Thursday, September 19, 2024

ಮಂಡ್ಯದಿಂದ ಬಂದ ಇಂಡಿಯನ್‌ ಎಕ್ಸ್‌ಪ್ರೆಸ್‌ ಕುಮಾರ್‌!

ಮಂಡ್ಯ: “ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಅಗಲುವಿಕೆ ಅನಿವಾರ್ಯವಾಗಿರುತ್ತದೆ ಆದರೆ ಅದು ದುರಂತ ಆಗಬಾರದು. ಉತ್ತಮ ಹಾದಿಯಲ್ಲಿ ನಡೆದರೆ ನಮ್ಮ ನೋವುಗಳು ಸಹಜವಾಗಿಯೇ ದೂರವಾಗುತ್ತವೆ. ಕೆಲವು ತಿಂಗಳ ಅಂತರದಲ್ಲೇ ಹೆತ್ತವರನ್ನು ಕಳೆದುಕೊಂಡೆ, ಅದರೆ ಅವರು ಹಾಕಿಕೊಟ್ಟ ಆದರ್ಶಗಳಿಂದ ವಿಮುಖನಾಗಲಿಲ್ಲ. ಪ್ರತಿಯೊಂದು ಎಸೆತದಲ್ಲೂ ನನ್ನ ಹೆತ್ತವರ ಶಕ್ತಿ ಇರುತ್ತದೆ, ಉತ್ತಮ ಬೌಲಿಂಗ್‌ ಮೂಲಕ ಕರ್ನಾಟಕಕ್ಕೆ ರಣಜಿ ಪಂದ್ಯವನ್ನು ಗೆಲ್ಲಿಸಿಕೊಡಬೇಕು,” ಹೀಗೆ ಹೇಳಿದವರು ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ 17 ವಿಕೆಟ್‌ಗಳನ್ನು ಗಳಿಸಿ “ಪರ್ಪಲ್‌ ಕ್ಯಾಪ್‌” ಸಾಧನೆ ಮಾಡಿದ ಮಂಡ್ಯದ ಪುಟ್ಟ ಗ್ರಾಮ ಲೋಕಸರದ ವೇಗದ ಬೌಲರ್‌ ಕುಮಾರ್‌ ಲೋಕಸರ ರುದ್ರೇಶ. Kumar LR Kumar Lokasara Rudresha A new bowling star raised in Karnataka

ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಪರ ಆಡಿರುವ ವೇಗದ ಬೌರಲ್‌ ಕುಮಾರ್‌ ಎಲ್‌. ಆರ್.‌ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತಮ ಬೌಲಿಂಗ್ ‌ಪ್ರದರ್ಶಿಸಿ 17ನೇ ವಿಕೆಟ್‌ ಗಳಿಸಿದರೂ ತಂಡ ಫೈನಲ್‌ ತಲಪುವಲ್ಲಿ ವಿಫಲವಾಗಿತ್ತು. ಕುಮಾರ್‌ ನಾಲ್ಕು ಬಾರಿ 3 ವಿಕೆಟ್‌ ಗಳಿಕೆಯ ಸಾಧನೆ ಮಾಡಿರುವುದನ್ನು ಕಂಡಾಗ ಕರ್ನಾಟಕ ರಣಜಿ ತಂಡಕ್ಕೆ ಸೂಕ್ತ ಬೌಲರ್‌ ಎನಿಸುವುದು ಮಾತ್ರವಲ್ಲ, ಭವಿಷ್ಯದಲ್ಲಿ ಭಾರತದ ವೇಗದ ಬೌಲರ್‌ ಆಗುವ ಲಕ್ಷಣ ಹೊಂದಿದ್ದಾರೆ.

ಲೋಕಸರದಿಂದ ಲೋಕ ವಿಖ್ಯಾತಿ: ಮಂಡ್ಯದಿಂದ 9 ಕಿಮೀ ದೂರದಲ್ಲಿರುವ ಪುಟ್ಟ ಗ್ರಾಮ ಲೋಕಸರ. ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿಕೊಂಡಿದ್ದ ಕುಮಾರ್‌ಗೆ ಲೆದರ್‌ ಬಾಲ್‌ ಆಡಲು ಕ್ಲಬ್‌ಗೆ ಸೇರಿಸಿದ್ದು ತಾಯಿ ಉಮಾ. ಅಂಗನವಾಡಿ ಶಿಕ್ಷಕಿಯಾಗಿದ್ದ ಉಮಾ ಅವರು ಮಗನಿಗೆ ಯಾವುದಾದರೂ ಕ್ಲಬ್‌ ಸೇರಿ ಉತ್ತಮ ಕ್ರಿಕೆಟಿಗ ಆಗಲಿ ಎಂದು ಬಯಸಿ ಮಂಡ್ಯದಲ್ಲಿರುವ ಪಿಇಟಿ ಕ್ರಿಕೆಟ್‌ ಅಕಾಡೆಮಿಗೆ ಸೇರಿಸಿದರು. ಕ್ರಿಕೆಟ್‌ನಲ್ಲಿ ಪಳಗಿರುವ ಕೋಚ್‌ ಮಹಾದೇವ ಅವರು ಕುಮಾರನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು.

