Sunday, September 8, 2024

ಮಿಲಾಗ್ರಿಸ್‌ ಕಾಲೇಜಿಗೆ ಸಂಭ್ರಮ ತಂದ ಕಿರ್ಮಾನಿ

sportsmail:

1983ರ ವಿಶ್ವಕಪ್‌ ಹೀರೋ, ವಿಕೆಟ್‌ ಕೀಪರ್‌ ಸಯ್ಯದ್‌ ಕಿರ್ಮಾನಿ ಅವರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಿಲಾಗ್ರಿಸ್‌ ಕಾಲೇಜಿನ ಕ್ರೀಡಾ ಅಕಾಡೆಮಿಗೆ ಆಗಿಮಿಸಿ ಯುವ ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ತುಂಬಿದರು.

ಕಳೆದ ಎಡರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿದ್ದ ಕಿರ್ಮಾನಿ ಅವರು ಇಲ್ಲಿಯ ಯುವ ಕ್ರಿಕೆಟಿಗರು ಮತ್ತು ಕ್ರೀಡಾಪಟುಗಳಿಗೆ ಹಿಂದಿನ ಕ್ರಿಕೆಟ್‌ ಮತ್ತು ಕ್ರೀಡಾ ವ್ಯವಸ್ಥೆ ಹೇಗಿತ್ತು ಹಾಗೂ ಈಗ ಹೇಗಿದೆ ಎಂಬುದರ ಬಗ್ಗೆ ಅರಿವು ಮೂಡಿಸಿದ್ದರು.

ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ, ವಿನ್ಸೆಂಟ್‌ ಆಳ್ವಾ ಅವರು ಭಾರತಕ್ಕೆ ಮೊದಲ ಕ್ರಿಕೆಟ್‌ ವಿಶ್ವಕಪ್‌ ತಂದುಕೊಟ್ಟ ತಂಡದ ಆಟಗಾರ, ಜೀವಂತ ದಂತಕತೆ ಕಿರ್ಮಾನಿ ಅವರನ್ನು ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಕಾಲೇಜಿನ ಹಳೆ ವಿದ್ಯಾರ್ಥಿ ಅಲೆನ್‌ ಲೂಯಿಸ್‌ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

 

ಮಿಲಾಗ್ರಿಸ್‌ ಕ್ರೀಡಾ ಅಕಾಡೆಮಿಯ ಸಲಹೆಗಾರ, ಬೆಳ್ಳಿಪ್ಪಾಡಿ ಕ್ರಿಕೆಟ್‌ ಅಕಾಡೆಮಿಯ ತರಬೇತುದಾರ ವಿಜಯ್‌ ಆಳ್ವಾ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ವಿಜಯ್‌ ಆಳ್ವಾ ಅವರು ಈ ಹಿಂದೆಯೂ ಕಿರ್ಮಾನಿ ಅವರನ್ನು ತಮ್ಮ ಅಕಾಡೆಮಿಗೆ ಕರೆಸಿಕೊಂಡು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಿದ್ದರು.

ಕ್ರಿಕೆಟ್‌ ದಿಗ್ಗಜ ಕಿರ್ಮಾನಿ ಅವರನ್ನು ತಮ್ಮ ಕಾಲೇಜಿಗೆ ಕರೆತರುವಲ್ಲಿ ಸಹಕರಿಸಿದ ವಿಜಯ್‌ ಆಳ್ವಾ ಅವರಿಗೆ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್‌ ಆಳ್ವಾ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಕಿರ್ಮಾನಿ

ಯಾವುದೇ ಸಾಧನೆಯ ಹಾದಿಯಲ್ಲಿ ಕಠಿಣ ಪರಿಶ್ರಮ ಮತ್ತು ಅದೃಷ್ಟ ಪ್ರಮುಖ ಪಾತ್ರವಹಿಸುತ್ತದೆ. ಗುರು ಹಿರಿಯರನ್ನು ಗೌರವಿಸಿ, ಶಿಸ್ತಿನ ಹಾದಿಯಲ್ಲಿ ನಡೆಯಬೇಕು. ಕ್ರೀಡೆಯಲ್ಲಿ ತೊಡಗಿಕೊಂಡವರಲ್ಲಿ ಶಿಸ್ತು ಮತ್ತು ದೇಶಭಕ್ತಿ ಹೆಚ್ಚು ಇರುತ್ತದೆ. ಪ್ರತಿಯೊಬ್ಬರೂ ಒಂದಾಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಯ್ಯದ್‌ ಕಿರ್ಮಾನಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

1983ರಲ್ಲಿ ಕಪಿಲ್‌ ದೇವ್‌ ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ ಗೆಲ್ಲುವಲ್ಲಿ ಸಯ್ಯದ್‌ ಕಿರ್ಮಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಎರಡು ದಿನಗಳ ಹಿಂದೆ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ವತಿಯಿಂದ ಕಿರ್ಮಾನಿ ಅವರನ್ನು ಸನ್ಮಾನಿಸಲಾಗಿತ್ತು. 1983ರ ವಿಶ್ವಕಪ್‌ ಸಾಧನೆಯನ್ನು ಆಧರಿಸಿ ನಿರ್ಮಿಸಿದ ಹಿಂದಿ ಚಲನಚಿತ್ರ 83 ಈಗ ದೇಶಾದ್ಯಂತ ಬಿಡುಗಡೆಗೊಂಡಿದ್ದು, ಕ್ರೀಡಾಪ್ರೇಮಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.

Related Articles