Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ರೀಡಾ ವೃತ್ತಿಪರತೆ: ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ನಡುವೆ ಒಪ್ಪಂದ

ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಉದ್ದೇಶದಿಂದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಮೂಲಕ ಕ್ರೀಡಾ ಉದ್ಯಮಕ್ಕೆ ಬೇಕಾದ ಕೌಶಲ್ಯಪೂರ್ಣ ಕ್ರೀಡಾ ವೃತ್ತಿಪರರನ್ನು ಬೆಳೆಸಲು ಮತ್ತು ಕ್ರೀಡಾಪಟುಗಳಿಗೆ ಅವರ ಕ್ರೀಡಾದಿನಗಳನ್ನು ಹೊರತುಪಡಿಸಿ ಅತ್ಯುತ್ತಮ ವೃತ್ತಿ ಮಾರ್ಗಗಳನ್ನು ಹೊಂದಲು ನೆರವಾಗುವ ಸಮಗ್ರ ಶೈಕ್ಷಣಿಕ ಮತ್ತು ಮೂಲಸೌಕರ್ಯ ವ್ಯವಸ್ಥೆ ಒದಗಿಸಲಾಗುತ್ತದೆ. MAHE and TENVIC Sports sign landmark MoU to build India’s Next Generation sports professionals.

ಶೈಕ್ಷಣಿಕ ಮತ್ತು ಕ್ರೀಡಾ ಉದ್ಯಮದ ಮಧ್ಯದ ಸೇತುವೆ: ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಭಾರತದ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಉದ್ಯಮ ಕ್ಷೇತ್ರಕ್ಕೆ ಬೇಕಾಗುವ ಪ್ರತಿಭೆಗಳನ್ನು ಬೆಳೆಸಲು ಕ್ರೀಡಾ ತರಬೇತಿ, ನಿರ್ವಹಣೆ, ತಂತ್ರಜ್ಞಾನ ಮತ್ತು ವಿಜ್ಞಾನಗಳನ್ನು ಒಗ್ಗೂಡಿಸುವ ಒಂದು ಅಂತರ್ ಶಿಸ್ತೀಯ ಶೈಕ್ಷಣಿಕ ಕ್ರಮವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಸಂಶೋಧನೆ ಮತ್ತು ಇನ್‌ ಕ್ಯುಬೇಶನ್ ಹಬ್, ಉನ್ನತ- ಕಾರ್ಯಕ್ಷಮತೆಯ ತರಬೇತಿ, ಕ್ರೀಡಾ ಮೂಲಸೌಕರ್ಯ ಮತ್ತು ಕ್ರೀಡಾಪಟುಗಳಿಗೆ ಬೆಂಬಲ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಈ ಸಹಭಾಗಿತ್ವದ ಮೂಲಕ ಮಾಹೆ ಕ್ಯಾಂಪಸ್‌ ಗಳಲ್ಲಿ ಉನ್ನತ ಕಾರ್ಯಕ್ಷಮತೆಯ ಕ್ರೀಡಾ ಕೇಂದ್ರಗಳ ಸ್ಥಾಪನೆಯಾಗಲಿದ್ದು, ಇಲ್ಲಿ ವೃತ್ತಿಪರ ಕ್ರೀಡಾಪಟುಗಳಿಗೆ ತಮ್ಮ ತರಬೇತಿಯ ಜೊತೆಗೆ ಶೈಕ್ಷಣಿಕ ಪದವಿಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಮತ್ತು ಕ್ರೀಡಾ ಸಂಬಂಧಿತ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಪ್ ಪಡೆಯುವ ಮತ್ತು ಪ್ರಾಯೋಗಿಕ ಕಲಿಕೆ ಕೈಗೊಳ್ಳುವ ಅವಕಾಶಗಳನ್ನು ಒದಗಿಸಲಾಗುತ್ತದೆ.

