Thursday, November 21, 2024

ಮಾದರಿಯಾದ ಮಂಜುನಾಥರ ಮಾಗಡಿ ಕ್ರಿಕೆಟ್‌ ಅಕಾಡೆಮಿ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಆತ ವೈಎಂಸಿಎ ಕ್ರಿಕೆಟ್‌ ತಂಡದಲ್ಲಿ ಆರಂಭಿಕ ಆಟಗಾರ, ಆಫ್‌ ಸ್ಪಿನ್‌ ಬೌಲರ್‌. ಕ್ರಿಕೆಟ್‌ ಬದುಕಿನಲ್ಲಿ ಯಶಸ್ಸು ಕಾಣಬೇಕೆಂದು ಕನಸು ಕಂಡವ. ಆದರೆ ವೃತ್ತಿಪರ ಕ್ರಿಕೆಟ್‌ನಲ್ಲಿ ಹೆಚ್ಚು ಸಾಧನೆ ಮಾಡಲಾಗಲಿಲ್ಲ. ತನ್ನಿಂದಾಗದ ಸಾಧನೆಯನ್ನು ತನ್ನಂತೆ ಇರುವ ಬಡ ಮಕ್ಕಳಿಂದ ಮಾಡಿಸಬೇಕೆಂಬ ಛಲ ಮಾತ್ರ ದೂರವಾಗಲಿಲ್ಲ, ಇದಕ್ಕಾಗಿಯೇ ಬೆಂಗಳೂರು ಗ್ರಾಮಾಂತರದಲ್ಲಿ ಒಂದಿಷ್ಟು ಮಕ್ಕಳನ್ನು ಒಗ್ಗೂಡಿಸಿ ಕ್ರಿಕೆಟ್‌ ತರಬೇತಿ ನೀಡಿದ, ತರಬೇತಿಗೆ ಅಗತ್ಯವಿರುವ ಕೋಚಿಂಗ್‌ ತರಬೇತಿ ಪಡೆದ, ಮಾಗಡಿ ಕ್ರಿಕೆಟ್‌ ಅಕಾಡೆಮಿ ಹೆಸರಿನಲ್ಲಿ ಒಂದು ಕ್ರಿಕೆಟ್‌ ತರಬೇತಿ ಅಕಾಡೆಮಿ ಸ್ಥಾಪಿಸಿದ ಇಂದು ಈ ಆ ಅಕಾಡೆಮಿ ಕಿರಿಯರ ಕ್ರಿಕೆಟ್‌ಗೆ ಪ್ರತಿಭಾವಂತ ಆಟಗಾರರನ್ನು ನೀಡುತ್ತಿದೆ. ಇದು ಬಡ ಮಕ್ಕಳಿಗೆ ಉಚಿತವಾಗಿ ಕ್ರಿಕೆಟ್‌ ತರಬೇತಿ ನೀಡುತ್ತಿರುವ ಮಾಗಡಿ ಕ್ರಿಕೆಟ್‌ ಅಕಾಡೆಮಿಯ (Magadi Cricket Academy) ಸ್ಥಾಪಕ, ಕೋಚ್‌ ಮಂಜುನಾಥ್‌ ಕೆ. (Manjunath K) ಅವರ ಬದುಕಿನ ಕುರಿತ ಮುನ್ನುಡಿ.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಮಂಜುನಾಥ್‌ ಕ್ರಿಕೆಟ್‌ ಬದುಕಿಗೆ ನೆರವಾದವರು ತಾಯಿ ಶಾರದ. ಮನೆ ಕೆಲಸ ಮಾಡಿಕೊಂಡು ಮಗನ ಶಿಕ್ಷಣ ಹಾಗೂ ಕ್ರಿಕೆಟ್‌ಗೆ ಆ ತಾಯಿ ಎಲ್ಲ ರೀತಿಯ ನೆರವು ನೀಡುತ್ತಾರೆ. ತನ್ನಂತೆ ಇತರ ಮಕ್ಕಳ ಬದುಕು ಆಗಬಾರದು, ಬಡ ಮಕ್ಕಳು ಕ್ರಿಕೆಟ್‌ ಆಡಬೇಕು. ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮಂಜುನಾಥ್‌ 2010ರಲ್ಲಿ ಮಾಗಡಿ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿದರು. ಪುಟ್ಟ ಮಕ್ಕಳಿಗೆ ತರಬೇತಿ ನೀಡುತ್ತ ಒಂದೆರಡು ವರ್ಷ ತಾನೂ ವಿವಿಧ ತಂಡಗಳಲ್ಲಿ ಆಡಿದರು. ಕ್ರಿಕೆಟ್‌ನಲ್ಲಿ ಮುಂದುವರಿಯಬೇಕಾದರೆ ರನ್‌, ವಿಕೆಟ್‌, ಫೀಲ್ಡಿಂಗ್‌ ಮತ್ತು ಫಿಟ್ನೆಸ್‌ ಜೊತೆಯಲ್ಲಿ “ಬೇರೇನೋ ಬೇಕು” ಎಂಬುದು ಸ್ಪಷ್ಟವಾದಾಗ ಅಕಾಡೆಮಿಯಲ್ಲಿ ಪೂರ್ಣಕಾಲಿಕ ಕೋಚ್‌ ಆಗಿ ಮುಂದುವರಿದರು.

