ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಹಾಗೂ ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಜಾಸ್ ಬೆಂಗಳೂರು ಮತ್ತು ಬಿಎಸಿಎ-ಕೆಆರ್‌ಎಸ್ ತಂಡಗಳು ಫೈನಲ್ ತಲುಪಿವೆ. Maharaja Bengaluru and BACA-KRS reached Final of the Tournament. ಟೂರ್ನಿಯ ಎರಡನೇ ದಿನದಲ್ಲಿ ನಡೆದ ಪಂದ್ಯಗಳಲ್ಲಿ ಮೊದಲು ಮಹಾರಾಜಾಸ್ ಬೆಂಗಳೂರು ತಂಡ ಚೊಲಾಸ್ ತಮಿಗಳುನಾಡು ವಿರುದ್ಧ ಜಯ ಗಳಿಸಿದರೆ, ಬಿಎಸಿಎ-ಕೆಆರ್‌ಎಸ್ ತಂಡ ಗೋವಾದ ವಿರುದ್ಧ ಜಯ ಗಳಿಸಿತು.
ಬಿಎಸಿಎ-ಕೆಆರ್‌ಎಸ್ ಹಾಗೂ ಚೋಲಾ ತಮಿಳುನಾಡು ನಡುವಿನ ಪಂದ್ಯದಲ್ಲಿ ಬಿಎಸಿಎ-ಕೆಆರ್‌ಎಸ್ 5 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿತು, ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬಿಎಸಿಎ-ಕೆಆರ್‌ಎಸ್ ಎದುರಾಳಿ ತಮಿಳುನಾಡು ತಂಡವನ್ನು 131 ರನ್‌ಗೆ ಕಟ್ಟಿ ಹಾಕಿತು, ತಮಿಳುನಾಡು ಪರ ಸೆಂಥಿಲ್ ಕುಮಾರ್ (35), ವೆಂಕಟೇಶ್ (30) ಹಾಗೂ ಅಶೋಕ್ (22) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬಿಎಸಿಎ-ಕೆಆರ್‌ಎಸ್ ಪರ ಗಿರೀಶ್ 6 ರನ್‌ಗೆ 2 ವಿಕೆಟ್ ಗಳಿಸಿದರೆ, ಪ್ರದೀಪ್ ಮತ್ತು ವಿಜಯ್ ತಲಾ 1 ವಿಕೆಟ್ ಗಳಿಸಿದರು.
132 ರನ್ ಜಯದ ಗುರಿಹೊತ್ತ ಬಿಎಸಿಎ-ಕೆಆರ್‌ಎಸ್ ಪರ ನವೀನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 38 ರನ್ ಗಳಿಸಿದರು. ಸುಹಾನ್ 28 ಮತ್ತು ಪ್ರದೀಪ್ ಗೋಡ್ಬಳೆ 19 ರನ್ ಗಳಿಸಿ ತಂಡಕ್ಕೆ 5 ವಿಕೆಟ್ ಜಯ ತಂದಿತ್ತರು. ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ ಬಿಎಸಿಎ-ಕೆಆರ್‌ಎಸ್ ಫೈನಲ್ ಪ್ರವೇಶಿಸಿತು. ಚೋಳಾ ತಮಿಳುನಾಡು ಪರ ರಫಿಯುದ್ದೀನ್ 10 ರನ್‌ಗೆ 2 ವಿಕೆಟ್ ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ಚೋಳಾ ತಮಿಳುನಾಡು ಫೈನಲ್ ತಲಪುವಲ್ಲಿ ವಿಫಲವಾಯಿತು.
ಫೈನಲ್‌ಗೆ ಮಹಾರಾಜಾಸ್ ಬೆಂಗಳೂರು:
ದಿನದ ಎರಡನೇ ಪಂದ್ಯದಲ್ಲಿ ಮಹಾರಾಜಾಸ್ ಬೆಂಗಳೂರು ತಂಡ ಕ್ರಿಕ್‌ಕಾಕರ್ಸ್ ಗೋವಾ ವಿರುದ್ಧ 7 ವಿಕೆಟ್‌ಅಂತರದಲ್ಲಿ ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ದಿನದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ತಂಡ ಗೋವಾ ತಂಡವನ್ನು 88 ರನ್‌ಗೆ ಕಟ್ಟಿ ಹಾಕಿತು, ಗೋವಾ ಪರ ವಿನೋದ್ (33) ಮತ್ತು ಸುನಿಲ್ (26) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಉಳಿದ ಆಟಗಾರರು ಬೆಂಗಳೂರು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿ 16.5 ಓವರ್‌ಗಳಲ್ಲಿ ತಂಡ 88 ರನ್‌ಗೆ ಸರ್ವ ಪತನ ಕಂಡಿತು. ಬೆಂಗಳೂರು ತಂಡದ ಪರ ನಾಯಕ ರಾಜಗೋಪಾಲ್ ನಾಯ್ಡು 13 ರನ್‌ಗೆ 4 ವಿಕೆಟ್ ಗಳಿಸಿ ಜಯದ ರೂವಾರಿ ಎನಿಸಿದರು. ರಾಜೇಶ್ ಹಾಗೂ ರಾಘವೇಂದ್ರ ತಲಾ 2 ವಿಕೆಟ್ ಗಳಿಸಿದರು.
89 ರನ್ ಜಯದ ಗುರಿಹೊತ್ತ ಬೆಂಗಳೂರು ಪರ ನಾಗೇಂದ್ರ 26, ಶೇಷಗಿರಿ 21 ಹಾಗೂ ಸತೀಶ್ 20 ರನ್ ಗಳಿಸುವ ಮೂಲಕ ತಂಡ 12,5 ಓವರ್‌ಗಳಲ್ಲೇ ಗುರಿ ತಲುಪಿತು. ಗೋವಾ ಮತ್ತು ಬೆಂಗಳೂರು ತಂಡಗಳು ತಲಾ ಒಂದು ಪಂದ್ಯದಲ್ಲಿ ಜಯ ಗಳಿಸಿದ್ದರೂ ರನ್ ಸರಾಸರಿಯ ಆಧಾರದ ಮೇಲೆ ಬೆಂಗಳೂರು ಫೈನಲ್ ಪ್ರವೇಶಿಸಿತು.