Sunday, September 8, 2024

ಬಹುಗುಣ ಸ್ಥಾಪಿಸಿದ ಗುಣಮಟ್ಟದ ಕಾಶಿಶ್‌ ಫ್ಯಾಂಟಸಿ ಸ್ಪೋರ್ಟ್ಸ್‌ ಕ್ಲಬ್‌

ತಮ್ಮ ಮಕ್ಕಳು ಉತ್ತಮ (Agriculturist Built a cricket Academy for Village) ಕ್ರೀಡಾ ಪಟುಗಳಾಗಬೇಕೆಂದು ಉತ್ತಮ ಕ್ಲಬ್‌ಗಳಿಗೆ ಸೇರಿಸಿ, ಕೇವಲ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವವರೇ ಹೆಚ್ಚು. ಆದರೆ ತಮ್ಮ ಮಕ್ಕಳೊಂದಿಗೆ ಊರಿನ ಇತರ ಮಕ್ಕಳೂ ಕ್ರೀಡೆಯಲ್ಲಿ  ತೊಡಗಿಸಿಕೊಂಡು ಅವರು ಕೂಡ ಸಾಧನೆಯ ಮೆಟ್ಟಿಲೇರಿ ತನ್ನೂರಿಗೆ ಕೀರ್ತಿ ತರಬೇಕೆಂದು ಬಯಸುವವರು ವಿರಳ. ಅಂಥ ವಿರಳ ಪಂಕ್ತಿಯಲ್ಲಿ ಸೇರುತ್ತಾರೆ ಬೆಂಗಳೂರಿನ ಹೊರವಲಯದಲ್ಲಿರುವ ಹೊರಮಾವುವಿನ ಕಲ್ಕೆರೆಯ ರೈತ ಬಹುಗುಣ.

ಕೃಷಿಕ ಬಹುಗುಣ ಅವರು 2014ರಲ್ಲಿ ಸ್ಥಾಪಿಸಿದ ಕಾಶಿಶ್‌ ಫ್ಯಾಂಟಸಿ ಸ್ಪೋರ್ಟ್ಸ್‌ ಕ್ಲಬ್‌ (Kashish Fantasy Sports Club) ಇಂದು ರಾಜ್ಯದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಅಕಾಡೆಮಿಯಾಗಿ ಬೆಳೆದು ನಿಂತಿದೆ. ಮಾತ್ರವಲ್ಲ ಇಲ್ಲಿಗೆ ಸಮೀಪದ ಯರಪ್ಪನಹಳ್ಳಿಯಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಎರಡು ಕ್ರೀಡಾಂಗಣ ಸಜ್ಜಾಗಿದೆ. ಈಗ ಇಲ್ಲಿ ಕರ್ನಾಟಕದವರು ಮಾತ್ರವಲ್ಲ ದೇಶದ ಇತರ ರಾಜ್ಯಗಳಿಂದ ಬಂದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.

“ಕ್ರಿಕೆಟ್‌ಗೆ ಬೆಂಗಳೂರು ಹೊರತಾಗಿ ಬೇರೆಡೆ ಅಷ್ಟೇನೂ ಪ್ರೊತ್ಸಾಹ ಇರಲಿಲ್ಲ. ಹಳ್ಳಿಯಲ್ಲಿ ಶಾಲೆಗೆ ಹೋಗಿ ಬರುವುದೇ ದೊಡ್ಡ ಸಾಧನೆಯಾಗಿತ್ತು. ನನಗೆ ಉತ್ತಮ ರೀತಿಯಲ್ಲಿ ಕ್ರಿಕೆಟ್‌ ಅಥವಾ ಇತರ ಕ್ರೀಡೆಗಳನ್ನು ಆಡಬೇಕೆಂಬ ಹಂಬಲವಿದ್ದಿತ್ತು. ಆದರೆ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ. ತೋಟದಲ್ಲಿ ಕೆಲಸ ಮಾಡುವುದೇ ನಮ್ಮ ದೈನಂದಿನ ಪ್ರಮುಖ ಚಟುವಟಿಕೆಯಾಗಿತ್ತು. ಏಳನೇ ತರಗತಿಯವರೆಗೂ ಸರಕಾರಿ ಕನ್ನಡ ಮಾಧ್ಯಮ ಶಾಲೆ. ನಮಗೆ ಮನೆಯಲ್ಲಿ ಕೃಷಿ ಸಂಬಂಧಿಸಿದ ಕೆಲಸ ಸಾಕಷ್ಟಿರುತ್ತಿತ್ತು. ಅದೇ ನಮ್ಮ ದೈಹಿಕ ಚಟುವಟಿಕೆಗೆ ಪೂರಕವಾಗಿತ್ತು. ಶನಿವಾರ ಮತ್ತು ಭಾನುವಾರ ಪೂರ್ತಿ ಗದ್ದೆ, ತೋಟಗಳಲ್ಲೇ ಕೆಲಸ. ನಾವು ಕೆಲಸ ಮಾಡುವುದರಿಂದ ಒಂದು ಕೂಲಿ ಆಳು ಕಡಿಮೆಯಾಗುತ್ತಿತ್ತು. ಆದ್ದರಿಂದ ಆಡಲು ನಮಗೆ ಸಮಯವೇ ಸಿಗುತ್ತಿರಲಿಲ್ಲ. ಈ ಸ್ಥಿತಿ ನಮ್ಮೂರಿನ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಿದೆ,” ಎನ್ನುತ್ತಾರೆ ಬಹುಗುಣ.