ಬ್ಯಾಟ್ಸ್ಮನ್‌ ಆಗಲು ಹೋಗಿ ಬೌಲರ್‌ ಆದ: ಮಂಡ್ಯದಲ್ಲಿರುವ ಪಿಇಟಿ ಅಕಾಡೆಮಿಗೆ ಸೇರುವಾಗ ಕುಮಾರ್‌ ಬ್ಯಾಟ್ಸ್ಮನ್‌ ಆಗುವ ಕನಸು ಕಂಡಿದ್ದರು. ಆದರೆ ಮೊದಲ ದಿನವೇ ಈತನ ಚುರುಕು ತನವನ್ನು ನೋಡಿ ನೆಟ್‌ನಲ್ಲಿ ಬೌಲಿಂಗ್‌ ಮಾಡಲು ಹೇಳಿದರು. ಕುಮಾರ್‌ ನೇರ ಮತ್ತು ನಿಖರತೆಯಲ್ಲಿ ಒಂದೆರಡು ಬೌಲಿಂಗ್‌ ಮಾಡುತ್ತಿದ್ದಂತೆ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬ್ಯಾಟ್ಸ್ಮನ್‌ ಕ್ಲೀನ್‌ ಬೌಲ್ಡ್‌ ಆದರು. ಅಲ್ಲಿಂದ ಕೋಚ್‌ ಮಹಾದೇವ ಅವರು ಕುಮಾರನ ಬಗ್ಗೆ ನಂಬಿಕೆ ಇಟ್ಟರು. ಕುಮಾರ್‌ ಎಲ್ಲಿಯೂ ಆ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಕುಮಾರ್‌ ಅವರ ಬೌಲಿಂಗ್‌ ವೇಗ ಬೆಂಗಳೂರು ತಲುಪಿತು. ಬಲಿಷ್ಠರ ನಡುವೆ ಬದುಕುವುದು ಹೇಗೆ ಎಂಬ ಚಿಂತೆ ಕುಮಾರ್‌ ಅವರನ್ನು ಕಾಡಿತ್ತು. ಆದರೆ ವೇಗದ ಅಸ್ತ್ರ ತನ್ನಲ್ಲಿ ಇರುವಾಗ ಚಿಂತಿಸುವ ಅಗತ್ಯವಿಲ್ಲ ಎಂದು ಮನದಲ್ಲೇ ಯೋಚಿಸಿ ದೃಢ ಸಂಕಲ್ಪ ಮಾಡಿದ. 14 ಮತ್ತು 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ. ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ ಕುಮಾರ್‌ಗೆ ಉತ್ತಮ ಅವಕಾಶ ನೀಡಿತು. 14 ವರ್ಷ ವಯೋಮಿತಿಯಲ್ಲಿ ಹೆಚ್ಚು ವಿಕೆಟ್‌ ಸಿಗದಿದ್ದರೂ ನಿಖರ ಬೌಲಿಂಗ್‌ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 16 ವರ್ಷ ವಯೋಮಿತಿಯಲ್ಲಿ ರಾಜ್ಯದ ಪರ ಆಡುವ ಅವಕಾಶ ಸಿಕ್ಕಿತು. ಲೀಗ್ ಪಂದ್ಯಗಳಲ್ಲಿ ಮಿಂಚಿದ ಕುಮಾರ್‌ 22 ವಿಕೆಟ್‌ ಗಳಿಸಿ ಅತಿ ಹೆಚ್ಚು ವಿಕೆಟ್‌ ಗಳಿಕೆಯಲ್ಲಿ ಎರಡನೇ ಸ್ಥಾನಿಯಾದರು. ಇದು ಮಹಾರಾಜ ಟ್ರೋಫಿಗೆ ಅವಕಾಶ ಮಾಡಿಕೊಟ್ಟಿತು.

