Thursday, April 18, 2024

ಮುಂದಿನ ವರ್ಷ ಶಿವಮೊಗ್ಗದಲ್ಲಿ ಕೆಪಿಎಲ್

ಸ್ಪೋರ್ಟ್ಸ್  ಮೇಲ್ ವರದಿ 

ಕರ್ನಾಟಕದ ಜನಪ್ರಿಯ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್‌ನ ೨೦೧೯ರ ಆವೃತ್ತಿಯ ಪಂದ್ಯಗಳು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ವಕ್ತಾರ ವಿನಯ ಮೃತ್ಯುಂಜಯ ಹೇಳಿದರು.

ಶಿವಮೊಗ್ಗದಲ್ಲಿ ನಡೆದ ಕೆಪಿಎಲ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ವಿಷಯವನ್ನು ತಿಳಿಸಿದರು.  ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಶಿವಮೊಗ್ಗ ಲಯನ್ಸ್‌ನ ಅಭಿಮನ್ಯು ಮಿಥುನ್, ಆಲ್ರೌಂಡರ್ ಕೆ. ಗೌತಮ್ ಹಾಗೂ ಶಿವಮೊಗ್ಗ ಲಯನ್ಸ್‌ನ ಆರ್. ಕುಮಾರ್ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು.
ವಿನಯ್ ಮೃತ್ಯುಂಜಯ ಅವರ ಜತೆಯಲ್ಲಿ ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ ಮತ್ತು ಶಿವಮೊಗ್ಗ ವಲಯದ ಸಮನ್ವಯಕಾರ ಡಿ.ಆರ್. ನಾಗರಾಜ್,ವಲಯ ಅಧ್ಯಕ್ಷ ಸುಕುಮಾರ್ ಪಟೇಲ್, ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ ಎ.ವಿ. ಶಶಿಧ‘ರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಆರು ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಕ್ರಿಕೆಟ್ ಹಬ್ಬ ರಾಜ್ಯದ ಬೇರೆ ಬೇರೆ ನಗರಕ್ಕೆ ಪ್ರಯಾಣಿಸಲಿದೆ. ಈ ಋತುವಿನ ಆರಂಭಿಕ ಪಂದ್ಯ ಆಗಸ್ಟ್ ೧೫ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ ೧೯ರಂದು ಹುಬ್ಬಳ್ಳಿ ಹಾಗೂ ಆಗಸ್ಟ್ ೨೯ರಂದು ಮೈಸೂರಿಗೆ ಪ್ರಯಾಣಿಸಲಿದೆ.
ಶಿವಮೊಗ್ಗ ಲಯನ್ಸ್ ತಂಡಕ್ಕೆ ದಾಖಲೆಯ ಮೊತ್ತ ೮.೩೦ ಲಕ್ಷ ರೂ.ಗಳಿಗೆ ಹರಾಜುಗೊಂಡಿರುವ ಅಭಿಮನ್ಯು ಮಿಥುನ್ ಈ ಸಂದರ್ಭದಲ್ಲಿ ಮಾತನಾಡಿ,
ಕೆಪಿಎಲ್‌ನಿಂದಾಗಿ ತೆರೆಯ ಮರೆಯಲ್ಲಿದ್ದ ಅನೇಕ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಯಿತು. ರಾಜ್ಯದ ಚಿಕ್ಕ ಹಳ್ಳಿಯಿಂದ ಬಂದ ಕ್ರಿಕೆಟಿಗರಿಗೂ ಇಲ್ಲಿ ಉತ್ತಮ ಅವಕಾಶ ಸಿಕ್ಕಂತಾಗಿದೆ. ರಾಜ್ಯ ತಂಡಕ್ಕೆ ಆಡುವ ಪ್ರತಿ‘ಭಾವಂತ ಆಟಗಾರರನ್ನು ಇಲ್ಲಿ ಆಯ್ಕೆ ಸಮಿತಿಯು ಗುರುತಿಸುತ್ತದೆ ಎಂದರು.
ಶಿವಮೊಗ್ಗ ಲಯನ್ಸ್ ಉತ್ತಮ ತಂಡ
ಈ ಸಂದ‘ರ್ದಲ್ಲಿ ತಮ್ಮ ತಂಡದ ಬಗ್ಗೆ ಮಾತನಾಡಿದ ಮಿಥುನ್, ಶಿವಮೊಗ್ಗ ಲಯನ್ಸ್ ಉತ್ತಮ ಆಟಗಾರರಿಂದ ಕೂಡಿದ ಉತ್ತಮ ತಂಡ. ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ  ಫೈನಲ್ ತಲಪುವುದು ನಮ್ಮ ಗುರಿಯಾಗಿದೆ. ಅದೇ ರೀತಿ ಪ್ರಶಸ್ತಿ ಗೆಲ್ಲುವುದು ಅಂತಿಮ ಗುರಿಯಾಗಿದೆ. ಶಿವಮೊಗ್ಗ ನಮ್ಮ ಜನ ತಂಡಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆಂಬ ನಂಬಿಕೆ ಇದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಇತರ ತಂಡಗಳಿಗೂ ಶುಭಹಾರೈಸುತ್ತೇನೆ, ಎಂದು ಮಿಥುನ್ ಹೇಳಿದರು.
ಮೈಸೂರು ವಾರಿಯರ್ಸ್ ತಂಡದ ಕೆ. ಗೌತಮ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕರ್ನಾಟಕ ಪ್ರೀಮಿಯರ್ ಲೀಗ್ ಎಲ್ಲ ರೀತಿಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ. ಕೆಪಿಎಲ್ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ ಎಂದರು.
ಲಯನ್ಸ್ ಜೆರ್ಸಿ ಬಿಡುಗಡೆ
ಇದೇ ಸಂದರ್ಭದಲ್ಲಿ   ಶಿವಮೊಗ್ಗ ಲಯನ್ಸ್ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.ಶಿವಮೊಗ್ಗ ಲಯನ್ಸ್ ಮಾಲೀಕ ಆರ್ ಕುಮಾರ್ ಹಾಜರಿದ್ದರು. ಅಬ್ಯಾಸದಲ್ಲಿ ಹೆಚ್ಚಿನ ಬೆವರಿಳಿಸಿದರೆ, ಯುದ್ಧದಲ್ಲಿ ರಕ್ತ ಹರಿಸುವುದು ಕಡಿಮೆಯಾಗಿರುತ್ತದೆ ಎಂಬುದು ಶಿವಮೊಗ್ಗ ಲಯನ್ಸ್ ತಂಡದ ನಂಬಿಕೆಯಾಗಿದೆ.

Related Articles