 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ್‌ ವಜ್ರವೇಲು ಅವರನ್ನು ಮಂಜುನಾಥ್‌ ಸದಾ ಸ್ಮರಿಸುತ್ತಾರೆ. “ಶಂಕರಣ್ಣ ನನಗೆ ಕೋಚ್‌ ಆಗಲು ಅಗತ್ಯ ಇರುವ ಕೋರ್ಸ್‌ ಮಾಡುವಂತೆ ಸೂಚಿಸಿ ಅಗತ್ಯವಿರುವ ನೆರವು ನೀಡಿದರು. ಅದರಂತೆ “ಲೆವೆಲ್‌ ಒ” ಕೋಚಿಂಗ್‌ ಕೋರ್ಸ್‌ ಮಾಡಿದೆ, ಇದರಿಂದ ತರಬೇತಿ ನೀಡಲು ಸಹಾಯವಾಯಿತು,” ಎಂದು ಮಂಜುನಾಥ್‌ ಅವರು ಶಂಕರ್‌ ವಜ್ರವೇಲು ಅವರನ್ನು ಸ್ಮರಿಸುತ್ತಾರೆ.

ಹಣಕ್ಕಾಗಿ ಅಕಾಡೆಮಿ ಸ್ಥಾಪಿಸಿಲ್ಲ: ಬೆಂಗಳೂರಿನಲ್ಲಿ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸುವುದೆಂದರೆ ಅದು ಹಣ ಮಾಡುವ ಉದ್ದೇಶ ಎಂಬುದು ಸಾಮಾನ್ಯ ಲೆಕ್ಕಾಚಾರ. ಆದರೆ ಮಂಜುನಾಥ್‌ ಅಕಾಡೆಮಿ ಸ್ಥಾಪಿಸಿರುವುದು ಈ ಉದ್ದೇಶಕ್ಕಾಗಿ ಅಲ್ಲ. ಬದಲಾಗಿ ತನ್ನ ಅಕಾಡೆಮಿಯಲ್ಲಿ ಕಲಿತ ಯಾರಾದರೂ ಒಬ್ಬ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಬೇಕೆಂದು. “ಅಕಾಡೆಮಿ ಸ್ಥಾಪಿಸಿ ಹಣ ಮಾಡಬೇಕೆಂಬ ಉದ್ದೇಶದಿಂದ ಸ್ಥಾಪಿಸಿಲ್ಲ. ಕ್ರಿಕೆಟ್‌ನಲ್ಲಿ ನನ್ನ ಮಗ ಉತ್ತಮ ಸಾಧನೆ ಮಾಡಬೇಕು. ದೇಶದ ಪರ ಆಡಬೇಕೆಂಬುದು ನನ್ನಮ್ಮನ ಆಸೆಯಾಗಿತ್ತು. ಅದಕ್ಕಾಗಿ ನನ್ನಮ್ಮ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಉತ್ತಮ ಪ್ರದರ್ಶನ ನೀಡಿದರೂ ನಮ್ಮಂಥ ಬಡ ಆಟಗಾರರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇದರಿಂದ ಬೇಸತ್ತು ಕ್ರಿಕೆಟ್‌ ತೊರೆದೆ. ಆದರೆ ನನ್ನ ಅಕಾಡೆಮಿಯಲ್ಲಿ ಕಲಿತ ಒಬ್ಬರಾದರೂ ದೇಶವನ್ನು ಪ್ರತಿನಿಧಿಸಲಿ, ಆ ಮೂಲಕವಾದರೂ ನನ್ನಮ್ಮನ ಆಸೆ ಈಡೇರಬಹುದು ಎಂಬ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಿದೆ. ರಾಜ್ಯ ಕಿರಿಯರ ತಂಡದಲ್ಲಿ ನಮ್ಮ ಅಕಾಡೆಮಿಯ ಹಲವು ಆಟಗಾರರು ಆಡಿದ್ದಾರೆ, ಆಡುತ್ತಿದ್ದಾರೆ, ಅದೇ ಖುಷಿ,” ಎಂದು ಮಂಜುನಾಥ್‌ ಹೇಳಿದ್ದಾರೆ.

ಅಕಾಡೆಮಿಗೆ ನೆರವಾದ ಸಚಿವ ಆರ್‌. ಅಶೋಕ್‌:

ಬಡ ಕುಟುಂಬದಿಂದ ಬಂದ ಮಂಜುನಾಥ್‌ಗೆ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಯುವ ಆಟಗಾರನ ಬೆಂಬಲಕ್ಕೆ ನಿಂತವರು ರಾಜ್ಯ ಕಂದಾಯ ಸಚಿವ ಆರ್‌. ಅಶೋಕ್‌. ಇದರಿಂದಾಗಿ 4 ನೆಟ್‌ಗಳಿಂದ ಕೂಡಿದ ಮತ್ತು 2 ಬೌಲಿಂಗ್‌ ಮೆಷಿನ್‌ ಸೌಲಭ್ಯವನ್ನು ಒಳಗೊಂಡಿರುವ ಅಕಾಡೆಮಿಯಲ್ಲಿ 80ಕ್ಕೂ ಹೆಚ್ಚು ಯುವ ಆಟಗಾರರು ತರಬೇತಿ ಪಡೆಯಲು ಸಾಧ್ಯವಾಯಿತು. “ಸಚಿವರಾದ ಆರ್.‌ ಅಶೋಕ್‌ ನೆರವು ನೀಡದೇ ಇರುತ್ತಿದ್ದರೆ ಈ ಅಕಾಡೆಮಿ ಸ್ಥಾಪನೆ ಕಷ್ಟಕರವಾಗಿರುತ್ತಿತ್ತು. ಬಡ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದನ್ನು ಕಂಡು ಸಚಿವರು ತಮ್ಮ ನೆರವಿನ ಹಸ್ತ ಚಾಚಿದರು,” ಎಂದು ಮಂಜುನಾಥ್‌ ಸ್ಮರಿಸಿದ್ದಾರೆ.

13 ವರ್ಷಗಳಲ್ಲಿ 20 ಆಟಗಾರರು!