ಬೆಂಚು ಬಿಸಿ ಮಾಡಿಸಿದವರೆದರೇ ಸಾಧನೆ! : ಆರಂಭದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಪರ ಮಹಾರಾಜ ಟ್ರೋಫಿಯಲ್ಲಿ ಕುಮಾರ್‌ಗೆ ಅವಕಾಶ ಕೊಡಲಿಲ್ಲ. ಆದರೆ ಈ ಬಾರಿ ಹುಬ್ಬಳ್ಳಿ ಟೈಗರ್ಸ್‌ ಪರ ಅವಕಾಶ ಸಿಕ್ಕಿತು. ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೆ ಮುನ್ನ ಇಬ್ಬರು ಬೌಲರ್‌ಗಳು ಪರ್ಪಲ್‌ ಕ್ಯಾಪ್‌ ಗಳಿಸಲು ಮುನ್ನಡೆಯಲ್ಲಿದ್ದರು. ಕುಮಾರ್‌ 14 ವಿಕೆಟ್‌ಗಳನ್ನು ಗಳಿಸಿ ಮೂರನೇ ಸ್ಪರ್ಧಿಯಾಗಿದ್ದರೆ, ಟೈಗರ್ಸ್‌ ತಂಡದ ಇನ್ನೋರ್ವ ಬೌಲರ್‌ ಮನ್ವಂತ್‌ ಕುಮಾರ್‌ 15 ಮತ್ತು ಬೆಂಗಳೂರಿನ ಲಾವಿಷ್‌ ಕೌಶಲ್‌ 16 ವಿಕೆಟ್‌ ಗಳಿಸಿ ಎರಡನೇ ಮತ್ತು ಮೊದಲ ಸ್ಥಾನದಲ್ಲಿದ್ದರು. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಕುಮಾರ್‌ ಎಲ್‌. ಆರ್.‌ ಮೂರು ವಿಕೆಟ್‌ ಗಳಿಸಿ ಪರ್ಪಲ್‌ ಕ್ಯಾಪ್‌ ತನ್ನದಾಗಿಸಿಕೊಂಡರು. ಅವಕಾಶ ಕೊಡದ ತಂಡದ ವಿರುದ್ಧವೇ ಸಾಧನೆ ಮಾಡುದಿದೆಯಲ್ಲ, ಅದೊಂದು ಅದ್ಭುತ ಅನುಭವ.

“ನಾನು ವಿಕೆಟ್‌ ಗಳಿಸಿದಾಗ ಖುಷಿ ಪಡುತ್ತೇವೆ, ಆದರೆ ನನ್ನ ಗುರಿ ಹೆಚ್ಚಾಗಿ ಪಂದ್ಯದ ಫಲಿತಾಂಶದ ಮೇಲಿರುತ್ತದೆ. ಟೀಮ್‌ ಗೇಮ್‌ನಲ್ಲಿ ವೈಯಕ್ತಿಕ ಸಾಧನೆಗಿಂತ ತಂಡದ ಸಾಧನೆ ಮುಖ್ಯವಾಗಿರುತ್ತದೆ. ಪರ್ಪಲ್‌ ಕ್ಯಾಪ್‌ ಬಗ್ಗೆ ಯೋಚಿಸಿರಲಿಲ್ಲ. ನಿಖರ ಬೌಲಿಂಗ್‌ ಮಾಡುವುದು ನನ್ನ ಗುರಿಯಾಗಿತ್ತು. ಅಂತಿಮವಾಗಿ 17 ವಿಕೆಟ್‌ ಸಿಕ್ಕಿರುವುದು ಖುಷಿ ಇದೆ,” ಎಂದು ಕುಮಾರ್‌ ಹೇಳಿದ್ದಾರೆ.