ಬಹುಗುಣ ಅವರ ತಂದೆ ಪಿಳ್ಳಪ್ಪ ವಿಧಾನ ಸೌಧದಲ್ಲಿ ಅಧಿಕಾರಿಯಾಗಿದ್ದವರು, ಅವರದ್ದು ದೊಡ್ಡ ಕುಟುಂಬ, ಆಗಿನ ಕಾಲಕ್ಕೇ ಪದವಿ ಶಿಕ್ಷಣ ಪಡೆದವರು. ಊರಿನ ಯಾವುದೇ ತಕರಾರು ಇರುತ್ತಿದ್ದರೂ ಈ ಗೌಡರ ಮನೆಯವರ ಸಮ್ಮುಖದಲ್ಲಿ ತೀರ್ಮಾನ ಆಗುತ್ತಿತ್ತು. ಪೊಲೀಸರು ಊರಿಗೆ ಬರುತವಂತಿರಲಿಲ್ಲ, ಕೋರ್ಟ್‌ ಮೆಟ್ಟಿಲೇರುವಂತಿರಲಿಲ್ಲ.

“ಊರಿನಲ್ಲಿ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಪ್ರೋತ್ಸಾಹ ಇಲ್ಲದಿದ್ದರೂ ನಮ್ಮ ತಂದೆ ಆಗಿನ ಕಾಲದಲ್ಲಿ ಬೆಂಗಳೂರಿನ ಸೇಂಟ್‌ ಜೊಸೆಫ್‌ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ನಮ್ಮ ತಂದೆಯನ್ನು ಇಂಗ್ಲಿಷ್‌ ಮ್ಯಾನ್‌ ಎಂದೇ ಕರೆಯುತ್ತಿದ್ದರು. ಮಾಜಿ ಸಚಿವ ಎಂ.ಪಿ. ಪ್ರಕಾಶ್‌ ನಮ್ಮ ತಂದೆಯ ಕ್ಲಾಸ್‌ಮೇಟ್‌. ಅಶ್ವಥ್‌ ನಾರಾಯಣ ರೆಡ್ಡಿ ಎಂಬುವರು ಗೃಹ ಸಚಿವರಾಗಿದ್ದರು ಅವರು ಕೂಡ ಕ್ಲಾಸ್‌ ಮೇಟ್‌. ನಂತರ ವಿಧಾನ ಸೌಧದಲ್ಲಿ ಅಧಿಕಾರಿಯಾಗಿದ್ದರು. ನೀವು ಎಷ್ಟೇ ಓದಿ, ಆದರೆ ಸರಕಾರಿ ಉದ್ಯೋಗಕ್ಕೆ ಹೋಗುವಂತಿಲ್ಲ ಎಂಬುದು ನಮ್ಮ ತಂದೆಯ ಆಶಯ ಮತ್ತು ಆದೇಶವಾಗಿತ್ತು. ವಿಧಾನ ಸೌಧದಲ್ಲಿ ಹಲವಾರು ಜನರಿಗೆ ನಮ್ಮ ತಂದೆ ಕೆಲಸ ಕೊಡಿಸಿದ್ದರು. ಆದರೆ ನಮಗೆ ಮಾತ್ರ ಸರಕಾರಿ ಕೆಲಸಕ್ಕೆ ಹೋಗಬಾರದು ಎಂದು ಹೇಳಿದ್ದರು. ಅವರಿಗೆ ಏನನಿಸಿತ್ತೋ ಗೊತ್ತಿಲ್ಲ. ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ನಾನು ಬಿಎಸ್‌ಸಿ ಪದವೀಧರ, ನನ್ನ ಸಹೋದರ ವೇಣುಗೋಪಾಲ್‌. ಬಿಎಸ್‌ಸಿ, ಎಂಎ. ಚಿನ್ನದ ಪದಕ ವಿಜೇತ. ರೇವಣ್ಣ ಬಿಎಸ್‌ಸಿ,ಎಂಎ ಎಲ್‌ಎಲ್‌ಬಿ. ಯಾರೂ ಸರಕಾರಿ ಉದ್ಯೋಗಕ್ಕೆ ಹೋಗಲಿಲ್ಲ. ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇವೆ,” ಎನ್ನುತ್ತಾರೆ ಬಹುಗುಣ.

