ಬೆಂಗಳೂರು: ಟೆಸ್ಟ್ ಕ್ರಿಕೆಟ್ ಕುತೂಹಲ ಕಡಿಮೆಯಾಗಿ ಏಕದಿನ ಕ್ರಿಕೆಟ್ ಹುಟ್ಟಿತು, ಏಕದಿನವೂ ದೊಡ್ಡದೆಂದು ಚುಟುಕು ಟಿ20 ಕ್ರಿಕೆಟ್ ಜನ್ಮತಾಳಿತು, ಬಳಿಕ 10 ಓವರ್‌ಗಳ ಕ್ರಿಕೆಟ್ ಈಗ ಜನಪ್ರಿಯ. ಇವುಗಳ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹುಟ್ಟು ಹಾಕಿದ 100 ಬಾಲ್ಸ್ Hundred ಕ್ರಿಕೆಟ್ ಇನ್ನು ಕ್ರಿಕೆಟ್ ಜಗತ್ತನ್ನು ಆಳುವ ಸಾಧ್ಯತೆ ಇದೆ. Mumbai Indians owner Mukesh Ambani to buy a team at THE HUNDRED cricket League.
ಭಾರತದ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಸಂಜೀವ್ ಗೊಯೆಂಕಾ ಅವರು ಹಂಡ್ರಡ್ ಲೀಗ್‌ನ ಫ್ರಾಂಚೈಸಿ ಖರೀದಿಸಲು ಮುಂದಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಳೆದ ವಾರ ನಡೆದ ಸಭೆಯಲ್ಲಿ ಈ ಇಬ್ಬರು ಶತಕೋಟಿ ಧನಿಕರು ಫ್ರಾಂಚೈಸಿ ಖರೀದಿಸಲಿದ್ದಾರೆ ಎಂದು ಇಸಿಬಿಯ ಮೂಲಗಳು ತಿಳಿಸಿವೆ. ಫುಟ್ಬಾಲ್ ಜಗತ್ತಿನ ಶ್ರೀಮಂತ ತಂಡ ಮ್ಯಾಂಚೆಸ್ಟರ್ ಯುನೈಟೆಡ್‌ನ ಗ್ಲೇಝರ್ ಸಹೋದರರು ಮತ್ತು ಚಲ್ಸಿಯಾ ಫುಟ್ಬಾಲ್ ಕ್ಲಬ್‌ನ ಜೊನಾಥನ್ ಗೋಲ್ಡ್‌ಸ್ಟೈನ್ ಅವರು ಕೂಡ ಹಂಡ್ರಡ್ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿದ್ದಾರೆ.
100 ಬಾಲ್‌ಗಳ ಕ್ರಿಕೆಟ್ ಹಂಡ್ರಡ್‌ನ ಮೊದಲ ಟೂರ್ನಿ 2021ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಿತು. ಎಂಟು ತಂಡಗಳು ಪಾಲ್ಗೊಂಡಿದ್ದವು.ಅಂಬಾನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವವನ್ನು ಹೊಂದಿದ್ದು ಮಾತ್ರವಲ್ಲದೆ, ಮುಂಬೈ ಇಂಡಿಯನ್ಸ್ ಕೇಪ್ ಟೌನ್, ಮುಂಬೈ ಇಂಡಿಯನ್ ನ್ಯೂಯಾರ್ಕ್ ಮತ್ತು ಮುಂಬೈ ಇಂಡಿಯನ್ಸ್ ಎಮಿರೇಟ್ಸ್ ತಂಡಗಳ ಮಾಲೀಕರೂ ಆಗಿದ್ದಾರೆ, ಹಂಡ್ರಡ್ ಟೂರ್ನಿಯಲ್ಲಿ ಮುಖೇಶ್ ಅಂಬಾನಿಯವರು ಲಂಡನ್ ಸ್ಪಿರಿಟ್ ತಂಡವನ್ನು ಖರೀದಿಸುವ ಸಾಧ್ಯತೆ ಇದ್ದು, ಹಾಗಾದಲ್ಲಿ ತಂಡದ ಹೆಸರನ್ನು ಮುಂಬೈ ಇಂಡಿಯನ್ಸ್ ಲಂಡನ್ ಎಂದು ಬದಲಾಯಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
RPSG ಗ್ರೂಪ್‌ನ ಸ್ಥಾಪಕ ಗೊಯೆಂಕಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಖನೌ ಸೂಪರ್ ಜಯಂಟ್ಸ್ ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್‌ನಲ್ಲಿ ಡರ್ಬಾನ್ಸ್ ಸೂಪರ್ ಜಯಂಟ್ಸ್ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.
ಏನಿದು “ದಿ ಹಂಡ್ರಡ್” ಕ್ರಿಕೆಟ್?
ಹೆಸರೇ ಹೇಳುವಂತೆ ಇದು 100 ಎಸೆತಗಳಿಂದ ಕೂಡಿದ ಕ್ರಿಕೆಟ್ ಟೂರ್ನಿ. ಟಿ20ಯಲ್ಲಿ 120 ಎಸೆತಗಳಿದ್ದರೆ ಇಲ್ಲಿ ಬರೇ 100 ಎಸೆತಗಳು. ಇದು ಎರಡೂವರೆ ಗಂಟೆಗಳ ಕಾಲ ನಡೆಯುವ ಪಂದ್ಯ. 2016ರಲ್ಲಿ ಈ ಮಾದರಿಯ ಕ್ರಿಕೆಟ್ ಇಂಗ್ಲೆಂಡ್‌ನಲ್ಲಿ ಜನ್ಮ ತಾಳಿತು. ಇಲ್ಲಿ ಓವರ್‌ಗೆ ಕೇವಲ 5 ಬಾಲ್.(ಎಸೆತ). ಪ್ರತಿಯೊಬ್ಬ ಬೌಲರ್‌ಗೂ 4 ಓವರ್ ಎಸೆಯಲು ಅವಕಾಶವಿರುತ್ತದೆ. ಒಬ್ಬ ಬೌಲರ್ ಒಂದು ತುದಿಯಿಂದ ಎರಡು ಓವರ್‌ಗಳನ್ನು ಎಸೆಯಬಹುದು. ಓವರ್‌ನ ನಡುವೆ ಬ್ಯಾಟ್ಸ್‌ಮನ್‌ಗಳು ಸೈಡ್ ಬದಲಾವಣೆ ಮಾಡುವಂತಿಲ್ಲ. ನೋಬಾಲ್ ಎಸೆದರೆ 2 ರನ್ ದಂಡ. ಮತ್ತು ಫ್ರೀ ಹಿಟ್. ಒಬ್ಬ ಆಟಗಾರ ಔಟ್ ಆದ ಬಳಿಕ ಇನ್ನೊಬ್ಬ ಆಟಗಾರ ಕ್ರೀಸ್‌ಗೆ ಬರಲು ಇರುವ ಕಾಲಾವಕಾಶ 60 ಸೆಕೆಂಡುಗಳು. ಸ್ಯಾಮ್ ಕರನ್, ಆಡಂ ಮಿಲ್ನೆ, ಇಮ್ರಾನ್ ತಾಹೀರ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್ ಮೊದಲಾದ ಆಟಗಾರರು ಈಗಾಗಲೇ ಈ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ.