ಸೋಮಶೇಖರ್ ಪಡುಕರೆ, ಬೆಂಗಳೂರು:
ಆತ ಚಿಕ್ಕಂದಿನಲ್ಲಿ ಬ್ಯಾಟ್ಸ್‌ಮನ್ ಆಗಿದ್ದ. ಬಸವನಗುಡಿ ಕ್ರಿಕೆಟ್ ಕ್ಲಬ್‌ನಲ್ಲಿ ಹೀಗೆ ಬೌಲಿಂಗ್ ಮಾಡುವಾಗ ಅಲ್ಲಿನ ಕೋಚ್ ಒಬ್ಬರು “ನಿನಗೆ ಬೌಲಿಂಗ್ ಮಾಡಲು ಬರೊಲ್ಲ. ಬೌಲಿಂಗ್ ಮಾಡುವುದೆಂದರೆ ಚೆಂಡು ಎಸೆದಷ್ಟು ಸುಲಭವಲ್ಲ,” ಎಂದು ರೇಗಿಸಿದರು. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿದ ಆ ಹುಡುಗ ಮುಂದೊಂದು ದಿನ ಕರ್ನಾಟಕದ ವೇಗದ ಬೌಲರ್ ಆದ. ಮನೆಯಂಗಣವಾದ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ 5 ವಿಕೆಟ್ ಸಾಧನೆ ಮಾಡಿ ಕರ್ನಾಟಕ ಕ್ರಿಕೆಟ್‌ನಲ್ಲಿ ತನ್ನ ವಿಜಯದ ವೈಶಾಖಕ್ಕೆ ಮುನ್ನುಡಿ ಬರೆದ. ಈತ ಬೇರೆ ಯಾರೂ ಅಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ವಿಜಯ್ ಕುಮಾರ್ ಅವರ ಮಗ ಕರ್ನಾಟಕದ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್.
ವೈಶಾಖ್ ಅವರ ತಂದೆ ವಿಜಯ ಕುಮಾರ್ ಕೆಂಗೇರಿ ಕ್ರಿಕೆಟರ್ಸ್ ಮತ್ತು ಎನ್‌ಒಸಿಸಿ ಪರ ಮೊದಲ ಡಿವಿಜನ್ ಕ್ರಿಕೆಟ್ ಆಡಿದ ಆಟಗಾರ. ಅವರು ಕ್ರಿಕೆಟ್ ಅಭ್ಯಾಸ ಮಾಡುವಾಗ ಜೊತೆಯಲ್ಲಿ 6 ವರ್ಷದ ಮಗ ವೈಶಾಖ್‌ನನ್ನು ಅಂಗಣಕ್ಕೆ ಕರೆದೊಯ್ಯುತ್ತಿದ್ದರು. ತಂದೆ ಆಡುತ್ತಿದ್ದರೆ ಅಂಗಣದ ಹೊರಗಡೆ ಬ್ಯಾಟ್ ಹಿಡಿದು ವೈಶಾಖ್ ಅಭ್ಯಾಸ ಆರಂಭಿಸಿದ. ಬ್ಯಾಟ್ಸ್‌ಮನ್ ಆಗಬೇಕೆಂಬ ಹಂಬಲದೊಂದಿಗೆ ಅಂಗಣಕ್ಕಿಳಿದ. ಆದರೆ U16 ಪಂದ್ಯದಲ್ಲಿ ಬಸವನಗುಡಿ ಕ್ರಿಕೆಟ್ ಕ್ಲಬ್‌ನ ಕೋಚ್ ರಮಣ್ ಅವರು ಬೌಲಿಂಗ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವೈಶಾಖ್‌ನನ್ನು ಕುರಿತು, “ನಿನಗೆ ಬೌಲಿಂಗ್ ಮಾಡಲು ಅಸಾಧ್ಯ,” ಎಂದು ತಮಾಷೆ ಮಾಡಿದರು. ಆ ತಮಾಷೆಯನ್ನೇ ಧನಾತ್ಮಕವಾಗಿ ಸ್ವೀಕರಿಸಿದ ವೈಶಾಖ್ ಅಂದಿನಿಂದಲೇ ವೇಗದ ಬೌಲರ್ ಆಗುವ ಪಣ ತೊಟ್ಟು ಕಳೆದ ವರ್ಷ ರೈಲ್ವೇಸ್ ತಂಡದ ವಿರುದ್ಧ ರಣಜಿಗೆ ಪದಾರ್ಪಣೆ ಮಾಡಿದರು.
9ನೇ ವಯಸ್ಸಿನಲ್ಲೇ U13 ಆಡಿದ ವೈಶಾಖ್, U14 ರಾಜ್ಯ ತಂಡವನ್ನು ಪ್ರತಿನಿಧಿಸಿದರು. U16 ನಲ್ಲಿ ರಾಜ್ಯ ತಂಡವನ್ನು ನಾಯಕನಾಗಿ ಮುನ್ನಡೆಸಿದರು. U19, U23, U25 ಹೀಗೆ ವಿವಿಧ ಹಂತದಲ್ಲಿ ಮಿಂಚಿದರು. ಲೀಗ್‌ನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಸೋಷಿಯಲ್ ಕ್ರಿಕೆಟರ್ಸ್ ಪರ ಆಡಿದ ವೈಶಾಖ್ 30 ವಿಕೆಟ್ ಗಳಿಸಿ ಗಮನ ಸೆಳೆದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಟ್ಟು 25 ವಿಕೆಟ್ ಗಳಿಕೆಯ ಸಾಧನೆ ಮಾಡಿ, ದೇಶದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ 5ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಎಲ್ಲ ಸಾಧನೆ ಅವರನ್ನು ರಾಜ್ಯ ರಣಜಿ ತಂಡಕ್ಕೆ ಪದಾರ್ಪಣೆ ಮಾಡುವಂತೆ ಮಾಡಿತು.
