Thursday, November 21, 2024

ಬೈಂದೂರಿನ ಮಣಿಕಂಠ ದೇಶದ ಅತ್ಯಂತ ವೇಗದ ಓಟಗಾರ

ಬೆಂಗಳೂರು: ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ National Open Athletics Championship ಉಡುಪಿ ಜಿಲ್ಲೆಯ ಬೈಂದೂರಿನ ಬಾಡ ಗ್ರಾಮದ ಮಣಿಕಂಠ ಎಚ್‌. ಎಚ್‌. 100 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದು ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ಮೊದಲ ದಿನದ ಸೆಮಿಫೈನಲ್‌ಲ್ಲಿ 10.23 ಸೆಕೆಂಡುಗಳಲ್ಲಿ ಗುರಿ ತಲುಪಿಸ ಮಣಿಕಂಠ ಏಳು ವರ್ಷಗಳ ಹಿಂದಿನ ದಾಖಲೆ ಮುರಿದು ಭಾರತದ ಅತ್ಯಂತ ವೇಗದ ಓಟಗಾರರೆನಿಸಿದರು. ನಂತರ ಫೈನಲ್‌ ಸ್ಪರ್ಧೆಯಲ್ಲಿ 10.42 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. “ಫೈನಲ್‌ ನಲ್ಲಿ ಗಾಳಿಯಿಂದಾಗಿ ಅದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ,” ಎಂದು ಮಣಿಕಂಠ sportsmail ಗೆ ತಿಳಿಸಿದ್ದಾರೆ.

ಬೈಂದೂರಿನ ಬಡ ಕುಟುಂಬದಲ್ಲಿ ಜನಿಸಿದ ಮಣಿಕಂಠಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ. ಉಡುಪಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ ಮಣಿಕಂಠಗೆ ಬೆಂಗಳೂರಿನಲ್ಲಿ ಕ್ರೀಡಾ ಹಾಸ್ಟೆಲ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿತು. ಅದೇ ಸಂದರ್ಭದಲ್ಲಿ ಭಾರತದ ಸೇನೆಯಲ್ಲಿ ಉದ್ಯೋಗವೂ ಸಿಕ್ಕಿತು. ಯೋಧನಾಗಿರುವ ಮಣಿಕಂಠಗೆ ಸರ್ವಿಸಸ್‌ ಉತ್ತಮ ಪ್ರೋತ್ಸಾಹವನ್ನು ನೀಡಿತು. ಪರಿಣಾಮ ಪ್ರತಿಯೊಂದು ಹಂತದಲ್ಲೂ ಯಶಸ್ಸು ಅವರ ಪಾಲಾಯಿತು.

“ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ದಾಖಲೆಯನ್ನು ಮತ್ತೊಮ್ಮೆ ಮುರಿಯವ ಗುರಿ ಹೊಂದಿರುವೆ, ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ಗಳಲ್ಲಿ ಪದಕ ಗೆದ್ದು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿ ಇದೆ,” ಎಂದು ಮಣಿಕಂಠ ಹೇಳಿದ್ದಾರೆ.

Related Articles