Friday, November 22, 2024

ನೆಟ್‌ ಸೆಟ್ಟರ್ಸ್‌ಗೆ ಮಂಗಳಾ ಪ್ರೀಮಿಯರ್‌ ಲೀಗ್‌

ಬೆಂಗಳೂರು:

ಮಂಗಳಾ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ ಮಂಗಳಾ ಬ್ಯಾಡ್ಮಿಂಟನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಂತೋಷ್‌ ರವರ ನೆಟ್‌ ಸೆಟ್ಟರ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಜುಲೈ 2 ಮತ್ತು 3 ರಂದು ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸ್ಪೋರ್ಟ್ಸ್‌ ಡೆನ್‌ ಗಣೇಶ್‌ ಕಾಮತ್‌ ಮತ್ತು ಮಾಧವ್‌ ನಾಯಕ್‌ ಆಡಿದ ಐದೂ ಪಂದ್ಯಗಳಲ್ಲಿ ಜಯ ಗಳಿಸಿರುವುದು ಚಾಂಪಿಯನ್‌ಷಿಪ್‌ನ ವಿಶೇಷವಾಗಿತ್ತು.

ಫೈನಲ್‌ ಪಂದ್ಯದಲ್ಲಿ ಸಂತೋಷ್ ಅವರ ನೆಟ್‌ ಸೆಟ್ಟರ್ಸ್‌ ತಂಡವು 4-2 ಅಂತರದಲ್ಲಿ  ವಿಶ್ವನಾಥ್‌ ಅವರ ಪೈ ಪ್ರೋ ಸ್ಮಾಶರ್ಸ್‌ ವಿರುದ್ಧ ಜಯ ಗಳಿಸಿ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು. ಫೈನಲ್‌ ಸುತ್ತಿನ ಮೊದಲ ಪಂದ್ಯದಲ್ಲಿ ಪೈ ಪ್ರೊ ಸ್ಮಾಶರ್ಸ್‌ನ ಅರುಶ್‌ ಪತ್ರಾವೋ ಮತ್ತು ಗೌತಮ್‌ 15-14, 15-5 ಅಂತರದಲ್ಲಿ ನೆಟ್‌ ಸೆಟ್ಟರ್ಸ್‌ನ ಒಮರ್‌ ಮತ್ತು ಶಕೀರ್‌ ಇಸ್ಮಾಯಿಲ್‌ ಜೋಡಿಯನ್ನು ಮಣಿಸಿ ಶುಭಾರಂಭ ಕಂಡಿತ್ತು. ಅತ್ಯಂತ ರೋಚಕವಾಗಿ ನಡೆದ ಎರಡನೇ ಪಂದ್ಯದಲ್ಲಿ ಪೈ ಪ್ರೋ ಸ್ಮಾಶರ್ಸ್‌ನ ವಿಶ್ವನಾಥ್‌ ಪೈ ಮತ್ತು ಇಕ್ಬಾಲ್‌ ಜೋಡಿ 15-12, 11-15, 15-12 ಅಂತರದಲ್ಲಿ ನೆಟ್‌ ಸೆಟ್ಟರ್ಸ್‌ನ ಸಲಾಂ ಮತ್ತು ಜಯಶಂಕರ್‌ ಜೋಡಿಯನ್ನು ಮಣಿಸಿ 2-0 ಅಂತರದಲ್ಲಿ ಮೇಲುಗೈ ಸಾಧಿಸಿತ್ತು.

ನೆಟ್‌ ಸೆಟ್ಟರ್ಸ್‌ನ ವನಿತೆಯರ ಡಬಲ್ಸ್‌ ಜೋಡಿ ಶಾಂತ ವಿಜಯ್‌ ಮತ್ತು ದಿವ್ಯಾ ಶೆಟ್ಟಿ ಜೋಡಿ 15-14, 15-12 ಅಂತರದಲ್ಲಿ ಪೈ ಪ್ರೋ ಸ್ಮಾಶರ್ಸ್‌ನ ರಾಧಿಕಾ ಮತ್ತು ಅನುಶ್ರೀ ಜೋಡಿಯನ್ನು ಸೋಲಿಸುವ ಮೂಲಕ ತಕ್ಕ ತಿರುಗೇಟು ನೀಡಿತು. ಈ ಜಯದ ನಂತರ ನೆಟ್‌ ಸೆಟ್ಟರ್ಸ್‌ ತಂಡ ಹಿಂದಿರುಗಿ ನೋಡಲಿಲ್ಲ. ಖಲೀಲ್‌ ಮತ್ತು ಪರಿಮಲ್‌ ಜೋಡಿ 15-8, 15-12 ಅಂತರದಲ್ಲಿ ಸಂಜಯ್‌ ಆರ್‌.ಎಂ. ಮತ್ತು ಇಸ್ಮಾಯಿಲ್‌ ಜೋಡಿಯನ್ನು ಮಣಿಸುವ ಮೂಲಕ ಪಂದ್ಯ 2-2ರಲ್ಲಿ ಸಮಬಲಗೊಂಡಿತು.

