ಪಂಚಕುಲ, ಜೂ. 3:
ಜೂನ್ 4 ರಿಂದ ಹರಿಯಾಣದ ಪಂಚಕುಲದಲ್ಲಿ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ಗೆ ಕರ್ನಾಟಕದಿಂದ 255 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
2018ರಲ್ಲಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಹೆಸರಿನಲ್ಲಿ ಆರಂಭಗೊಂಡ ಈ ಕ್ರೀಡಾಕೂಟ 2021ರಲ್ಲಿ ಕೊರೋನಾದ ಕಾರಣ ನಡೆದಿರಲಿಲ್ಲ. 2019ರಿಂದ ಖೇಲೋ ಇಂಡಿಯಾ ಯೂಥ್ ಗೇಮ್ಸ್ ಎಂದು ಮರುನಾಮಕರಣ ಮಾಡಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ದಿಲ್ಲಿ, ಪುಣೆ ಹಾಗೂ ಗುವಾಹಟಿ ನಗರಗಳಲ್ಲಿ ಇದುವರೆಗಿನ ಆವೃತ್ತಿಗಳು ನಡೆದಿವೆ.
ನಾಲ್ಕನೇ ಸ್ಥಾನದಿಂದ ಮೇಲಕ್ಕೇರುವ ಗುರಿ: ಕರ್ನಾಟಕ ಕಳೆದ ಮೂರೂ ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ತೋರಿದೆ. ಆದರೆ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಿಂತ ಮೇಲೇರದೆ ಸ್ಥಿರತೆ ಕಾಯ್ದುಕೊಂಡಿದೆ. ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಆಯೋಜಿಸಿರುವ ಕರ್ನಾಟಕದ ಕ್ರೀಡಾಪಟುಗಳಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಹಿರಿಯರಂತೆ ತಾವು ಕೂಡ ಉತ್ತಮ ಪ್ರದರ್ಶನ ತೋರಬೇಕೆಂಬ ಗುರಿಯೊಂದಿಗೆ ಈ ಬಾರಿ ಅಂಗಣಕ್ಕಿಳಿಯಲಿದ್ದಾರೆ.
2018 ಆವೃತ್ತಿಯಲ್ಲಿ ಕರ್ನಾಟಕ 16 ಚಿನ್ನ, 11 ಬೆಳ್ಳಿ ಹಾಗೂ 17 ಕಂಚಿನ ಪದಕಗಳೊಂದಿಗೆ ಒಟ್ಟು 44 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಗಳಿಸಿತ್ತು. ನಂತರ 2019ರಲ್ಲಿ ನಡೆದ ಆವೃತ್ತಿಯಲ್ಲಿ ಕರ್ನಾಟಕದ ಕ್ರೀಡಾಪಟುಗಳು 29 ಚಿನ್ನ, 26 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಸೇರಿ ಒಟ್ಟು 74 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು. ಗುವಾಹಟಿಯಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಪದಕ ಗಳಿಕೆಯಲ್ಲಿ ಏರಿಕೆ ಕಂಡು ಬಂತು. 32 ಚಿನ್ನ, 26 ಬೆಳ್ಳಿ ಹಾಗೂ 22 ಕಂಚಿನ ಪದಕ ಸೇರಿ ಒಟ್ಟು 80 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದರು. ಅಲ್ಲಿಯೂ ಪದಕಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ. ಈ ಬಾರಿ ಕರ್ನಾಟಕ ಮೂರನೇ ಸ್ಥಾನಕ್ಕೇರು ಗುರಿ ಹೊಂದಿದೆ.
ಈಜಿನಲ್ಲಿ ಪ್ರಭುತ್ವ: ಕರ್ನಾಟಕ ಇದುವರೆಗೂ ಹೆಚ್ಚು ಪದಕಗಳನ್ನು ಗೆದ್ದಿರುವುದು ಈಜು ವಿಭಾಗದಲ್ಲಿ. ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಬಂದಿರುವುದೂ ಈಜಿನಲ್ಲಿ. ಅಲ್ಲದೆ ದಾಖಲೆಗಳನ್ನು ನಿರ್ಮಿಸಿದ್ದು, ಮುರಿದದ್ದು ಹೆಚ್ಚು ಈಜಿನಲ್ಲಿ. ಆದ್ದರಿಂದ ಈ ಬಾರಿಯೂ ಕರ್ನಾಟಕ ಈಜಿನಲ್ಲಿ ಪ್ರಭುತ್ವ ಸಾಧಿಸುವ ನಿರೀಕ್ಷೆ ಇದೆ. ಈ ಬಾರಿ ಈಜಿನಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಅಂದರೆ 93 ಸ್ಪರ್ಧಿಗಳು ಈಜಿನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಿಯಾ ಮೋಹನ್ ಆಕರ್ಷಣೆ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 200 ಮೀ ಓಟದಲ್ಲಿ ಡಬಲ್ ಒಲಿಂಪಿಯನ್ ದೂತಿ ಚಾಂದ್ ಅವರನ್ನು ಸೋಲಿಸಿ ಚಿನ್ನ ಗೆದ್ದಿರುವ ಕರ್ನಾಟಕ ಪ್ರಿಯಾ ಮೋಹನ್ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ವಿಶ್ವ ಸ್ಕೂಲ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಉನ್ನತಿ ಅಯ್ಯಪ್ಪ ರಾಜ್ಯದ ಪರ ಪದಕ ಗೆಲ್ಲುವ ಫೇವರಿಟ್‌ಗಳಲ್ಲಿ ಒಬ್ಬರು.
ಕರ್ನಾಟಕದ ಸ್ಪರ್ಧೆಗಳು: ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್, ಜೂಡೋ, ಖೋಖೋ, ಮಲ್ಲಕಂಬ, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ಕುಸ್ತಿ, ಯೋಗಾಸನ, ಕಲರಿಪಯಟ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಕ್ರೀಡೆಗಳಲ್ಲಿ ಕರ್ನಾಟಕ ಸ್ಪರ್ಧಿಸಲಿದೆ.
ಕರ್ನಾಟಕ ಕ್ರೀಡಾ ತಂಡದ ಮುಖ್ಯಸ್ಥರಾಗಿ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೋಹಿತ್ ಗಂಗಾಧರ್ ಅವರು ಕಾರ್ಯನಿರ್ವಹಿಸಲಿದ್ದಾರೆ.