ರಣಜಿಯಲ್ಲಿ ಮಿಂಚು:
ಲೀಗ್ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿದ ವೈಶಾಖ್ ವಿಜಯ್ ಕುಮಾರ್‌ಗೆ ಕಳೆದ ವರ್ಷ ರಣಜಿ ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವೈಶಾಖ್ ವೃತ್ತಿ ಬದುಕಿನ ಮೊದಲ ರಣಜಿ ಪಂದ್ಯವಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 22 ಓವರ್ ಎಸೆದರೂ ವಿಕೆಟ್ ಸಿಗಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 16 ರನ್‌ಗೆ 2 ವಿಕೆಟ್ ಗಳಿಸಿ ಯಶಸ್ಸಿನ ಹೆಜ್ಜೆ ಇಟ್ಟರು. ಮತ್ತೆ ಹಿಂದಿರುಗಿ ನೋಡಲಿಲ್ಲ. ಕಳೆದ ಋತುವಿನಲ್ಲಿ ಒಟ್ಟು 7 ವಿಕೆಟ್ ಗಳಿಕೆ ಅವರದ್ದಾಗಿತ್ತು.
ಚಿನ್ನಸ್ವಾಮಿಯಲ್ಲಿ 5 ಸ್ಟಾರ್ ಬೌಲರ್!
ಪ್ರತಿಯೊಬ್ಬ ಆಟಗಾರನಿಗೂ ತಾನು ಅಭ್ಯಾಸ ಮಾಡಿದ ಮನೆಯಂಗಣದಲ್ಲಿ ಉತ್ತಮವಾಗಿ ಆಡಬೇಕು ಎಂಬ ಹಂಬಲ ಇದ್ದೇ ಇರುತ್ತದೆ. 10ನೇ ವಯಸ್ಸಿನಿಂದ ಚಿನ್ನಸ್ವಾಮಿಯಲ್ಲಿ ಆಡುತ್ತಿದ್ದ ವೈಶಾಖ್ ಈ ವರ್ಷದ ರಣಜಿ ಪಂದ್ಯದಲ್ಲಿ ಛತ್ತೀಸ್‌ಗಢದ ವಿರುದ್ಧ 59 ರನ್‌ಗೆ 5 ವಿಕೆಟ್ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ವೈಶಾಖ್ ಅವರ ಮೊದಲ ಐದು ವಿಕೆಟ್ ಸಾಧನೆಯಾಗಿತ್ತು. ಈಗ ಕೇರಳ ವಿರುದ್ಧ ರಣಜಿ ಪಂದ್ಯವನ್ನಾಡುತ್ತಿರುವ ವೈಶಾಖ್ ಇದುವರೆಗೂ 33 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ.
ಬೌಲಿಂಗ್ ಮಾಡುವಾಗ ಸಿಟ್ಟಿನ ಆವೇಶ!
“ವೈಶಾಖ್ ಅತ್ಯಂತ ಸೌಮ್ಯ ಸ್ವಭಾವದವ, ಆದರೆ ಬೌಲಿಂಗ್ ಮಾಡುವಾಗ ಮಾತ್ರ ಬಹಳ ಆಕ್ರಮಣಕಾರಿಯಾಗಿ ಕಾಣುತ್ತಾನೆ. ವಿಕೆಟ್ ಸಿಕ್ಕಾಗಂತೂ ಸಿಟ್ಟಿನ ಸಂಭ್ರಮ. ಸಾಮಾನ್ಯವಾಗಿ ವೇಗದ ಬೌಲರ್‌ಗಳು ವಿಕೆಟ್ ಸಿಕ್ಕಾಗ ಹೀಗೆಯೇ ಮಾಡುತ್ತಾರೆ. ಓವರ್ ಮುಗಿದ ಕೂಡಲೇ ಆ ಆವೇಶ, ಆಕ್ರೋಶ್ ಇಳಿದು ಹೋಗುತ್ತದೆ,” ಎನ್ನುತ್ತಾರೆ ವೈಶಾಖ್ ಅವರ ತಂದೆ ವಿಜಯ ಕುಮಾರ್.
ವಿಜಯ ಕುಮಾರ್ ಹಾಗೂ ಬೃಂದಾ ದಂಪತಿಯ ಏಕೈಕ ಮಗನಾಗಿರುವ ವೈಶಾಖ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಮೈಸೂರು ವಾರಿಯರ್ಸ್ ಮತ್ತು ಮಂಗಳೂರು ಯುನೈಟೆಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆಟಗಾರ. ವೈಶಾಖ್ ಬೌಲಿಂಗ್ ಬಗ್ಗೆ ಕರ್ನಾಟಕದ ಅನೇಕ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿ, ಭವಿಷ್ಯದ ವೇಗಿ ಎಂದು ಹೇಳಿದ್ದಾರೆ. ಸದ್ಯ ಎಜಿಐಎಸ್‌ನಲ್ಲಿ ಉದ್ಯೋಗಿಯಾಗಿರುವ ವೈಶಾಖ್ ವಿಜಯ್ ಕುಮಾರ್ ಇದೇ ಲಯ, ಬದ್ಧತೆ ಮತ್ತು ಶಿಸ್ತನ್ನು ಮುಂದುವರಿಸಿದ್ದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಖಚಿತ.