Thursday, March 28, 2024

ಮಣಿಕಂಠನ್‌ಗೆ ವಿಶ್ವ ಮಟ್ಟದ ಕಂಚು ಆಸ್ಟ್ರಿಯಾದಲ್ಲಿ ಇತಿಹಾಸ ಬರೆದ ಕನ್ನಡಿಗ

ಸ್ಪೋರ್ಟ್ಸ್ ಮೇಲ್ ವರದಿ

ಆಸ್ಟ್ರಿಯಾದ ಇನ್ಸ್‌ಬ್ರಕ್‌ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್ ಕ್ಲೈಮ್ಬಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಕುಮಾರ್ ಮಣಿಕಂಟನ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಸ್ಪರ್ಧಿಯೊಬ್ಬರು ಮೂರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಮೂರು ಪದಕ ಗೆದ್ದಿರುವುದು ಇದೇ ಮೊದಲು. 2012ರಲ್ಲಿ ಚಿನ್ನ, 2014 ರಲ್ಲಿ ಬೆಳ್ಳಿ ಹಾಗೂ 2018ರಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಣಿಕಂಠನ್ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ.
ಸ್ಪೋರ್ಟ್ ಕ್ಲೈಮ್ಬಿಂಗ್ ನಲ್ಲಿ  ಇದುವರೆಗೂ ಭಾರತದ ಯಾವುದೇ ಸ್ಪರ್ಧಿಗಳು ಈ ರೀತಿಯ ಸಾಧನೆ ಮಾಡಿಲ್ಲ. 6 ವರ್ಷಗಳ ಅವಧಿಯಲ್ಲಿ ಮಣಿಕಂಠನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದಿದ್ದಾರೆ.
ಆಸ್ಟ್ರಿಯಾದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಮಣಿಕಂಠನ್, ಭಾರತದಲ್ಲಿ ಸ್ಪೋರ್ಟ್  ಕ್ಲೈಮ್ಬಿಂಗ್  ಕ್ರೀಡೆಗೆ ಹೆಚ್ಚನ ಪ್ರೋತ್ಸಾಹ ನೀಡುತ್ತಿಲ್ಲ. ಪದಕ ಗೆದ್ದಾಗ ಸುದ್ದಿಯೂ ಆಗುತ್ತಿಲ್ಲ. ಬೇರೆ ಕ್ರೀಡೆಗಳಲ್ಲಿ ಈ ರೀತಿಯ ಸಾಧನೆ ಮಾಡಿದರೆ ಸಾಕಷ್ಟು ಪ್ರಚಾರ ನೀಡುತ್ತಾರೆ. ಗಮನಿಸುತ್ತಾರೆ. ಆದರೆ ನಮ್ಮ ಸಾಧನೆಗೆ ಬೆಲೆಯೇ ಇಲ್ಲದಂತಾಗಿದೆ. ಈ ಕ್ರೀಡೆಗೂ ಪ್ರೋತ್ಸಾಹ ಅಗತ್ಯವಿದೆ. ಕರ್ನಾಟಕ ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೆತ್ನಾ) ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಜೆತ್ನಾದ ಸಮನ್ವಯಕಾರ ಕೀರ್ತಿ ಪಯಾಸ್ ನನ್ನ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದಾಗಿ ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡಲು ಸಾಧ್ಯವಾಗುತ್ತಿದೆ, ಎಂದರು.
ಮಣಿಂಕಠನ್ ಅವರ ಸಾಧನೆಗೆ ಜೆತ್ನಾದ ಸಮನ್ವಯಕಾರ ಕೀರ್ತಿ ಪಯಾಸ್ ಅಭಿನಂದನೆ ಸಲ್ಲಿಸಿದ್ದಾರೆ.

Related Articles