ಅಪ್ಪ ಅಮ್ಮ ಇಲ್ಲ, ಅವರ ಆದರ್ಶ ಜೊತೆಗಿದೆ: 2022ರ ವರ್ಷ ಕುಮಾರ್‌ ಪಾಲಿಗೆ ಅತ್ಯಂತ ದುರಂತದ ವರ್ಷವಾಗಿ ಪರಿಣಮಿಸಿತು. ತಾಯಿ ಉಮಾ ಅವರು ಕ್ಯಾನ್ಸರ್‌ನಿಂದ ಮೃತಪಟ್ಟರೆ ಕೆಲವು ತಿಂಗಳಲ್ಲೇ ತಂದೆ ರುದ್ರೇಶ್‌ ಹೃದಯಾಘಾತದಿಂದ ಸಾವನ್ನಪ್ಪಿದರು. ಇಬ್ಬರು ಸಹೋದರಿಯರ ಜವಾಬ್ದಾರಿ ಕುಮಾರ್‌ ಅವರ ಮೇಲೆ ಬಿತ್ತು. ಅಕ್ಕ ಅಂಜಲಿಗೆ ಮದುವೆ ಮಾಡಿಸಿದ್ದು, ಅಕ್ಷತಾ ಎಂಕಾಮ್‌ ಪದವಿ ಮುಗಿಸಿದ್ದಾರೆ. ಕುಮಾರ್‌ ಕೂಡ ಬಿಕಾಂ ಪದವೀಧರ. “ನಮ್ಮಪ್ಪ ಕೃಷಿಕರು. ತಾಯಿ ಅಂಗನವಾಡಿ ಟೀಚರ್‌. ನನ್ನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದರು. ಟೆನಿಸ್‌ ಬಾಲ್‌ ಆಡುತ್ತಿದ್ದ ನನ್ನನ್ನು ಅಕಾಡೆಮಿಗೆ ಕಳುಹಿಸಿದರು. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಆಗಿತ್ತು. ಒಂದೇ ವರ್ಷದಲ್ಲಿ ಇಬ್ಬರೂ ನಮ್ಮನ್ನಗಲಿದರು. ಅವರು ಇಲ್ಲ ಎಂಬ ಕೊರಗು ಯಾವಾಗಲೂ ಕಾಡುತ್ತಿರುತ್ತದೆ, ಆದರೆ ಅವರು ಹಾಕಿಕೊಟ್ಟ ಬದುಕಿನ ಆದರ್ಶ ಸದಾ ನನ್ನೊಂದಿಗೆ ಇರುತ್ತದೆ. ಅದನ್ನು ಕಾಯ್ದುಕೊಳ್ಳುವ ಜವಾಬ್ದಾರಿ ನನ್ನದು. ಬದುಕಿನ ಇನ್ನಿಂಗ್ಸ್‌ ಮುಗಿದ ಮೇಲೆ ಇಲ್ಲಿಂದ ಎಲ್ಲರೂ ನಿರ್ಗಮಿಸಬೇಕು, ಆದರೆ ನಮ್ಮ ಆದರ್ಶಗಳು ಉಳಿದುಕೊಳ್ಳುತ್ತವೆ, ನಮ್ಮ ಸಾಧನೆ ನಮ್ಮ ಆದರ್ಶ ಉಳಿದುಕೊಳ್ಳುತ್ತದೆ. ಆ ನೆಲೆಯಲ್ಲಿ ನಾವು ಬದುಕಬೇಕು,” ಎಂದು ಕುಮಾರ್‌ ಅತ್ಯಂತ ಮಾರ್ಮಿಕವಾಗಿ ನುಡಿದರು.

“ರಣಜಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬೌಲರ್‌ಗಳು ಹಲವಾರು ಬಾರಿ ಜಯದ ರೂವಾರಿ ಎನಿಸಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಅದೇ ರೀತಿ ರಣಜಿಯಲ್ಲಿ ರಾಜ್ಯದ ತಂಡದ ಪರ ಆಡಿ, ಬೌಲಿಂಗ್‌ನಲ್ಲಿ ಮಿಂಚಿ ರಾಜ್ಯಕ್ಕೆ ರಣಜಿ ಪ್ರಶಸ್ತಿಯನ್ನು ಮರಳಿ ತರಬೇಕೆಂಬುದು ಸದ್ಯದ ಗುರಿ,” ಎನ್ನುತ್ತಾರೆ ಕುಮಾರ್.‌

ಸಕ್ಕರೆಯ ನಾಡು ಮಂಡ್ಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಭುತ್ವ ಸಾಧಿಸಿದೆ, ಕುಮಾರ್‌ ಮಂಡ್ಯದ ಪುಟ್ಟ ಹಳ್ಳಿ ಲೋಕಸರದಿಂದ ಬಂದವ. ಕುಮಾರ್‌ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿ ಭಾರತ ತಂಡವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಬೌಲರ್‌ ಆಗಿ ಬೆಳೆಯಲಿ ಎಂಬುದೇ ಕನ್ನಡಿಗರ ಹಾರೈಕೆ.

Related Articles