ಮಂಜುನಾಥ್‌ ಯಾವುದೇ ಸ್ಟಾರ್‌ ಆಟಗಾರರಲ್ಲ. ಆದರೆ ಕ್ರಿಕೆಟ್‌ ತರಬೇತಿಯನ್ನು ತಪಸ್ಸಿನಂತೆ ಅಳವಡಿಸಿಕೊಂಡು ಬಂದವರು. ಕೊರೋನಾಕ್ಕೆ ಮುನ್ನ ಅಕಾಡೆಮಿಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದರು. ಈಗ ಸಂಖ್ಯೆ 80 ಮಾತ್ರ. ಅಕಾಡೆಮಿಯಲ್ಲಿ ಎಷ್ಟು ಜನರಿದ್ದಾರೆ ಎಂಬುದು ಕಮರ್ಷಿಯಲ್‌ ಯೋಚನೆ. ಆದರೆ ಅಕಾಡೆಮಿಂದ ಎಷ್ಟು ಆಟಗಾರರು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ ಎಂಬುದು ಗಮನಾರ್ಹ. ಕೆಪಿಎಲ್‌ ಆಡಿದ್ದ ಕರಣ್‌ ಎಂ.ಸಿ, U19 ಆಟಗಾರ ನಾಗೇಶ್‌ ಮತ್ತು ಮಂಗಳೂರು ಪ್ರೀಮಿಯರ್‌ ಲೀಗ್‌ ಆಟಗಾರ ಪ್ರಸನ್ನ ಅವರು ಅಕಾಡೆಮಿಯಲ್ಲಿ ಮಂಜುನಾಥ್‌ ಅವರೊಂದಿಗೆ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕಳೆದ 13 ವರ್ಷಗಳಲ್ಲಿ 20ಕ್ಕೂ ಹೆಚ್ಚು ಯುವ ಆಟಗಾರರು ರಾಜ್ಯ ಕ್ರಿಕೆಟ್‌ ಸಂಸ್ಥೆಯ ವಿವಿಧ ವಯೋಮಿತಿಯ ತಂಡಗಳಲ್ಲಿ ಸ್ಥಾನ ಪಡೆದಿರುತ್ತಾರೆ. ಇದರಲ್ಲಿ ಕೆಲವರು ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡಿದಿದ್ದಾರೆ.

ಆದಿತ್ಯ ಮಣಿ U14 ರಾಜ್ಯ ತಂಡದಲ್ಲಿ ಆಡಿದ ಆಟಗಾರ, ನಂತರ U16, U19 ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದವ. ಈಗ ಎರಡನೇ ಡಿವಿಜನ್‌ ಆಡುತ್ತಿರುವ ಆದಿತ್ಯ ಮಣಿ U25 ವಲಯ ಮಟ್ಟಕ್ಕೆ ಆಯ್ಕೆಯಾದ ಬೌಲರ್‌. ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಕೂಡ ಹೌದು.

ವಶೀಷ್ಠ ರಾಮ್‌ ಪ್ರಿಯ 2015ರಲ್ಲಿ U16 ರಾಜ್ಯ ತಂಡಕ್ಕೆ ಆಯ್ಕೆಯಾದ ಆಟಗಾರ, ಬೆಂಗಳೂರು ಕ್ರಿಕೆಟರ್ಸ್‌ ತಂಡದಲ್ಲಿ ಎರಡನೇ ಡಿವಿಜನ್‌ ಪಂದ್ಯಗಳನ್ನು ಆಡಿಸಲು ಮಾತುಕತೆ ನಡೆಸಲಾಗುತ್ತಿದೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.