ವೃತ್ತಿ ಹಾದಿಯಲ್ಲಿ ಮುಂದುವರಿಯಲು ಸೂಕ್ತವಾದ ವ್ಯವಸ್ಥೆಯ ಅಗತ್ಯವನ್ನು ಮನಗಂಡು ಈ ಸಹಭಾಗಿತ್ವದ ಮೂಲಕ ಸಕ್ರಿಯ ಮತ್ತು ನಿವೃತ್ತ ಕ್ರೀಡಾಪಟುಗಳಿಗೆ ಕಾರ್ಪೊರೇಟ್ ಮತ್ತು ಉದ್ಯಮಗಳಲ್ಲಿ ಉತ್ತಮ ಹುದ್ದೆಗಳನ್ನು ಪಡೆಯಲು ಅಗತ್ಯವಾದ ಕೌಶಲ್ಯಗಳು ಮತ್ತು ಅರ್ಹತೆಗಳನ್ನು ಒದಗಿಸಲಾಗುತ್ತದೆ. ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಉದ್ಯಮದ ಪಾಲುದಾರರು, ಕ್ರೀಡಾ ಸಂಸ್ಥೆಗಳು ಮತ್ತು ನೀತಿ ನಿರೂಪಕರೊಂದಿಗೆ ಸಂಪರ್ಕ ಸಾಧಿಸಿ ಕ್ರೀಡಾ ಕ್ಷೇತ್ರದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ಉಂಟುಮಾಡುವ ಗುರಿಯನ್ನು ಹೊಂದಿವೆ.

ಭಾರತದದಲ್ಲಿ ಕ್ರೀಡಾ ವೃತ್ತಿಪರರಿಗೆ ಬೆಳೆಯುತ್ತಿರುವ ಬೇಡಿಕೆಯ ಪೂರೈಕೆ

ಭಾರತದ ಕ್ರೀಡಾ ಉದ್ಯಮವು ಬಹಳ ತೀವ್ರ ಬೆಳವಣಿಗೆಯನ್ನು ಕಾಣುತ್ತಿದೆ. ಇತ್ತೀಚಿನ ಡೆಲಾಯ್ಟ್-ಗೂಗಲ್ ಅನಾಲಿಸಿಸ್ ಪ್ರಕಾರ ಈ ಕ್ಷೇತ್ರವು ಪ್ರಸ್ತುತ 52 ಬಿಲಿಯನ್ ಡಾಲರ್‌ ಗಳಷ್ಟಿದ್ದು, 2030ರ ವೇಳೆಗೆ 130 ಬಿಲಿಯನ್ ಡಾಲರ್‌ ಗಳನ್ನು ಮೀರಲಿದೆ ಎಂದು ಅಂದಾಜಿಸಲಾಗಿದೆ. ಉತ್ಪಾದನೆ, ತಂತ್ರಜ್ಞಾನ, ನಿರ್ವಹಣೆ ಮತ್ತು ಕಾರ್ಯಾಚರಣೆ ಮುಂತಾದ ವಿಭಾಗಗಳನ್ನು ಒಳಗೊಂಡ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಪ್ರಸ್ತುತ 47 ಲಕ್ಷ ವೃತ್ತಿಪರರು ಉದ್ಯೋಗ ಹೊಂದಿದ್ದು, ಐದು ವರ್ಷಗಳಲ್ಲಿ 1 ಕೋಟಿಗಿಂತ ಹೆಚ್ಚು ಕೌಶಲ್ಯಪೂರ್ಣ ಸಿಬ್ಬಂದಿಯ ಅಗತ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.ಹೆಚ್ಚುತ್ತಿರುವ ಫಿಟ್‌ ನೆಸ್ ಪ್ರಜ್ಞೆ, ವೃತ್ತಿಪರ ಕ್ರೀಡಾ ಲೀಗ್‌ ಗಳ ಆಯೋಜನೆ ಮತ್ತು ಭಾರತೀಯ ಕ್ರೀಡಾಪಟುಗಳು ಜಾಗತಿಕವಾಗಿ ಉತ್ಕೃಷ್ಟ ಸಾಧನೆ ಮಾಡುತ್ತಿರುವುದರಿಂದ ಈ ಬೆಳವಣಿಗೆ ಉಂಟಾಗಿದೆ. ಈ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಉದ್ಯಮಕ್ಕೆ ಅರ್ಹರಾದ ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಕಾರ್ಯಕ್ಷಮತಾ ವಿಶ್ಲೇಷಕರು (ಪರ್ಫಾರ್ಮೆನ್ಸ್ ಅನಾಲಿಸ್ಟ್ ಗಳು), ಫಿಸಿಯೋಥೆರಪಿಸ್ಟ್‌ ಗಳು ಮತ್ತು ಕ್ರೀಡಾ ತಂತ್ರಜ್ಞರ ಅಗತ್ಯವಿದ್ದು, ಈ ಸಹಭಾಗಿತ್ವದ ಮೂಲಕ ಈ ಕೊರತೆಯನ್ನು ನೀಗಲು ಪ್ರಯತ್ನಿಸಲಾಗುತ್ತದೆ.

ಭಾರತದ ಕ್ರೀಡಾ ಪರಂಪರೆಗೆ ಬಲವರ್ಧನೆ

ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತವು ಯಶಸ್ಸು ಸಾಧಿಸುವುದು ಹೆಚ್ಚಿದಂತೆ ವಿಶ್ವ ದರ್ಜೆಯ ಬೆಂಬಲ ವ್ಯವಸ್ಥೆ ಮತ್ತು ಮೂಲಸೌಕರ್ಯದ ಅವಶ್ಯಕತೆ ಉಂಟಾಗಿದೆ. ಹೆಚ್ಚು ಕ್ರೀಡಾಪಟುಗಳು ಉನ್ನತ ಮಟ್ಟವನ್ನು ತಲುಪುತ್ತಿರುವಂತೆ, ದೇಶದಲ್ಲಿ ನಿವೃತ್ತಿಯಾಗುವ ಕ್ರೀಡಾಪಟುಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಲಿದೆ. ಅನೇಕ ಮಾಜಿ ಕ್ರೀಡಾಪಟುಗಳು ನಾಯಕತ್ವ, ಶಿಸ್ತು ಮತ್ತು ದೃಢತೆಯಂತಹ ಅಮೂಲ್ಯ ಕೌಶಲ್ಯಗಳನ್ನು ಹೊಂದಿದ್ದು, ಇವೆಲ್ಲವೂ ಕಾರ್ಪೊರೇಟ್ ಮತ್ತು ಉದ್ಯಮಗಳ ವೃತ್ತಿಗಳಿಗೆ ಸೂಕ್ತವಾಗಿರುವ ಗುಣಗಳಾಗಿವೆ. ಆದರೆ, ಶೈಕ್ಷಣಿಕ ಕ್ವಾಲಿಫಿಕೇಷನ್ ಗಳು ಅವರಿಗೆ ಉತ್ತಮ ಉದ್ಯೋಗ ದೊರಕಿಸುವಲ್ಲಿ ಅಡ್ಡಿಯಾಗುತ್ತದೆ.

ಆ ನಿಟ್ಟಿನಲ್ಲಿ ಶಿಕ್ಷಣ, ಉದ್ಯಮ ಪರಿಣತಿ ಮತ್ತು ಹೊಸತನವನ್ನು ಸಂಯೋಜಿಸುವ ಮೂಲಕ ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಭಾರತದ ಕ್ರೀಡಾ ಸಾಧಕರನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದ್ದು, ಕ್ರೀಡಾ-ಸಂಬಂಧಿತ ಉದ್ಯಮಗಳಲ್ಲಿ ಬದಲಾವಣೆ ಉಂಟುಮಾಡುವುದು ಮತ್ತು ಕ್ರೀಡಾಪಟುಗಳಿಗೆ – ಕ್ರೀಡಾಂಗಣದ ಒಳಗೆ ಮತ್ತು ಹೊರಗೆ – ಸೂಕ್ತ ರೀತಿಯ ವೃತ್ತಿ ಮಾರ್ಗಗಳನ್ನು ಹಾಕಿಕೊಡುವ ಉದ್ದೇಶ ಹೊಂದಿದೆ.

