ಏಜೆನ್ಸೀಸ್ ದುಬೈ
ಅಫಘಾನಿಸ್ತಾನ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದ ಭಾರತಕ್ಕೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಶಾಕ್. ಪಂದ್ಯ ಟೈ. ಆದರೆ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ಹಲವು ಕುತೂಹಲದ ಘಟನೆಗಳಿಗೆ ಸಾಕ್ಷಿಯಾಯಿತು.
ಅಫಘಾನಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 49.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಕಳೆದುಕೊಂಡು 252 ರನ್ ಗಳಿಸಿತ್ತು. ಅಂಪೈರ್‌ಗಳು ಎರಡು ಪ್ರಮಾದದ ತೀರ್ಪು ನೀಡದೇ ಇರುತ್ತಿದ್ದರೆ ಭಾರತ ಈ ಪಂದ್ಯದಲ್ಲಿ ಜಯ ಗಳಿಸಿರುತ್ತಿತ್ತು. ಈ ವಿಷಯವನ್ನು ಧೋನಿ ಪಂದ್ಯ ಮುಗಿದ ನಂತರ ಹೇಳಿದ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಅಫಘಾನಿಸ್ತಾನ ತಂಡ ಈ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲೂ ಉತ್ತಮವಾಗಿ ಆಡಿದೆ. ಕೆಲವು ರನೌಟ್ ನಮ್ಮ ಹಿನ್ನಡೆಗೆ ಕಾರಣವಾಯಿತು. ಮತ್ತೊಂದು ಕಾರಣವೂ ನಮ್ಮ ಸೋಲಿಗೆ ಕಾರಣವಾಗಿದೆ. ಆದರೆ ಅದನ್ನು ಹೇಳಿ ಇಲ್ಲಿ ದಂಡ ತೆರಲು ನಾನು ಸಿದ್ಧನಿಲ್ಲ ಎಂದರು.
ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವ ತೊರೆದು ಬಹಳ ಸಮಯವಾಯಿತು. ಆದರೆ ಮಂಗಳವಾರ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಧೋನಿಗೆ ನಾಯಕತ್ವ ನೀಡಲಾಯಿತು. ಭಾರತ ಏಷ್ಯಾ ಕಪ್ ನಲ್ಲಿ ಈಗಾಗಲೇ ಫೈನಲ್ ತಲುಪಿದ್ದರಿಂದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಧೋನಿ ನಾಯಕರಾಗಿ 200ನೇ ಪಂದ್ಯವನ್ನಾಡಿದರು. ಅಲ್ಲದೆ ಸ್ಪಂಪಿಂಗ್ನಲ್ಲಿ 111 ಮ್ಯಾಜಿಕ್ ನಂಬರ್ ತಲುಪಿದರು. ಇದೇ ಮೊದಲ ಬಾರಿಗೆ ಹಿಂದಿನ ಪಂದ್ಯಗಳಲ್ಲಿ ಶತಕ ಸಿಡಿಸಿದ ಆಟಗಾರರಿಗೆ ಭಾರತ ತಂಡ ವಿಶ್ರಾಂತಿ ನೀಡಿತು. (ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ). 2017ರಲ್ಲಿ ನಾಯಕತ್ವ ತೊರೆದಿದ್ದ ಧೋನಿ 696 ದಿನಗಳ ನಂತರ ಏಕದಿನ ಪಂದ್ಯದ ನಾಯಕತ್ವ ವಹಿಸಿದರು.
ದೀಪಕ್ ಚಹಾರ್ ಅಂತಾರಾಷ್ಟ್ರೀಯ ಏಕದಿನಕ್ಕೆ ಪದಾರ್ಪಣೆ ಮಾಡಿದರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿ ಜಯದ ರೂವಾರಿ ಎನಿಸಿದ್ದ ನಾಯಕ ರೋಹಿತ್ ಶರ್ಮಾ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಾಟರ್ ಬಾಯ್ ಆಗಿ ಕಂಡು ಬಂದದ್ದು ವಿಶೇಷವಾಗಿತ್ತು. ವಿರಾಟ್ ಕೊಹ್ಲಿ, ಧೋನಿ ಕೂಡ ಹಿಂದೆ ವಿವಿಧ ಸಂಧರ್ಭಗಳಲ್ಲಿ ವಾಟರ್ ಬಾಯ್ ಕೆಲಸ ಮಾಡಿದ್ದರು. ಅಫಘಾನಿಸ್ತಾನದ ಪರ ಮೊಹಮ್ಮದ್ ಶಹಜಾದ್ 124 ರನ್ ಗಳಿಸಿ ದಾಖಲೆ ಬರೆದರು.
ರವೀಂದ್ರ ಜಡೇಜಾ ಅವರು ಎರಡನೇ ಬಾರಿಗೆ ಟೈ ಆದ ಪಂದ್ಯದಲ್ಲಿ ಕೊನೆಯ ಬ್ಯಾಟ್ಸಮನ್ ಆಗಿರುವುದು ವಿಶೇಷ. 2014ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 314 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತವೂ 314 ರನ್ ಗಳಿಸಿ ಪಂದ್ಯ ಸಮಬಲಗೊಂಡಿತ್ತು. ಈ ಪಂದ್ಯದಲ್ಲೂ ಜಡೇಜಾ ಔಟಾಗದೆ 66 ರನ್ ಗಳಿಸಿ ಪ್ರಭುತ್ವ ಸಾಧಿಸಿದ್ದರು.
ಇದು ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯ ಟೈಗೊಂಡಿದ್ದು, 36ನೇ ಬಾರಿ. ಭಾರತ ಆಡಿದ ಐದು ಪಂದ್ಯಗಳು ಟೈ ಗೊಂಡಿತ್ತು. ಇದು ಏಕದಿನ ಕ್ರಿಕೆಟ್ ನ 4046ನೇ ಪಂದ್ಯ. 1987ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ 212 ರನ್‌ಗಳಿಂದ ಸಮಬಲಗೊಂಡಿತ್ತು. ಆದರೆ ವಿಕೆಟ್ ಕಳೆದುಕೊಂಡ ಆಧಾರದ ಮೇಲೆ ಭಾರತವನ್ನು ವಿಜೇತ ತಂಡವೆಂದು ಘೋಷಿಸಲಾಗಿತ್ತು.