ಕ್ರಿಕೆಟ್‌ ಬಗ್ಗೆ ಮಕ್ಕಳ ಆಸಕ್ತಿ:

“ಮಕ್ಕಳಾದ ಕಾಶಿಶ್‌ ಮತ್ತು ವಿಸ್ಮಯ್‌ ಕ್ರಿಕೆಟ್‌ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಇದರಿಂದಾಗಿ ಅಕಾಡೆಮಿ ಯಾಕೆ ಸ್ಥಾಪಿಸಬಾರದು ಅನಿಸಿತು. ನನ್ನದೇ ಆದ ಜಾಗ ಇದ್ದಿತ್ತು. ಇದರಿಂದ ಊರಿನ ಇತರ ಮಕ್ಕಳಿಗೂ ನೆರವಾಗುತ್ತದೆ ಎಂಬುದನ್ನು ಗಮನಿಸಿ 2014ರಲ್ಲಿ ಮಗನ ಹೆಸರಿನಲ್ಲಿ ಸುಸಜ್ಜಿತ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿದೆ,”

ಆರಂಭದಲ್ಲಿ 9 ಮಕ್ಕಳಿದ್ದ ಅಕಾಡೆಮಿಯಲ್ಲಿ ಎರಡನೇ ವರ್ಷದಲ್ಲಿ 35 ಮಕ್ಕಳು ಸೇರ್ಪಡೆಯಾದರು. ಮೂರನೇ ವರ್ಷದಲ್ಲಿ ಯುವ ಕ್ರಿಕೆಟಿಗರ ಸಂಖ್ಯೆ 66ಕ್ಕೆ ಏರಿತು. ಕೊರೋನಾಕ್ಕಿಂತ ಮೊದಲು 2019ರಲ್ಲಿ 360 ಮಕ್ಕಳು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈಗ ಅದೇ ಪ್ರಮಾಣದಲ್ಲಿ ಮತ್ತೆ ಮಕ್ಕಳು ಕ್ರಿಕೆಟ್‌ ಅಂಗಣಕ್ಕೆ ಆಗಮಿಸಿದ್ದಾರೆ.

ತರಬೇತಿ ಪಡೆಯುವಾಗ ಬಿದ್ದು ಗಾಯವಾಗಬಾರದು ಎಂದು ಆಸ್ಟ್ರೋ ಟರ್ಫ್‌ ಅಳವಡಿಕೆ ಮಾಡಲಾಯಿತು, ಆರಂಭದಿಂದ ಇಂದಿನ ವರೆಗೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಈಜು ಕೊಳ, ಒಳಾಂಗಣ ಕ್ರೀಡಾಂಗಣ, ವಸತಿ ಸೌಲಭ್ಯ, ಹವಾನಿಯಂತ್ರಿತ ಕೊಠಡಿಗಳು ಇಲ್ಲಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಇಲ್ಲಿ ತರಬೇತಿ ಪಡೆದ ಹವಲಾರು ಕ್ರಿಕೆಟಿಗರು ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಕೆಎಸ್‌ಸಿಎ ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೇರೆ ರಾಜ್ಯಗಳ ಕ್ರಿಕೆಟ್‌ ಟೂರ್ನಿಗಳಲ್ಲೂ ಆಡುತ್ತಿದ್ದಾರೆ. ಉದಯೋನ್ಮುಖ ಆಟಗಾರ ತೇಜಸ್‌ ಕೆ.ಎ. ಇಲ್ಲಿ ತರಬೇತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ.

