ಸ್ಪೋರ್ಟ್ಸ್ ಮೇಲ್ ವರದಿ ಮೈಸೂರು
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಬಿಜಾಪುರ ಬುಲ್ಸ್ ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ ಷಿಪ್ ಅನ್ನು ಎರಡನೇ ಬಾರಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲೂ ಜಯ ಗಳಿಸಿ ಕೇವಲ ಒಂದು ಪಂದ್ಯದಲ್ಲಿ ಸೋಲನುಭವಿಸಿದ ಬ್ಲಾಸ್ಟರ್ಸ್ ತಂಡಕ್ಕೆ ಆ ಒಂದು ಸೋಲೇ ಟ್ರೋಫಿಯನ್ನು ಕಳೆದುಕೊಳ್ಳುವಂತೆ ಮಾಡಿತು.
ಮಳೆಯ ಕಾರಣ ಬೆಂಗಳೂರು ಬ್ಲಾಸ್ಟರ್ಸ್ ಒಂದು ಪಂದ್ಯದಲ್ಲಿ ಅಂಕ ಹಂಚಿಕೊಂಡಿತ್ತು. ಪ್ರತಿಯೊಂದು ಪಂದ್ಯದಲ್ಲೂ ಉತ್ತಮವಾಗಿ ಆಡಿದ ಬ್ಲಾಸ್ಟರ್ಸ್ ಪಡೆ ಫೈನಲ್ ಪಂದ್ಯದಲ್ಲಿ ರನ್ ಗಳಿಸುವಲ್ಲಿ ವಿಫಲವಾಯಿತು. ಕೇವಲ 101 ರನ್ ಗಳಿಸಿ ಆಲ್ ಔಟ್ ಆಗುವುದರೊಂದಿಗೆ ಬಿಜಾಪುರ ಬುಲ್ಸ್ ಗೆ ಜಯದ ಹಾದಿ ಸುಳಭವಾಯಿತು. ಬುಲ್ಸ್ ಪಡೆ 13.5 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.ಸೆಮಿಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತ ಗಳಿಸಿಯೂ ಬ್ಲಾಸ್ಟರ್ಸ್ ಪಡೆ ಜಯ ಗಳಿಸಿತ್ತು. ಆದರೆ ಫೈನಲ್ ನಲ್ಲಿ ನಾಯಕ ರಾಬಿನ್ ಉತ್ತಪ್ಪ ಅವರ ಯೋಜನೆ ತಲೆಕೆಳಗಾಯಿತು.ಅಲ್ಲ್ರೌಂಡರ್ ಎಂ ಜಿ ನವೀನ (19/2) ಹಾಗೂ ಕೆ ಪಿ ಅಪ್ಪಣ್ಣ (16/3) ಉತ್ತಮ ಬೌಲಿಂಗ್ ಪ್ರದರ್ಶಿಸಿ ಬ್ಲಾಸ್ಟರ್ಸ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್ ನಲ್ಲಿ ಮಿಂಚಿದ ನವೀನ್ ಬ್ಯಾಟಿಂಗ್ ನಲ್ಲೂ 43 ರನ್ ಗಳಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.