ಸೋಮಶೇಖರ್ ಪಡುಕರೆ, ಬೆಂಗಳೂರು:
ಗುಜರಾತ್‌ನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 110ಮೀ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತುಮಕೂರಿನ ಕೃಷಿಕ್ ಮಂಜುನಾಥ್ ಕೊಲಂಬಿಯಾದಲ್ಲಿ ನಡೆಯಲಿರುವ 20 ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ.
110 ಮೀ. ಹರ್ಡಲ್ಸ್‌ನಲ್ಲಿ 14.02 ಸೆಕೆಂಡುಗಳಲ್ಲಿ ಗುರಿ ತಲುಪಿದ ಕೃಷಿಕ್ ಚಿನ್ನದ ಪದಕ ಗೆದ್ದರಲ್ಲದೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದರು.
ಜಾಗತಿಕ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದ ತುಮಕೂರಿನ ಮೊದಲ ಹರ್ಡಲ್ಸ್ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೃಷಿಕ್, ನಗರದ ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಕೃಷಿಕ್ ಶನಿವಾರದಿಂದ ಹರಿಯಾಣದ ಪಂಚಕುಲದಲ್ಲಿ ಆರಂಭವಾಗಲಿರುವ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ತುಮಕೂರು ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರಾಗಿರುವ ಶಿವಪ್ರಸಾದ್ ಎಂ.ಆರ್. ಅವರು ಏಳು ವರ್ಷಗಳ ಕಾಲ ಕೃಷಿಕ್ ಅವರಿಗೆ ತರಬೇತಿ ನೀಡಿರುತ್ತಾರೆ.
ಕೃಷಿಕ್ ಅವರ ಸಾಧನೆಯ ಬಗ್ಗೆ ಮಾತನಾಡಿದ ಶಿವಪ್ರಸಾದ್, “ಕೃಷಿಕ್ ಉತ್ತಮ ಅಥ್ಲೀಟ್. ವಿಶ್ವಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದ ಸುದ್ದಿ ಕೇಳಿ ಖುಷಿಯಾಯಿತು. ಫೆಡರೇಷನ್ ಕಪ್‌ನಲ್ಲಿ ಅವರ ಸಾಧನೆ ಅದಗಭುತವಾದುದು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ವೇಳೆ ಮಳೆ ಬಂದ ಕಾರಣ ಚಿನ್ನದ ಪದಕದಿಂದ ವಂಚಿತರಾಗಿ ಕಂಚಿಗೆ ತೃಪ್ತಿ ಪಟ್ಟಿದ್ದರು. ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಹರಿಯಾಣದಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲೂ ಉತ್ತಮ ಪ್ರದರ್ಶನ ತೋರುತ್ತಾರೆಂಬ ಆತ್ಮವಿಶ್ವಾಸವಿದೆ. ಓದಿನಲ್ಲೂ ಉತ್ತಮ ಸಾಧನೆ ಮಾಡಿರುವ ಕೃಷಿಕ್ ಅಥ್ಲೆಟಿಕ್ಸ್‌ನಲ್ಲೂ ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೂ ಕೀರ್ತಿ ತಂದಿದ್ದಾರೆ,” ಎಂದರು.
ತಿರುವು ನೀಡಿದ ಸುಮಂತ್ ತರಬೇತಿ: ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ವಿವಿಧ ಹಂತದಲ್ಲಿ ವಿವಿಧ ತರಬೇತುದಾರರು ತರಬೇತಿ ನೀಡುತ್ತಾರೆ. ಕೃಷಿಕ್ ಕ್ರೀಡಾ ಬದುಕಿನಲ್ಲಿ ಇಬ್ಬರು ತರಬೇತುದಾರರು ಪರಿಣಾಮ ಬೀರಿರುತ್ತಾರೆ. ಆರಂಭದಲ್ಲಿ ಶಿವಪ್ರಸಾದ್ ಹಾಗೂ ಇತ್ತೀಚಿನ ವರ್ಷಗಳಲ್ಲಿ ಅಂದರೆ 2019ರಿಂದ ಮಾಜಿ ಅಥ್ಲೀಟ್ ಸುಮಂತ್ ಎಂ.ಕೆ. ಕೃಷಿಕ್ ಅವರ ಕ್ರೀಡಾ ಸಾಧನೆಗೆ ನೆರವಾಗಿದ್ದಾರೆ. ವಿಶೇಷವೆಂದರೆ ಸುಮಂತ್ ಅವರಿಗೂ ಶಿವಪ್ರಸಾದ್ ಗುರುವಾಗಿದ್ದರು.
ಚಿನ್ನದ ಸಾಧನೆ ಮಾಡಿದ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕೃಷಿಕ್ “ನನಗೆ ಆರಂಭದಲ್ಲಿ ತರಬೇತಿ ನೀಡಿದ್ದು ಶಿವಪ್ರಸಾದ್, ಕಳೆದ ಮೂರು ವರ್ಷಗಳಿಂದ ಸುಮಂತ್ ಅವರು ತರಬೇತಿ ನೀಡುತ್ತಿದ್ದಾರೆ. ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಯೋಗೀಶ್ ಅವರೂ ನೆರವಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ತಂದೆ ಮಂಜುನಾಥ್ ಅವರು ನನ್ನ ಕ್ರೀಡಾ ಬದುಕಿಗೆ ಹಾದಿ ತೋರಿದವರು.” ಎಂದರು.
“20ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿ ಕೊಟ್ಟಿದೆ. ಅಲ್ಲಿ ಫೈನಲ್ ತಲಪುವುದು ನನ್ನ ಗುರಿ. ನಿರಂತರ ಪರಿಶ್ರಮದಿಂದ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಗುರಿ ಹೊಂದಿರುವೆ. ಓದು ಎಷ್ಟು ಮುಖ್ಯವೋ ಅಥ್ಲೆಟಿಕ್ಸ್ ಕೂಡ ನನಗೆ ಅಷ್ಟೇ ಮುಖ್ಯ. ನಮ್ಮ ತಂದೆಯವರು ಓದುವುದು ತಪ್ಪಿದರೆ ಮಾತಾಡೊಲ್ಲ, ಆದರೆ ಒಂದು ದಿನ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವುದನ್ನು ತಪ್ಪಿಸಿದರೆ ಸಿಟ್ಟಾಗುತ್ತಾರೆ. ಅವರೇ ನನಗೆ ಸ್ಫೂರ್ತಿ,” ಎಂದು ಕೃಷಿಕ್ ಖುಷಿಯಿಂದ ನುಡಿದರು.