ಸೋಲರಿಯದ ಗಣೇಶ್‌, ಮಾಧವ್‌ ಜೋಡಿ: ಆಡಿದ ಐದೂ ಪಂದ್ಯಗಳಲ್ಲಿ ಜಯ ಗಳಿಸಿ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆದ ಗಣೇಶ್‌ ಕಾಮತ್‌ ಮತ್ತು ಮಾಧವ್‌ ನಾಯಕ್‌ ಜೋಡಿ ಐದನೇ ಪಂದ್ಯದಲ್ಲಿ 15-12, 15-8  ಅಂತರದಲ್ಲಿ ಪೈ ಪ್ರೋ ಸ್ಮಾಶರ್ಸ್‌ ರಾಜ್‌ ಪತ್ರಾವೋ ಮತ್ತು ಹೆರಾಲ್ಡ್‌ ವಿರುದ್ಧ ಜಯ ಗಳಿಸಿ ನೆಟ್‌ ಸೆಟ್ಟರ್ಸ್‌ಗೆ ತಂಡಕ್ಕೆ 3-2 ಮುನ್ನಡೆ ತಂದು ಕೊಟ್ಟರು ಮಾತ್ರವಲ್ಲ, ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸತತ ಜಯದ ದಾಖಲೆ ಬರೆದರು.

ನಿರ್ಣಾಯಕ ಆರನೇ ಪಂದ್ಯದಲ್ಲಿ ನೆಟ್‌ಸೆಟ್ಟರ್ಸ್‌ನ ಸಂತೋಷ ಹಾಗೂ ಗೋಪಿನಾಥ್‌ ಜೋಡಿ, ಪೈ ಪ್ರೋ ಸ್ಮಾಶರ್ಸ್‌ನ ಸಂತೋಷ್‌ ಶೆಟ್ಟಿ ಮತ್ತು ನರೇಂದ್ರ ಜೂನಿಯರ್‌ ಜೋಡಿಯನ್ನು 15-9, 15-6 ಅಂಜತರದಲ್ಲಿ ಮಣಿಸಿದರು. ಇದರೊಂದಿಗೆ 4-2 ಅಂತರದಲ್ಲಿ ಮುನ್ನಡೆದ ಸಂತೋಷ್‌ ಅವರ ನೆಟ್‌ ಸೆಟ್ಟರ್ಸ್‌ ತಂಡ ಪ್ರಸಕ್ತ ಸಾಲಿನ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸಂತೋಷ್‌ ಅವರ ನೆಟ್‌ಸೆಟ್ಟರ್ಸ್‌ ತಂಡ ಫೋರ್ಥ್‌ ಬಡ್ಡಿಸ್‌ ತಂಡದ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿ ಫೈನಲ್‌ ಪ್ರವೇಶಿಸಿದರೆ, ದಿನದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳ ಸ್ಮಾಶರ್ಸ್‌  ತಂಡದ ವಿರುದ್ಧ 4-0 ಅಂತರದಲ್ಲಿ ಜಯ ಗಳಿಸಿದ ಪೈ ಪ್ರೋ ಸ್ಮಾಶರ್ಸ್‌ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಎಂಟನೇ ಆವೃತ್ತಿ: ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ ಎಂಟನೇ ಆವೃತ್ತಿಯದ್ದಾಗಿರುತ್ತದೆ. ಎಂಟು ತಂಡಗಳು ಪಾಲ್ಗೊಂಡಿದ್ದು, ಪ್ರತಿ ತಂಡದಲ್ಲಿ 14 ಆಟಗಾರರಿರುತ್ತಾರೆ.

ಚಾಂಪಿಯನ್‌ ತಂಡದ ಆಟಗಾರರು: ಪರಿಮಲ್‌, ಖಲೀಲ್‌, ಗಣೇಶ್‌ ಕಾಮತ್‌, ಫವಾಜ್‌, ಉದಯ್‌ ಆಚಾರ್‌, ಮಾಧವ್‌ ನಾಯಕ್‌, ಜೈಶಂಕರ್‌ ಕುಲಾಲ್‌, ಅಬ್ದುಲ್‌ ಸಲಾಂ, ಸಂತೋಷ್‌, ಗೋಪಿನಾಥ್‌, ಒಮರ್‌, ಶಕೀರ್‌, ಶಾಂತಾ ವಿಜಯ್‌, ದಿವ್ಯಾ ಶೆಟ್ಟಿ.

Related Articles