ಬೇರೆ ಬೇರೆ ರಾಜ್ಯಗಳಿಂದ ಕ್ರಿಕೆಟಿಗರು:

ಕಾಶಿಶ್‌ ಕ್ರಿಕೆಟ್‌ ಅಕಾಡೆಮಿಯ ಜನಪ್ರಿಯತೆ ಈಗ ದೇಶಾದ್ಯಂತ ಹಬ್ಬಿದೆ. ಪರಿಣಾಮ ಬೇರೆ ಬೇರೆ ರಾಜ್ಯಗಳಿಂದ ಯುವ ಕ್ರಿಕೆಟಿಗರು ಇಲ್ಲಿ ತರಬೇತಿಗಾಗಿ ಬರುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ್‌, ದೆಹಲಿ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಇಲ್ಲಿಗೆ ತರಬೇತಿಗಾಗಿ ಬರುತ್ತಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹುಬ್ಬಳ್ಳಿ, ಕಾರವಾರ, ಉಡುಪಿ, ಕೋಲಾರ, ಕೆಜಿಎಫ್‌, ತುಮಕೂರು, ಬಳ್ಳಾರಿ, ಮಂಗಳೂರಿನಿಂದ ಯುವ ಕ್ರಿಕೆಟಗಿಗರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ತರಬೇತಿ ನೀಡುತ್ತಿರುವವರಲ್ಲಿಯೂ ಮಂಗಳೂರು-ಉಡುಪಿಯವರೇ ಹೆಚ್ಚು.

ಬಹುಗುಣ ಅವರಲ್ಲಿ ಸಾಕಷ್ಟು ಭೂಮಿ ಇದ್ದಿತ್ತು. ಅವುಗಳನ್ನು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಅಳವಡಿಸಿಕೊಂಡಿರುತ್ತಿದ್ದರೆ ಇನ್ನೂ ಹೆಚ್ಚಿನ ಆದಾಯ

ಬಂದು ಐಶಾರಾಮದ ಜೀವನ ನಡೆಸಬಹುದಾಗಿತ್ತು, ಆದರೆ ಅವರಲ್ಲಿರುವ ಕ್ರೀಡಾಪ್ರೇಮ ಹಣಗಳಿಕೆಯ ಕಡೆಗೆ ಮನ ಹರಿಯದಂತೆ ಮಾಡಿತು. “ಅಕಾಡೆಮಿ ಮಾಡಿ ನೂರಾರು ಮಕ್ಕಳಿಗೆ ಕ್ರಿಕೆಟ್‌ ಆಟವನ್ನು ಕಲಿಸುತ್ತಿರುವ ಬಗ್ಗೆ ತೃಪ್ತಿ ಇದೆ. ಇದಕ್ಕಾಗಿ ಎಲ್ಲ ವ್ಯವಹಾರವನ್ನು ತೊರೆದು ಕೇವಲ ಅಕಾಡೆಮಿಯ ಅಭಿವೃದ್ಧಿಯ ಬಗ್ಗೆ ಶ್ರಮಿಸುತ್ತಿದ್ದೇನೆ. ಇಲ್ಲಿಯ ಯಶಸ್ಸು ಖುಷಿ ಕೊಟ್ಟಿದೆ,” ಎನ್ನುತ್ತಾರೆ ಬಹುಗುಣ.

ಎರಡು ಕ್ರೀಡಾಂಗಣ ಸ್ಥಾಪನೆ:

ಒಂದು ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಹುಗುಣ ಅವರು ತಮ್ಮ ಅಣ್ಣನನ್ನೇ  ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅವರು “ಈ ಕ್ರೀಡಾಂಗಣದ ಬಾಡಿಗೆ ಎಷ್ಟು?” ಎಂದು ಕೇಳಿದರು. ಆಗ ಬಹುಗುಣ ಅವರು  ಎರಡೂವರೆ ಲಕ್ಷ ಎಂದು ಉತ್ತರಿಸಿದರು. “ನಿನಗೆ ನಿನ್ನದೇ ಆದ ಕ್ರೀಡಾಂಗಣ ಯಾಕೆ ಮಾಡಬಾರದು? ಎಂದು ಅಣ್ಣ ಕೇಳಿದ ಪ್ರಶ್ನೆ ಬಹುಗುಣ ಅವರನ್ನು ಯೋಚಿಸುವಂತೆ ಮಾಡಿತು.  ಕೇವಲ ಮೂರು ತಿಂಗಳ ಅವಧಿಯಲ್ಲಿಯೇ ಅದಕ್ಕೆ ಸೂಕ್ತವಾದ ಭೂಮಿಯನ್ನು ಖರೀದಿಸಿ ಎರಡು ಅಂಗಣಗಳನ್ನು ನಿರ್ಮಿಸಿದರು. ಅದೇ ಕಾಶಿಶ್‌-ವಿಸ್ಮಯ್‌ ಗ್ರೀನ್‌ ಪಾರ್ಕ್‌ ಕ್ರೀಡಾಂಗಣ. ಬೆಂಗಳೂರಿನಿಂದ  ಕೇವಲ 11 ಕಿಮೀ ದೂರದಲ್ಲಿರುವ ಯರಪ್ಪನಹಳ್ಳಿಯಲ್ಲಿರವ ಈ  ಈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ಅಂಡರ್‌ 19 ತಂಡ ಅಭ್ಯಾಸ ಪಂದ್ಯಗಳನ್ನು ಆಡಿದೆ. ಕೆಎಸ್‌ಸಿಎ ಲೀಗ್‌ ಪಂದ್ಯಗಳು ಮತ್ತು ಇತರ ಕ್ರಿಕೆಟ್‌ ಲೀಗ್‌ ಪಂದ್ಯಗಳೂ ನಡೆದಿವೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ತರಬೇತುದಾರರನ್ನು ಕರೆಸಿ ಮಕ್ಕಳಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ಬಹುಗುಣ ಹೇಳಿದ್ದಾರೆ,

ನಿಹಾಲ್‌ ಉಳ್ಳಾಲ್‌ ಸ್ಫೂರ್ತಿ:

ಕರ್ನಾಟಕ ರಣಜಿ ತಂಡದ ಆಟಗಾರ, ವಿಕೆಟ್‌ ಕೀಪರ್‌ ನಿಹಾಲ್‌ ಉಳ್ಳಾಲ್‌ ಇಲ್ಲಿನ ಯುವ ಕ್ರಿಕೆಟಿಗರಿಗೆ  ತರಬೇತಿ ನೀಡುತ್ತಿದ್ದಾರೆ. ನಿಹಾಲ್‌ ಅವರ ಕಾರ್ಯವೈಖರಿಗೆ ಬಹುಗುಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಿಹಾಲ್‌ ಅತ್ಯಂತ ಬದ್ಧತೆಯಿಂದ ಕೂಡಿದ ವ್ಯಕ್ತಿ, ಅವರು ಬಂದಾಗಿನಿಂದ ನಮ್ಮ ಅಕಾಡೆಮಿಯ ಮಕ್ಕಳಲ್ಲಿ ಹೊಸ ಉಲ್ಲಾಸ ಮತ್ತು ಹುಮ್ಮಸ್ಸು ತುಂಬಿದೆ,” ಎನ್ನುತ್ತಾರೆ ಬಹುಗುಣ.  ನಿಹಾಲ್‌ ಜೊತೆಯಲ್ಲಿ ಸೂರಜ್‌, ಮನೋಜ್‌ ಸೇರಿ ಒಟ್ಟು ಹತ್ತು ಮಂದಿ ಇಲ್ಲಿ ವಿವಿಧ ಹಂತದಲ್ಲಿ ತರಬೇತಿ ನೀಡುತ್ತಿದ್ದಾರೆ.

ತರಬೇತಿಗೆ ಒಳಾಂಗಣವೂ ಇದೆ;

ಅಕಾಡೆಮಿಯಲ್ಲಿ ಹೊರಾಂಗಣದಲ್ಲಿ ನೆಟ್‌ ಇರುವಂತೆ ಒಳಾಂಗಣದಲ್ಲೂ ಐದು ನೆಟ್‌ಗಳಿದೆ, ಇನ್ನೊಂದು ಒಳಾಂಗಣ ತರಬೇತಿ ಕೇಂದ್ರ ಸಜ್ಜಾಗುತ್ತಿದೆ. ಇಲ್ಲಿ ಈಜು ತರಬೇತಿಯನ್ನೂ ನೀಡಲಾಗುತ್ತಿದೆ. ಐವರು ಈಜು ತರಬೇತುದಾರರಿದ್ದಾರೆ, ರಾಜ್ಯ ಮಟ್ಟದ ಈಜಿನಲ್ಲಿ ಇಲ್ಲಿಯ ತರಬೇತುದಾರರು ಉತ್ತಮ ಸಾಧನೆ ಮಾಡಿದ್ದಾರೆ.

ಬಹುಗುಣ ಹೆಸರು ವಿಶೇಷ:

ಬಹುಗುಣ ಈ ಹೆಸರು ಕೇಳಿದರೆ ಉತ್ತರ ಭಾರತದವರೆಂಬ ನಂಬಿಕೆ ಬರುವುದು ಸಹಜ. ಆದರೆ ಬಹುಗುಣ ಅಪ್ಪಟ ಕನ್ನಡಿಗರು. ಅವರಿಗೆ ಆ ಹೆಸರಿಡಲು ಕಾರಣವೂ ಇದೆ. ಅದನ್ನು ಅವರ ಮಾತಿನಲ್ಲೇ ಕೇಳಿ, “ನಮ್ಮ ತಂದೆಯವರು ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕೇಂದ್ರದಲ್ಲಿ ಎಚ್‌.ಎನ್‌ .ಬಹುಗುಣ ಎಂಬ ಸಚಿವರಿದ್ದರು. ನಮ್ಮ ತಂದೆಗೆ ಆ ಹೆಸರು ಬಹಳ ಇಷ್ಟವಾಗಿತ್ತು. ಇದರಿಂದಾಗಿ ನನಗೆ ಬಹುಗುಣ ಎಂದು ಹೆಸರಿಟ್ಟರು. ಅಕಾಡೆಮಿಯ ಪ್ರಮುಖ ದ್ವಾರವನ್ನು ಹಳದಿ ಮತ್ತು ಕೆಂಪು ಬಣ್ಣದಿಂದ ಅಲಂಕರಿಸಿರುವುದು ಇದೇ ಕಾರಣಕ್ಕೆ.. ಕಾರಣ ನನ್ನ ಹೆಸರು ನೋಡಿ ಇವರ್ಯಾರೋ ಉತ್ತರ ಭಾರತದವರು ಎಂದು ತಿಳಿಯಬಾರದು ಎಂದು,”  ಬಹುಗುಣ ಅವರ ಸಹೋದರರು ಸಮೀಪದ ಕಲ್ಕೆರೆಯಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ನಡೆಸುತ್ತಿದ್ದಾರೆ.

ಪಕ್ಕದಲ್ಲೇ ಎನ್‌ಸಿಎ ಅಕಾಡೆಮಿ:

ಕಾಶಿಶ್‌-ವಿಸ್ಮಯ್‌ ಗ್ರೀನ್‌ ಪಾರ್ಕ್‌  ಕ್ರೀಡಾಂಗಣದ ಅನತಿ ದೂರದಲ್ಲೇ ಬಾಗಲೂರು ಬಳಿ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) 60 ಎಕರೆ ಭೂಮಿ ಖರೀದಿಸಿದೆ. ಅಲ್ಲಿ ಕ್ರಿಕೆಟ್‌ ಅಭಿವೃದ್ಧಿಯಾಯಿತೆಂದರೆ ಕಶೀಶ್‌ ಕ್ರಿಕೆಟ್‌ ಅಕಾಡೆಮಿಗೆ ಇನ್ನಷ್ಟು ಬೇಡಿಕೆ ಬರುವುದು ಸಹಜ. ಇಲ್ಲಿ ಮಹಿಳಾ ಕ್ರಿಕೆಟ್‌ ತರಬೇತಿ ವಿಭಾಗವೂ ಇದೆ. ಇಲ್ಲಿ ತರಬೇತಿ ಪಡೆದ ಆರ್ಯ ಮತ್ತು ಲಾವಣ್ಯ ರಾಜ್ಯ ಮಟ್ಟದ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.

ಕಾಶಿಶ್‌ ಆಕಾಡೆಮಿ ಉತ್ತಮ ಗುಣಮಟ್ಟಕ್ಕೆ ಹೆಸರಾಗಿದೆ. ಇಲ್ಲಿ ಕ್ರಿಕೆಟ್‌ ತರಬೇತಿ ಮಾತ್ರವಲ್ಲ ಇಲ್ಲಿ ಉತ್ತಮ ಗುಣಮಟ್ಟದ ಕಿಟ್‌ ಕೂಡ ಲಭ್ಯವಿದೆ. ಕ್ಯಾಂಟಿನ್‌ ವ್ಯವಸ್ಥೆಯೂ ಇದೆ.

Related Articles