ಈ ಕುರಿತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಅಧ್ಯಕ್ಷರು ಮತ್ತು ಮಣಿಪಾಲ್ ಎಜುಕೇಷನ್ ಆಂಡ್ ಮಣಿಪಾಲ್ ಮೆಡಿಕಲ್ ಗ್ರೂಪ್ ನ ಚೇರ್ ಮನ್ ರಂಜನ್ ಪೈ ಅವರು, “ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ ಸಹಭಾಗಿತ್ವವು  ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಸಹಯೋಗದ ಮೂಲಕ ಕ್ರೀಡಾಂಗಣದಲ್ಲಿ ಮತ್ತು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಹೊಸ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಕಾರ್ಯ ನಡೆಯಲಿದೆ. ಇದು ಆರೋಗ್ಯವಂತ ರಾಷ್ಟ್ರ ನಿರ್ಮಾಣದೆಡೆಗೆ ಮತ್ತು ಸ್ಪರ್ಧಾತ್ಮಕ ಕ್ರೀಡಾ ಸಂಸ್ಕೃತಿ ಬೆಳೆಸುವುದರೆಡೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ವೈಸ್ ಚಾನ್ಸಲರ್ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಮಾತನಾಡಿ , “ಟೆನ್ವಿಕ್ ಜೊತೆಗಿನ ಪಾಲುದಾರಿಕೆಯು ಸಮಗ್ರ ಶಿಕ್ಷಣ ಒದಗಿಸುವ ನಮ್ಮ ಉದ್ದೇಶ ಸಾಕಾರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ವ್ಯಕ್ತಿಗಳನ್ನು ಬೆಳೆಸಲಿದೆ. ಕ್ರೀಡೆ ಎಂದರೆ ಅದೊಂದು ಕೇವಲ ಸ್ಪರ್ಧೆ ಮಾತ್ರವಲ್ಲ; ಕ್ರೀಡೆ ಚಾರಿತ್ರ್ಯ, ಶಿಸ್ತು ಮತ್ತು ನಾಯಕತ್ವವನ್ನು ಬೆಳೆಸುತ್ತದೆ. ಭಾರತವನ್ನು ಕ್ರೀಡಾ ರಾಷ್ಟ್ರವಾಗಿ ಬೆಳೆಸಲು ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ,” ಎಂದು ಹೇಳಿದರು.

ಟೆನ್ವಿಕ್ ಸ್ಪೋರ್ಟ್ಸ್ ನ ಸಹ- ಸಂಸ್ಥಾಪಕರಾದ ಅನಿಲ್ ಕುಂಬ್ಳೆ ಅವರು ಮಾತನಾಡಿ , “15 ವರ್ಷಗಳ ಹಿಂದೆ ಟೆನ್ವಿಕ್ ಸ್ಥಾಪನೆಯಾದಂದಿನಿಂದ ಶಿಕ್ಷಣ ಮತ್ತು ಕ್ರೀಡೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ನನ್ನ ಆಸೆಯಾಗಿತ್ತು. ಮಾಹೆ ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ ಈ ದೃಷ್ಟಿ ಸಾಕಾರಗೊಂಡಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ,” ಎಂದು ಹೇಳಿದರು.

ಟೆನ್ವಿಕ್ ಸ್ಪೋರ್ಟ್ಸ್ ನ ಸಹ- ಸಂಸ್ಥಾಪಕರಾದ ವಸಂತ ಭಾರದ್ವಾಜ್ ಅವರು ಮಾತನಾಡಿ, “ಮಾಹೆ ಜೊತೆಗಿನ ನಮ್ಮ ಸಹಯೋಗವು ಕ್ರೀಡಾ ತರಬೇತಿ, ತಂತ್ರಜ್ಞಾನ, ವಿಜ್ಞಾನ ಮತ್ತು ನಿರ್ವಹಣೆ ವಿಭಾಗದಲ್ಲಿ ಭಾರತೀಯ ಪ್ರತಿಭೆಗಳನ್ನು ಬೆಳೆಸುವ ಕಾರ್ಯ ಮಾಡಲಿದೆ. ಈ ಮೂಲಕ ನಾವು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯನ್ನಾಗಿ ರೂಪಿಸುವ ಗುರಿಯನ್ನು ಹೊಂದಿದ್ದೇವೆ,” ಎಂದು ಹೇಳಿದರು.


administrator