ಮಧ್ಯಮ ವೇಗಿ ಅನನ್ಯ ಸುಭಾಷ್‌ 2016-17ರಲ್ಲಿ ರಾಜ್ಯ U16 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರುಗಳ ಜೊತೆಯಲ್ಲಿ ರತನ್‌ ಬಿ,ಆರ್‌,ನಕುಲ್‌ ಯು, ಪ್ರತೀಕ್‌ ಕುಲಕರ್ಣಿ, ಹರ್ಷ ಪೊಚುದಾರ್‌, ಸಂಚಿತ್‌, ಮಣಿಕಂಠ ಹಾಗೂ ಭವಿಷ್‌ ಸೇರಿದಂತೆ ವಲಯ ಮಟ್ಟದಲ್ಲಿ ಆಡಿದ ಅಕಾಡೆಮಿಯ ಪ್ರತಿಭಾವಂತ ಆಟಗಾರರು. “ಇಲ್ಲಿ ತರಬೇತಿ ಪಡೆದ ಮಕ್ಕಳೇ ನಮ್ಮ ಬ್ರಾಂಡ್‌ ಆಗಬೇಕೇ ಹೊರತು ನಾವು ಬ್ರಾಂಡ್‌ ಆಗಬಾರದು,” ಎನ್ನುತ್ತಾರೆ ಮಂಜುನಾಥ್‌.

ಬಡ ಮಕ್ಕಳಿಗೆ ಉಚಿತ ತರಬೇತಿ:

ಮಂಜುನಾಥ್‌ ಕಷ್ಟಗಳ ಹಾದಿಯಲ್ಲಿ ಸಾಗಿ ಬಂದವರು. ಅವರಿಗೆ ತನ್ನ ಸುತ್ತಮುತ್ತಲಿರುವ ಬಡಜನರ ಬಗ್ಗೆ ಅರಿವಿದೆ. ಆಡುವ ಹಂಬಲವಿದ್ದರೂ ಅದೆಷ್ಟೋ ಮಕ್ಕಳು ಕ್ರಿಕೆಟ್‌ನಿಂದ ದೂರ ಉಳಿಯುತ್ತಾರೆ, ಕಾರಣ ಆರ್ಥಿಕ ಸಮಸ್ಯೆ. ಇದನ್ನು ಗಮನದಲ್ಲಿಟ್ಟುಕೊಂಡ ಮಂಜುನಾಥ್‌ ತನ್ನ ಸುತ್ತಲಿನ ರಿಕ್ಷಾ ಚಾಲಕರು ಹಾಗೂ ಇತರ ಬಡ ಕಾರ್ಮಿಕರ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. “ನನ್ನಮ್ಮ ನನಗಾಗಿ ಪಟ್ಟ ಕಷ್ಟ ನನಗೆ ನೆನಪಿದೆ. ಬಡ ಪ್ರತಿಭಾವಂತ ಮಕ್ಕಳು ಕ್ರಿಕೆಟ್‌ ತರಬೇತಿಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಪುಟ್ಟ ನೆರವು. ಹತ್ತಕ್ಕೂ ಹೆಚ್ಚು ಮಕ್ಕಳು ಇಲ್ಲಿ ಉಚಿತವಾಗಿ ತರಬೇತಿ ಪಡೆಯುತ್ತಿದ್ದಾರೆ,” ಎಂದು ಮಂಜುನಾಥ್‌ ತಿಳಿಸಿದರು.

ಉಲ್ಲಾಸ ತಂಡ ನ್ಯೂಜಿಲೆಂಡ್‌ ಆಟಗಾರ ಮ್ಯಾಥ್ಯೂ ಸಿಂಕ್ಲೈರ್‌:

