Tuesday, January 14, 2025

ಖೋ ಖೋ ಬಡವರ ಮನೆಯ ಬೆಳಗಿಸಿದೆ: ಗೌತಮ್‌ ಎಂ.ಕೆ

ಉಡುಪಿ: “ಚಿಕ್ಕಂದಿನಲ್ಲಿಯೇ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ವೇಗವಾಗಿ ಓಡುತ್ತಿದ್ದ ನನ್ನನ್ನು ಎಲ್ಲರೂ ಖೋ ಖೋ ದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಕ್ಕಿತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಏಷ್ಯಾ ಮಟ್ಟದಲ್ಲೂ ಉತ್ತಮವಾಗಿ ಆಡಿದೆ. ಈಗ ಮೊದಲ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಖೋ ಖೋ ನನಗೆ ಉದ್ಯೋಗ ನೀಡಿದೆ. ಬದುಕು ನೀಡಿದೆ,” ಎಂದು ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಖೋ ಖೋ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಕರ್ನಾಟಕದ ಗೌತಮ್‌ ಎಂ.ಕೆ. ಅವರು www.sportsmail.net ಗೆ ತಿಳಿಸಿದ್ದಾರೆ. Kho Kho is my life; it gave everything to me and my family: Kho Kho world cup player Gowtham M K.

ಸೋಮವಾರ ದೆಹಲಿಯಿಂದ ಮಾತನಾಡಿದ ಅವರು, “ಇದು ನಮ್ಮ ದೇಶದ ಕ್ರೀಡೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಖುಷಿ ಇದೆ. ವಿಶ್ವಕಪ್‌ ಆಡುತ್ತಿರುವುದಕ್ಕೆ ಸಂಭ್ರಮವಿದೆ. ನಮ್ಮದು ಬಡ ಕುಟುಂಬ ಅಪ್ಪ ಆಟೋ ಚಲಾಯಿಸುತ್ತಿದ್ದಾರೆ. ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡು ತಪ್ಪು ಮಾಡಿದೆ ಎಂದು ಯಾವತ್ತೂ ಅನಿಸಲಿಲ್ಲ. 4ನೇ ತರಗತಿಯಿಂದ ಖೋ ಖೋ ಆಡುತ್ತಿದ್ದೆ. ವೇಗವಾಗಿ ಓಡುತ್ತಿರುವೆ, ನನ್ನ ಆಟದಲ್ಲಿ ಚುರುಕುತನವಿತ್ತು. ಇದರಿಂದಾಗಿ ಯಶಸ್ಸಿನ ಹಾದಿ ತುಳಿದೆ, ನನ್ನ ಬದುಕಿನ ಹಾದಿಯಲ್ಲಿ ಪ್ರೋತ್ಸಾಹ ನೀಡಿದ ಯಂಗ್‌ ಪಯೋನಿಯರ್‌ ಸ್ಪೋರ್ಟ್ಸ್‌ ಕ್ಲಬ್‌, ಶಿಕ್ಷಕರು, ಗೆಳೆಯರು, ವಿಜನ ನಗರ ಕಾಲೇಜು, ಬೆಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ಖೋ ಖೋ ಸಂಸ್ಥೆ ಎಲ್ಲರನ್ನೂ ಸ್ಮರಿಸುವೆ,” ಎಂದರು.

ಖೋ ಖೋ ಪ್ರೀಮಿಯರ್‌ ಲೀಗ್‌: ಗೌತಮ್‌ ಎಂ.ಕೆ. ಅಲ್ಟಿಮೇಟ್‌ ಖೋ ಖೋ ಲೀಗ್‌ಗೆ ಮೊದಲ ಪಟ್ಟಿಯಲ್ಲೇ ಆಯ್ಕೆಯಾದ ಆಟಗಾರ. ಒಡಿಶಾ ಜುಗರ್ನಾಟ್ಸ್‌ ತಂಡದ ಪರ ಆಡಿ ಉತ್ತಮ ಪ್ರದರ್ಶನ ತೋರಿದ ಕಾರಣ ಎರಡನೇ ವರ್ಷವೂ ಅವರನ್ನು ತಂಡ ಉಳಿಸಿಕೊಂಡಿತು. “ಅಲ್ಟಿಮೇಟ್‌ ಖೋ ಖೋ ಲೀಗ್‌ನಲ್ಲಿ ಆಡಿದ್ದು ಹೊಸ ಅನುಭವ, ಎರಡನೇ ಋತುವಿಗೂ ಉಳಿಸಿಕೊಂಡಾಗ ಖುಷಿಯಾಗಿತ್ತು. ನಮ್ಮ ತಂಡ ಚಾಂಪಿಯನ್‌ ಪಟ್ಟ ಗೆದ್ದಿರುವುದೇ ಇದಕ್ಕೆ ಕಾರಣ. ಡಿಫೆನ್ಸ್‌ ಹಾಗೂ ಅಟ್ಯಾಕ್‌ ಎರಡರಲ್ಲೂ ಚುರುಕಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಖೋ ಖೋ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ,” ಎಂದರು.

ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್‌: ಪ್ರಸಕ್ತ ವಿಶ್ವಕಪ್‌ ಬಗ್ಗೆ ಮಾತನಾಡಿದ ಗೌತಮ್‌, “ಏಷ್ಯಾದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಬಲಿಷ್ಠವಾಗಿದೆ. ಭಾತರದಲ್ಲಿ ಈ ಕ್ರೀಡೆ ಅನಾದಿ ಕಾಲದಿಂದಲೂ ಇದೆ. ಜಗತ್ತಿನ ಇತರ ರಾಷ್ಟ್ರಗಳು ಕಳೆದ ಏಳೆಂಟು ವರ್ಷಗಳಿಂದ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿವೆ, ಹಾಗಂತ ಆ ದೇಶಗಳು ದುರ್ಬಲವೆಂದಲ್ಲ. ಇಲ್ಲಿ ಅನುಭವ ಕೆಲಸ ಮಾಡುತ್ತದೆ, ಈ ಎಲ್ಲ ಅಂಶಗಳನ್ನು ಗಮನಿಸಿದರೆ ಭಾರತ ಗೆಲ್ಲುವ ಫೇವರಿಟ್‌.”

ಅಪ್ಪ ಆಟೋ ಡ್ರೈವರ್‌: ಗೌತಮ್‌ ಕನ್ನಡ ಮಾಧ್ಯಮದಲ್ಲಿ ಓದಿ, ಮನೆಯ ಕಷ್ಟವನ್ನು ಅರಿತು ಬಂದವ. ಖೋ ಖೋ ಅತನ ಪಾಲಿಗೆ ತಪಸ್ಸು ಇದ್ದಂತೆ. ಖೋ ಖೋ ಕ್ರೀಡೆಯಿಂದಾಗಿಯೇ ಅವರ ಕುಟುಂಬ ಇವತ್ತು ಖುಷಿಯ ದಿನಗಳನ್ನು ಕಳೆಯುತ್ತಿದೆ. ಗೌತಮ್‌ ಅವರ ತಂದೆ ಕಪಾನಿ ಗೌಡ ಬೆಂಗಳೂರಿನ ಚಾಮರಾಜಪೇಟೆಯ ಆಟೋ ಚಾಲಕರಾಗಿದ್ದಾರೆ. ತಾಯಿ ರೇಖಾವತಿಗೆ ಮನೆವಾರ್ತೆ.  “ನಮ್ಮದು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬ. ಅಪ್ಪ ಆಟೋ ಚಲಾಯಿಸುತ್ತಿದ್ದಾರೆ. ಆದರೆ ನನ್ನ ಕ್ರೀಡಾ ಬದುಕಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದವರು. ಖೋ ಖೋ ಯಶಸ್ಸಿನಿಂದಾಗಿ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದೆ, ಹೆತ್ತವರು ಖುಷಿಯಾಗಿರಬೇಕು,” ಎಂದು ಹೇಳುವ ಗೌತಮ್‌ ಅವರ ಮಾತಿನಲ್ಲಿ ಬದುಕಿನ ಅರಿವು ಎದ್ದು ಕಾಣುತ್ತದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಓದಿರುವ ಗೌತಮ್‌ ಮೂರು ಖೋ ಖೋದಲ್ಲಿ ಮೂರು ಬಾರಿ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ.

ಖೋ ಖೋ ಕ್ರೀಡೆಯಲ್ಲಿ ಗೌತಮ್‌ ಸಾಧನೆಗಳು:

2011ರಲ್ಲಿ ಸಬ್‌ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ.

2016ರಲ್ಲಿ ಜೂನಿಯರ್‌ ತಂಡದಲ್ಲಿ ಆಡುವ ಅವಕಾಶ.

10ಕ್ಕೂ ಹೆಚ್ಚು ಬಾರಿ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಪ್ರತಿನಿಧಿ.

1 ಚಿನ್ನ 4 ಕಂಚಿನ ಪದಕ ಗೆದ್ದ ಸಾಧನೆ. ಫೆಡರೇಷನ್‌ ಕಪ್‌ನಲ್ಲಿ ಭಾಗವಹಿಸುವಿಕೆ.

ಸೀನಿಯರ್‌ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ 3 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕದ ಸಾಧನೆ.

60ಕ್ಕೂ ಹೆಚ್ಚು ರಾಜ್ಯ ಹಾಗೂ ಅಂತರ್‌ ವಿಶ್ವವಿದ್ಯಾನಿಲಯಗಳ ಪಂದ್ಯವನ್ನು ಆಡಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಬಾರಿ ವೈಯಕ್ತಿಕ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

2017ರಲ್ಲಿ ರಾಷ್ಟ್ರೀಯ ಹಿರಿಯರ ತಂಡಕ್ಕೆ ಆಯ್ಕೆ. 2018ರಲ್ಲಿ ಟೆಸ್ಟ್‌‌ ಪಂದ್ಯದಲ್ಲಿ ಚಿನ್ನದ ಪದಕ.

2023ರಲ್ಲಿ ನಾಲ್ಕನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ.

ಅಲ್ಟಿಮೇಟ್‌ ಖೋ ಖೋ ಲೀಗ್‌ ಚಾಂಪಿಯನ್‌, A ಶ್ರೇಣಿಯಲ್ಲಿ ಆಯ್ಕೆಯಾದ ರಾಜ್ಯದ ಮೊದಲ ಆಟಗಾರ.

Related Articles