ಬೆಂಗಳೂರು: ಗುಜರಾತ್‌ನ ನಾಡಿಯಾಡ್‌ನ ಛೋಟುಬಾಯಿ ಪುರಾನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ 20ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಪುರುಷರ 400 ಮೀ. ಓಟದಲ್ಲಿ ರಾಜ್ಯದ ರಿಹಾನ್ ಎಚ್. 48.31 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿದರು. ಈ ವಿಭಾಗದಲ್ಲಿ ಹರಿಯಾಣ ಮತ್ತು ತಮಿಳುನಾಡಿನ ಸ್ಪರ್ಧಿಗಳು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.
ಪುರುಷರ 110 ಮೀ ಹರ್ಡಲ್ಸ್‌ನಲ್ಲಿ 14.02 ಸೆಕೆಂಡುಗಳಲ್ಲಿ ಗುರಿ ತಲುಪಿದ ಕರ್ನಾಟಕದ ಕೃಷಿಕ್ ಮಂಜುನಾಥ್ ಚಿನ್ನದ ಪದಕ ಗೆದ್ದಿರುವುದು ಮಾತ್ರವಲ್ಲ ಕೊಲಂಬಿಯಾದಲ್ಲಿ ನಡೆಯಲಿರುವ 20 ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದರು.
ವನಿತೆಯರ ಹೈಜಂಪ್‌ನಲ್ಲಿ 1,73 ಮೀ. ಎತ್ತರಕ್ಕೆ ಜಿಗಿದ ಪಾವನ ನಾಗರಾಜ್ ಬೆಳ್ಳಿಯ ಪದಕ ಗೆದ್ದರು. ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ 14.30ಸೆಕೆಂಡುಗಳಲ್ಲಿ ಗುರಿ ತಲುಪಿದ ಉನ್ನತಿ ಅಯ್ಯಪ್ಪ ಬೆಳ್ಳಿಯ ಸಾಧನೆ ಮಾಡಿದರು.
ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಕರ್ನಾಟಕದ ಓಟಗಾರ್ತಿ ಪ್ರಿಯಾ ಮೋಹನ್ 400 ಮೀ. ಓಟದಲ್ಲಿ ಒಂದು ಸೆಕೆಂಡುಗಳ ಅಂತರದಲ್ಲಿ ಹಿಂದೆ ಬಿದ್ದು ಬೆಳ್ಳಿಗೆ ತೃಪ್ತಿಪಟ್ಟರು. 52.49 ಸೆಕೆಂಡುಗಳಲ್ಲಿ ಗುರಿ ತಲುಪಿದ ಪ್ರಿಯಾ ನೂತನ ಕೂಟ ದಾಖಲೆ ಬರೆದರು.
ಈ ಸಾಧನೆಯೊಂದಿಗೆ ಪ್ರಿಯಾ ಮೋಹನ್ 20ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದರು.
ಪ್ರಿಯಾ ಮೋಹನ್ ನಾಲ್ಕು ದಿನಗಳ ಹಿಂದೆ ಸ್ವಿಜರ್ಲೆಂಡ್‌ನಲ್ಲಿ ನಡೆದ ಸ್ವಿಸ್ ನ್ಯಾಷನಲ್ ಅಥ್ಲೆಟಿಕ್ಸ್‌ನ 400 ಮೀ. ಓಟದಲ್ಲಿ ಅಲ್ಲಿಯ ಒಲಂಪಿಯನ್‌ನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದರು. ವಿಶ್ರಾಂತಿಯ ಕೊರತೆಯ ಕಾರಣ ಅವರು ಓಟದಲ್ಲಿ ಒಂದು ಸೆಕೆಂಡ್ ಹಿಂದೆ ಬೀಳುವಂತಾಯಿತು.