ಸ್ಪೋರ್ಟ್ಸ್ ಮೇಲ್ ವರದಿ
ಕೇರಳದಲ್ಲಿ ನೆರೆಯ ಹಾವಳಿಗೆ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಸರಕಾರಗಳು ತಮ್ಮ ನೆರವನ್ನು ಪ್ರಕಟಿಸುತ್ತಿವೆ. ದೇವರ ಸ್ವಂತ ನಾಡು ಎಂದು ಖ್ಯಾತಿ ಪಡೆದಿರುವ, ಸ್ವರ್ಗದಂತಿರುವ ಕೇರಳದ ಜನರ ಆಕ್ರಂದನ ಈಗ ದೇವರಿಗೂ ಕೇಳಿಸುತ್ತಿಲ್ಲವೇನೋ ಎಂಬಂತಾಗಿದೆ. ಕೇರಳ ಜನರ ಕಷ್ಟ ಸ್ಪೇನ್, ಇಗ್ಲೆಂಡ್ ಸೇರಿದಂತೆ ಜಗತ್ತಿನ ಮೂಲೆ ಮೂಲೆಗೂ ತಲುಪಿದೆ. ಕ್ರೀಡಾ ಜಗತ್ತು ಕೂಡ ಕೇರಳಕ್ಕಾಗಿ ಮರುಗಿದೆ.
ಪುಟ್ಬಾಲ್ ಜಗತ್ತಿನ ಅತ್ಯಂತ ಪ್ರಸಿದ್ಧ ಕ್ಲಬ್ ಎಫ್ ಸಿ ಬಾರ್ಸಿಲೋನಾ ಕೇರಳದ ಸಂತೃಸ್ತರಿಗಾಗಿ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಹೇಳಿದೆ ಅಲ್ಲದೆ ಸಂತಾಪವನ್ನೂ ವ್ಯಕ್ತಪಡಿಸಿದೆ. ಅದೇ ರೀತಿ ಚೆಲ್ಸಿ ಹಾಗೂ ಲಿವರ್ ಪೂಲ್ ಕ್ಲಬ್‌ಗಳೂ ಕೂಡ ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿವೆ.
ಕೇರಳದಲ್ಲಿ ಸಂಭವಿಸಿರುವ ನೆರೆಯಿಂದ ಸಂತೃಸ್ತರಾದ ಪ್ರತಿಯೊಬ್ಬರ ಬಗ್ಗೆಯೂ ಅನುಕಂಪ ಹಾಗೂ ಸಹಾನುಭೂತಿ ಇದೆ. ಕೇರಳದಲ್ಲಿ ನಮ್ಮ ಬೆಂಬಲಿಗರ ಕ್ಲಬ್ ಇದೆ. ಇಲ್ಲಿ ಯಾವುದೇ ರೀತಿಯ ನೆರವಿಗಾಗಿ ಸಂಪರ್ಕಿಸಬಹುದು. ಲಿವರ್‌ಪೂಲ್ ಕೇರಳ ಸಪೋರ್ಟರ್ಸ್ ಕ್ಲಬ್ ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.
ಇಂಥ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಲಾ ಲೀಗಾ ಟ್ವಿಟರ್‌ನಲ್ಲಿ ತಿಳಿಸಿದೆ. ಬಾರ್ಸಿಲೋನಾ ಕ್ಲಬ್ ಕೂಡ ಕೇರಳ ನೆರೆ ಸಂತೃಸ್ತರ ಬಗ್ಗೆ ಸಂತಾಪ ಸೂಚಿಸಿದೆ. ಅಲ್ಲದೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಹೇಳಿದೆ.
ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಭಾರತ ಫುಟ್ಬಾಲ್ ತಂಡ ಹಾಗೂ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ಕೇರಳದ ಸಂತೃಸ್ತರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೆರವಿಗಾಗಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮಿಂದಾದ ನೆರವನ್ನು ನೀಡಿ ಎಂದು ಸುನಿಲ್ ಛೆಟ್ರಿ ಬೆಂಗಳೂರಿನ ನಾಗರಿಕರು ಸೇರಿದಂತೆ ದೇಶದ ಇತರರನ್ನು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಎಫ್ ಸಿ ಪರಿಹಾರ ಸಾಮಗ್ರಿಗಳನ್ನು ನೀಡಲಿದ್ದು, ಬೆಂಗಳೂರಿನ ನಾಗರಿಕರು ತಮ್ಮಿಂದಾದ ನೆರವನ್ನು ನೀಡಿ ಎಂದು ಟ್ವಿಟರ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ವಿನಂತಿಸಿದ್ದಾರೆ. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ತಮಗೆ ಸಾಧ್ಯವಾಗುವ ಸಾಮಗ್ರಿಗಳನ್ನು ನೀಡಿ ಎಂದು ಛೆಟ್ರಿ ವಿನಂತಿಸಿದ್ದಾರೆ.