ಖ್ಯಾತ ಆಟಗಾರರೊಬ್ಬರು ಒಂದು ಕ್ರಿಕೆಟ್‌ ಅಕಾಡೆಮಿಗೆ ಭೇಟಿ ನೀಡಿದರೆಂದರೆ ಅದು ಆ ಅಕಾಡೆಮಿಯ ಬ್ರ್ಯಾಂಡ್‌ ಮೌಲ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿಯೇ ಕೆಲವು ಅಕಾಡೆಮಿಗಳು ಆಟಗಾರರನ್ನು ಕರೆಸಿಕೊಳ್ಳುವುದಿದೆ. ಆದರೆ ಮಾಗಡಿ ಕ್ರಿಕೆಟ್‌ ಅಕಾಡೆಮಿ ಬಗ್ಗೆ ತಿಳಿದು ಅಲ್ಲಿಗೆ ಭೇಟಿ ನೀಡಿದ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಮ್ಯಾಥ್ಯೂ ಸಿಂಕ್ಲೈರ್‌ ಇಲ್ಲಿನ ಯುವ  ಕ್ರಿಕೆಟಿಗರಲ್ಲಿ ಸಂಭ್ರಮವನ್ನುಂಟು ಮಾಡಿದರು. ಮೂರು ವರ್ಷಗಳ ಹಿಂದೆ ಅಕಾಡೆಮಿಗೆ ಭೇಟಿ ನೀಡಿದ ಆಸ್ಟ್ರೇಲಿಯಾ ಸಂಜಾತ, ನ್ಯೂಜಿಲೆಂಡ್‌ ಆಟಗಾರ ಸಿಂಕ್ಲೈರ್‌ ಇಲ್ಲಿಯ ಯುವ ಆಟಗಾರರಿಗೆ ಕ್ರಿಕೆಟ್‌ ಬಗ್ಗೆ ಕೆಲ ಹೊತ್ತು ಸಲಹೆಗಳನ್ನು ನೀಡಿದರು.

ರಾಹುಲ್‌ ದ್ರಾವಿಡ್‌ ಅಭಿಮಾನಿ: ಕ್ರಿಕೆಟ್‌ ಜಗತ್ತಿನಲ್ಲಿ ಈಗಲೂ ರಾಹುಲ್‌ ದ್ರಾವಿಡ್‌ ಅವರ ಅಭಿಮಾನಿಗಳೇ ಹೆಚ್ಚು. ಮಂಜುನಾಥ್‌ ಕೂಡ ದ್ರಾವಿಡ್‌ ಅಭಿಮಾನಿ. “ಕ್ರಿಕೆಟ್‌ ಆಡಿದರೆ ರಾಹುಲ್‌ ದ್ರಾವಿಡ್‌ ಅವರಂತೆ ಆಡಬೇಕು,” ಎನ್ನುವ ಮಂಜುನಾಥ್‌ ತನ್ನ ಮಗುವಿಗೆ “ರಾಹುಲ್‌” ಎಂದೇ ಹೆಸರಿಟ್ಟಿದ್ದಾರೆ.ಮಾಗಡಿ ಕ್ರಿಕೆಟ್‌ ಅಕಾಡೆಮಿ ಯಶಸ್ಸಿನಲ್ಲಿ ಮಂಜುನಾಥ್‌ ಅವರ ಪತ್ನಿ ಗೀತಾ ಡಿ. ನಾಯ್ಕ್‌ ಅವರ ಪಾತ್ರವೂ ಪ್ರಮುಖವಾದುದು.

ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕವರ ಬದುಕಿಗಿಂತ ಅವಕಾಶ ಸಿಗದೆ ಕ್ರಿಕೆಟ್‌ಗಾಗಿ ದುಡಿಯುತ್ತಿರುವವರ ಬದುಕು ಅರ್ಥಪೂರ್ಣ. ಅಂತಹ ಅರ್ಥಪೂರ್ಣ ಬದುಕನ್ನು ಸಾಗಿಸುತ್ತಿರುವ ಮಂಜುನಾಥ್‌ ಅವರು ಮುಂಬರುವ ದಿನಗಳಲ್ಲಿ ಮಾಗಡಿ ಕ್ರಿಕೆಟ್‌ ಅಕಾಡೆಮಿ ಆಶ್ರಯದಲ್ಲಿ U14, U16 ಕ್ರಿಕೆಟಿಗರಿಗಾಗಿ ಸೌತ್‌ ಬೆಂಗಳೂರು ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲಿದ್ದಾರೆ. ಎಲ್ಲರ ಪ್ರೋತ್ಸಾಹ ಇರಲಿ.

 

Related Articles