೀರ್ತಿ ತರುತ್ತಾಳೆಂಬ ನಂಬಿಕೆ ಇದೆ. ಸ್ಪರ್ಧೆ ಕಠಿಣವಾಗಿರುತ್ತದೆ. ನೋಡಬೇಕು,” ಎಂದಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.